(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 1
ನಗರದಲ್ಲಿ ಬಿಸಿಲಿನ ಕುದಿಯಿಂದಾಗಿ ಜನರು ಹೈರಾಣಾಗುತ್ತಿದ್ದು, ಅಲ್ಲಲ್ಲಿ ಕಾಣಸಿಗುವ ಮರ-ಗಿಡಗಳು ಓಪನ್ ಎಸಿಯಂತಾಗಿವೆ. ಉರಿಬಿಸಿಲಿನಲ್ಲೂ ಎಪಿಎಂಸಿಯ ಆವರಣದಲ್ಲಿ ವಿವಿಧೆಡೆ ಇರುವ ಮರಗಳು ಸಾರ್ವಜನಿಕರಿಗೆ ಹಾಗೂ ಕಾರ್ಮಿಕರ ವಿಶ್ರಾಂತಿಗೆ ಅನುಕೂಲವಾಗಿವೆ. ಎಪಿಎಂಸಿಯ ಶ್ರಮಜೀವಿ ಹಮಾಲರ ಸಂಘದ ಬಳಿ ಒಂದೇ ಕಡೆ ನಾಲ್ಕಾರು ಮರಗಳು ಇದ್ದು ಬಿಸಿಲಲ್ಲೂ ಭರಪೂರ ಚೆಲ್ಲಿವೆ. ಈ ನೆರಳಿಗೆ ಸಾರ್ವಜನಿಕರು ವಿಶ್ರಾಂತಿ ಪಡೆಯುತ್ತಿದ್ದುದು ಬುಧವಾರ ಕಂಡುಬಂತು.
“ಒಂದೇ ಸಮನೆ ಸುಡು ಬಿಸಿಲಿಗೆ ಮನೆಯ ತಾರಸಿಗಳು ಹೆಂಚಿನಂತಾಗುತ್ತಿವೆ. ರಾತ್ರಿಯಾಗುತ್ತಿದ್ದಂತೆ ಕುದಿ ಹೆಚ್ಚಿ ಎಷ್ಟೇ ಫ್ಯಾನು ಹಾಕಿದರೂ ಬಿಸಿ ಗಾಳಿ ಬರುತ್ತದೆಯೇ ಹೊರತು, ತಂಪು ಅನಿಸುತ್ತಿಲ್ಲ. ಎಸಿ ಹಾಕಿದರೂ ನೆಮ್ಮದಿ ಸಿಗುತ್ತಿಲ್ಲ. ಗಿಡ-ಮರಗಳ ಗಾಳಿಯ ಮುಂದೆ ಯಾವ ಎಸಿ ಇಲ್ಲದಂತಾಗಿದೆ. ಮರದ ನೆರಳು ಕಂಡರೆ ಇಲ್ಲಿಯೇ ಕುಳಿತುಕೊಳ್ಳಬೇಕು ಅನಿಸುತ್ತದೆ” ಎಂದು ಸಾರ್ವಜನಿಕರೊಬ್ಬರು ಹೇಳುತ್ತಾರೆ. ಕೆಲವೊಂದು ಕಡೆ ತೋಪಿನಂತಿರುವ ಬೃಹತ್ ಮರಗಳು ಉರಿಬಿಸಿಲಿನಲ್ಲೂ ತಲೆಎತ್ತಿ ನೆರಳಿನ ದಾಸೋಹ ಮಾಡುತ್ತಿವೆ.
ಬಿಸಿ ಗಾಳಿಯಿಂದ ನಿದ್ರಾಭಂಗ !
ಬೆಳಿಗ್ಗೆ 8 ಗಂಟೆಯಿಂದಲೇ ಬಿಸಿಲು ಚುರುಕು ಮೂಡಿಸುತ್ತಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಧಗೆ ಅಂಗಾಲಿನಿಂದ ಹಣ್ಣೆತ್ತಿವರೆಗೆ ಸುಡುತ್ತಿದೆ. ಆ ನಂತರ ರಾತ್ರಿ ಬಿಸಿಗಾಳಿ ನಿದ್ರಾಭಂಗ ಮಾಡುತ್ತಿದೆ. ವಿದ್ಯುತ್ ಕೈಕೊಟ್ಟು ಸ್ವಲ್ಪ ಹೊತ್ತು ಫ್ಯಾನು ತಿರುಗದಂತಾದರೇ ಕುದಿ ಆವರಿಸಿ ಉಸಿರುಗಟ್ಟಿದಂತಹ ಅನುಭವವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಚಿಕ್ಕಮಕ್ಕಳಂತೂ ವಾತಾವರಣದಲ್ಲಿ ಬಿಸಿ ಗಾಳಿಯಿಂದಾಗಿ ಅಳುವುದು, ಚೀರುವುದು ಸಾಮಾನ್ಯವಾಗಿದೆ ಎಂದು ಹಲವರು ಹೇಳುತ್ತಾರೆ.