ನಮ್ಮ ಸಿಂಧನೂರು, ಆಗಸ್ಟ್ 12
ಕ್ರಸ್ಟ್‌ಗೇಟ್‌ಗಳ ಕಾಲಕಾಲಕ್ಕೆ ಪರಿಶೋಧನೆ ಮತ್ತು ಅಗತ್ಯ ನಿರ್ವಹಣೆಯಲ್ಲಿ ಉಂಟಾದ ಲೋಪದಿಂದಾಗಿ ತುಂಗಭದ್ರಾ ಅಣೆಕಟ್ಟೆಯ 19ನೇ ಗೇಟ್ ಚೈನ್ ಲಿಂಕ್ ಮುರಿದು ಹೋಗಿ ಜಲಾಶಯದಲ್ಲಿನ ನೀರು ವ್ಯರ್ಥವಾಗಿ ಹರಿದು ಹೋಗಲು ಕಾರಣವಾಗಿದೆ. ಈ ಅವಘಡ ಹಿಂದಿರುವ ಲೋಪದೋಷಗಳ ಕುರಿತು ತನಿಖೆಗೊಳಪಡಿಸಿ, ಜಲಸಂಪನ್ಮೂಲ ಇಲಾಖೆಯ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ಕರ್ನಾಟಕ ರೈತ ಸಂಘ-(AIKKS) ತಾಲೂಕು ಉಪಾಧ್ಯಕ್ಷ ಹನುಮಂತಪ್ಪ ಗೋಡಿಹಾಳ ಆಗ್ರಹಿಸಿದ್ದಾರೆ.
ಈ ಕುರಿತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಕಳೆದ 2019 ರಲ್ಲಿ ಆಣೆಕಟ್ಟೆಯ ಬಳಿ ಗೇಟ್ ಮುರಿದು ಅವಘಡ ಸಂಭವಿಸಿದಾಗ, ಅಪಾರ ಪ್ರಮಾಣದ ನೀರು ನದಿಗೆ ಹರಿದುಹೋಗಿರುವ ಕಹಿ ಅನುಭವವನ್ನು ಜಲ ಸಂಪನ್ಮೂಲ ಇಲಾಖೆಯ ಆಡಳಿತ ಮಂಡಳಿಯು ಗಂಭೀರವಾಗಿ ಪರಿಗಣಿಸದೇ ಇರುವುದು ಈ ದುರಂತವು ಪುನಃ ಮರುಕಳಿಸಿದಂತಾಗಿದೆ. ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆಯ ಸಂದರ್ಭದಲ್ಲಿ ತುಂಗಾ ಮತ್ತು ಭದ್ರಾ ನದಿಗಳ ನೀರಿನ ಒಳಹರಿವು ಹೆಚ್ಚಳವಾಗುವ ಸಾಧ್ಯತೆಗಳಿರುವಾಗ ನೀರಿನ ರಭಸಕ್ಕೆ ಅಣೆಕಟ್ಟಿನ ಕ್ರಸ್ಟ್ ಗೇಟ್ ಗಳಿಗೆ ಉಂಟಾಗಬಹುದಾದ ಹಾನಿಯನ್ನು ತಡೆಗಟ್ಟಲು ಅನುಸರಿಬೇಕಾದ ಅಗತ್ಯ ಕ್ರಮ ಮತ್ತು ನೆರವುಗಳು ಸಕಾಲದಲ್ಲಿ ಇಲ್ಲದೆ ಹೋಗಿರುವುದು ಎದ್ದು ಕಾಣುತ್ತಿದೆ. ಸದರಿ ಇಲಾಖೆ ಬೇಜವಾಬ್ದಾರಿ ನಡೆಯು ಖಂಡನೀಯವಾಗಿದೆ” ಎಂದು ಹೇಳಿದ್ದಾರೆ.
“ಈ ಅವಘಡವನ್ನು ಸರಿಪಡಿಸಲು ಅಣೆಕಟ್ಟೆಯಲ್ಲಿ ಸಂಗ್ರಹವಾದ ಸುಮಾರು 60 ಟಿಎಂಸಿ ನೀರು ನದಿಗೆ ಹರಿಬಿಡಬೇಕಿದ್ದು, ಅಣೆಕಟ್ಟು ವ್ಯಾಪ್ತಿಯ ರೈತರಲ್ಲಿ ಹಾಗೂ ಕುಡಿಯುವ ನೀರಿಗೆ ಅವಲಂಬಿತವಾದ ಸಮಸ್ತ ಗ್ರಾಮಗಳ ಜನರಲ್ಲಿ ಆತಂಕ ಹೆಚ್ಚಿದೆ. ಅಣೆಕಟ್ಟೆಯ ವ್ಯಾಪ್ತಿಗೆ ಬರುವ ಕರ್ನಾಟಕ, ತೆಲಂಗಾಣ, ಆಂದ್ರ ಪ್ರದೇಶ ರಾಜ್ಯಗಳ ಅಂದಾಜು 17 ಲಕ್ಷ ಎಕರೆ ನೀರಾವರಿ ಪ್ರದೇಶದ ರೈತರ ಮುಂಗಾರು ಮತ್ತು ಹಿಂಗಾರು ಕೃಷಿ ಬೆಳೆಗಳ ಭವಿಷ್ಯ ಡೋಲಾಯಮಾನ ಸ್ಥಿತಿಯಲ್ಲಿದೆ. ಈ ಅವಘಡವನ್ನು ಸರಿಪಡಿಸಲು ಮತ್ತು ನೀರಿನ ಸಂಗ್ರಹದ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ಸರಕಾರವು ತುರ್ತು ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಬೇಕು. ಬಹುಸಂಖ್ಯಾತ ರೈತರ ಬೆಳೆ ನಷ್ಟವನ್ನು ತಪ್ಪಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.
“ಈಗಾಗಲೇ ರಾಜ್ಯದ ರೈತರು ಬರಗಾಲದಿಂದ ಕಂಗೆಟ್ಟು ಹೋಗಿದ್ದಾರೆ. ಅತಿವೃಷ್ಟಿ ಮತ್ತು ಅನಾವೃಷ್ಟಿಗಳು ರೈತರನ್ನು ಬಾಧಿಸಿದೆ. ಅನೇಕ ಬಾರಿ ಬೆಳೆ ನಷ್ಟಕ್ಕೆ ತುತ್ತಾಗಿ, ಸಾಲಗಳ ಬಾದೆ ಅನುಭವಿಸಿದ್ದಾರೆ. ಆದ್ದರಿಂದ ಕ್ರಸ್ಟ್ ಗೇಟ್ ಗಳ ಹಾಗೂ ತಾಂತ್ರಿಕ ಪರಿಕರಗಳ ಅವಘಡವನ್ನು ತಪ್ಪಿಸಲು ನುರಿತ ತಜ್ಞರ ತಂಡದ ಮೂಲಕ ಗುಣಮಟ್ಟವನ್ನು ಕಾಪಾಡಬೇಕು. ರೈತರ ಹಿತಾಸಕ್ತಿ ಮತ್ತು ಕುಡಿಯುವ ನೀರಿನ ಅವಲಂಬಿತ ಸಮಸ್ತ ಜನರ ಹಿತಾಸಕ್ತಿ ರಕ್ಷಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಲು ಎಲ್ಲಾ ರೈತಪರ, ಜನಪರ ಶಕ್ತಿಗಳು ಧ್ವನಿ ಮೊಳಗಿಸಬೇಕೆಂದು” ಎಂದು ಗೋಡಿಹಾಳ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.