ಸಿಂಧನೂರು: ಆಗಸ್ಟ್‌ 9ರಂದು ʼಬಹುರಾಷ್ಟ್ರೀಯ ಕಂಪನಿಗಳೇ ದೇಶ ಬಿಟ್ಟು ತೊಲಗಿ’ ಹೋರಾಟ, ಪ್ರತಿಕೃತಿ ದಹನ

Spread the love

ನಮ್ಮ ಸಿಂಧನೂರು, ಆಗಸ್ಟ್‌ 8
ʼಬ್ರಿಟೀಷರೇ ಭಾರತ ಬಿಟ್ಟು ತೊಲಗಿʼ-ಕ್ವಿಟ್‌ ಇಂಡಿಯಾ ಚಳವಳಿಯ ನೆನಪಿಗಾಗಿ, ಆಗಸ್ಟ್ 9, 2024ರಂದು ‘ಬಹುರಾಷ್ಟ್ರೀಯ ಕಂಪನಿಗಳೇ ದೇಶ ಬಿಟ್ಟು ತೊಲಗಿ’ ಘೋಷವಾಕ್ಯದೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ದೇಶಾದ್ಯಂತ ಹೋರಾಟಕ್ಕೆ ಕರೆ ನೀಡಿದ್ದು, ಅದರ ಭಾಗವಾಗಿ ಸಿಂಧನೂರಿನಲ್ಲಿಯೂ ‘ಬಹುರಾಷ್ಟ್ರೀಯ ಕಂಪನಿಗಳ ಭೂತ ಸುಡುವ’ ಮೂಲಕ ರೈತ ವಿರೋಧಿ ಕಾರ್ಪೊರೇಟ್ ಕಂಪನಿಗಳನ್ನು ದೇಶ ಬಿಟ್ಟು ತೊಲಗಿಸಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ತಹಸೀಲ್ದಾರ್‌ ಮೂಲಕ ರಾಷ್ಟ್ರಪತಿಗಳಿಗೆ ಮನವಿ ರವಾನಿಸಲಾಗುವುದು ಎಂದು ರೈತ ವಿರೋಧಿ ಕೃಷಿ ಕಾನೂನುಗಳ ರದ್ದತಿ ಹೋರಾಟ ಸಮಿತಿ ಸಿಂಧನೂರು ಸಂಚಾಲಕರಾದ ಬಸವಂತರಾಯಗೌಡ ಕಲ್ಲೂರು, ಚಂದ್ರಶೇಖರ ಗೊರಬಾಳ, ಡಿ.ಎಚ್‌.ಕಂಬಳಿ ಹಾಗೂ ಶರಣಪ್ಪ ಮರಳಿ ಅವರು ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಅಂದು ಬೆಳಿಗ್ಗೆ 10.30 ಗಂಟೆಗೆ ಪ್ರವಾಸಿ ಮಂದಿರದಿಂದ ಬಹುರಾಷ್ಟ್ರೀಯ ಕಂಪನಿಗಳ ಭೂತದ ಪ್ರತಿಕೃತಿಯ ಅಣಕು ಶವಯಾತ್ರೆಯನ್ನು ಗಾಂಧಿ ಸರ್ಕಲ್‌ ವರೆಗೆ ಕೈಗೊಂಡು ನಂತರ ಪ್ರತಿಕೃತಿಯನ್ನು ಸುಡಲಾಗುವುದು ಎಂದು ಹೇಳಿದ್ದಾರೆ. ಈ ಹೋರಾಟದಲ್ಲಿ ರೈತರು, ಕಾರ್ಮಿಕರು, ವಿದ್ಯಾರ್ಥಿ ಯುವಜನರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.
ʼಕೃಷಿ ವಲಯವನ್ನು ಕಾರ್ಪೋರೇಟಿಕರಣಗೊಳಿಸುವ ಹುನ್ನಾರʼ
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 200 ವರ್ಷಗಳ ಕಾಲ ದೇಶದಲ್ಲಿ ಆಳ್ವಿಕೆ ನಡೆಸಿ ದೇಶವನ್ನು ಇನ್ನುವರೆಗೂ ಸರಿದಾರಿಗೆ ಮರಳದಂತೆ ಹಾಳುಗೆಡವಿದೆ. ಆದರೆ ಇದರಿಂದ ಎಚ್ಚೆತ್ತುಕೊಳ್ಳದ ಆಡಳಿತಾರೂಢ ಕೇಂದ್ರದ ಬಿಜೆಪಿ ಸರ್ಕಾರ ಇಂದು ಸಾವಿರಾರು ಬಹುರಾಷ್ಟ್ರೀಯ ಕಂಪನಿಗಳನ್ನು ರತ್ನಗಂಬಳಿ ಹಾಸಿ ಕರೆಯುವ ಮೂಲಕ ಇಲ್ಲಿನ ಸಂಪತ್ತನ್ನು ದೋಚಿಕೊಂಡು ಹೋಗಲು ಮುಕ್ತ ಅವಕಾಶ ಮಾಡಿಕೊಟ್ಟಿದೆ. ಕಾರ್ಪೋರೇಟ್ ಕಂಪನಿಗಳ ಜೊತೆಗೆ ಕೈಜೋಡಿಸಿದ ಕೇಂದ್ರ ಸರ್ಕಾರ, ಅವರ ಅಣತಿಯಂತೆ ನೀತಿ-ನಿಯಮಗಳನ್ನು ರೂಪಿಸುತ್ತಿದ್ದು, ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಗೊಬ್ಬರ, ಬೀಜ, ಕೀಟನಾಶಕ ಸೇರಿದಂತೆ ಇನ್ನಿತರೆ ಕೃಷಿ ಉಪಕರಣಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಿದೆ. ಪ್ರತಿ ವರ್ಷ ಕೇಂದ್ರ ಸರ್ಕಾರ ಮಂಡಿಸುವ ಬಜೆಟ್ ಶ್ರೀಮಂತ ವರ್ಗಕ್ಕೆ ಮೀಸಲಾಗಿದ್ದು, ರೈತರು ಹಾಗೂ ದುಡಿಯುವ ವರ್ಗವನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಂಬಾನಿ, ಅದಾನಿ, ಟಾಟಾ ಹಾಗೂ ಬಿರ್ಲಾ ಸೇರಿದಂತೆ ಕಾರ್ಪೋರೇಟ್ ಕಂಪನಿಗಳ ಕೈಗೊಂಬೆಗಳಂತೆ ವರ್ತಿಸುತ್ತಿದ್ದು, ರೈತ ವಿರೋಧಿ ಕಾಯ್ದೆ-ಕಾನೂನುಗಳನ್ನು ಜಾರಿ ಮಾಡುವ ಮೂಲಕ ಇಡೀ ಕೃಷಿ ವಲಯವನ್ನು ಕಾರ್ಪೋರೇಟಿಕರಣಗೊಳಿಸಲಾಗುತ್ತಿದೆ. ಇದರಿಂದ ದೇಶದಲ್ಲಿ ರೈತರ ಆತ್ಮಹತ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ಸಂಘಟಕರು ದೂರಿದ್ದಾರೆ.


Spread the love

Leave a Reply

Your email address will not be published. Required fields are marked *