ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 22
ನಗರದ ಬಸವ ಸರ್ಕಲ್ ಬಳಿ ಕುಷ್ಟಗಿ ಮಾರ್ಗದ ಹೆದ್ದಾರಿಯನ್ನು ಕೆಲ ದಿನಗಳ ಹಿಂದೆ ರಾತ್ರೋ ರಾತ್ರಿ ಅಗೆದು ಮರಂ ಗುಡ್ಡೆ ಹಾಕಿದ್ದಾರೆ. ಇದರಿಂದ ಸಾರ್ವಜನಿಕರ ವಾಹನ ಸೇರಿ ಆಂಬುಲೆನ್ಸ್ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಈ ರಸ್ತೆ ಮಾರ್ಗದಲ್ಲಿ 9ಕ್ಕೂ ಹೆಚ್ಚು ಆಸ್ಪತ್ರೆಗಳಿದ್ದು, ರೋಗಿಗಳನ್ನು ಸಾಗಿಸಲು ಕುಟುಂಬದವರಷ್ಟೇ ಅಲ್ಲ. ಆಂಬುಲೆನ್ಸ್ ಚಾಲಕರೂ ಆತಂಕ ಎದುರಿಸುತ್ತಿದ್ದಾರೆ.
ರಾತ್ರೋ ರಾತ್ರಿ ಹೆದ್ದಾರಿಯಲ್ಲಿ ಮರಂ ಗುಡ್ಡೆ ?
ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿಯನ್ನು ರಾತ್ರೋ ರಾತ್ರಿ ಅಗೆದು ಮನಬಂದಂತೆ ಮರಂ ಗುಡ್ಡೆಹಾಕಿ ಕೈಬಿಡಲಾಗಿದ್ದು, ಮಳೆ ಬಂದರೆ ಕಂಕರ್ ತೇಲಿ, ಕೆಸರು ಉಂಟಾಗುವುದರಿಂದ ವಾಹನ ಚಾಲನೆಗೆ ಅಡಚಣೆಯಾಗುತ್ತಿದೆ. ಇನ್ನೂ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ವಾಹನ ಸವಾರರು ಬೀಳುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿಯೇ ರಾಜ್ಯ ಹೆದ್ದಾರಿಯನ್ನು ಅಗೆದರೂ ಇಲ್ಲಿಯವರೆಗೂ ಸಂಬಂಧಿಸಿದ ಇಲಾಖೆಯವರು ಮಾತ್ರ ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

‘ಲೋಕೋಪಯೋಗಿ ಇಲಾಖೆ ಏನು ಮಾಡುತ್ತಿದೆ ?’
“ಬೀದಿ ಬದಿ ವ್ಯಾಪಾರಿಗಳು ರಸ್ತೆ ಅತಿಕ್ರಮಿಸಿದ್ದರಿಂದ ಅಪಘಾತಗಳು ಆಗುತ್ತಿವೆ ಎಂದು, ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದ ಡಬ್ಬಾ ಅಂಗಡಿಗಳವರನ್ನು ನೋಟಿಸ್ ಕೊಟ್ಟು ಇಲಾಖೆಯವರು ಕಳೆದ ಡಿಸೆಂಬರ್‌ನಲ್ಲಿ ಒಕ್ಕಲೆಬ್ಬಿಸಿದರು. ಹಾಗಾದರೆ ಹೆದ್ದಾರಿಯನ್ನೇ ಮನಬಂದಂತೆ ಯಾರೋ ಅಗೆದು ಮರಂ ಗುಡ್ಡೆ ಹಾಕಿದ್ದಾರೆ. ಈ ಕಾರಣದಿಂದಾಗಿ ಈ ಮಾರ್ಗದಲ್ಲಿ ದಿನವೂ ಒಂದಿಲ್ಲೊಂದು ಅಪಘಾತಗಳು ಸಂಭವಿಸುತ್ತಿವೆ. ಇನ್ನೂ ಆಸ್ಪತ್ರೆಗೆ ಆಂಬುಲೆನ್ಸ್ನಲ್ಲಿ ರೋಗಿಗಳನ್ನು ಕರೆತರಲು ಜೀವಭಯ ಎದುರಿಸುವಂತಾಗಿದೆ. ನಗರದ ಹೃದಯ ಭಾಗದಲ್ಲಿಯೇ ಈ ರೀತಿಯಾದರೆ ಹೊಣೆ ಯಾರು ?. ಲೋಕೋಪಯೋಗಿ ಇಲಾಖೆಯವರು ಇದಕ್ಕೆ ಉತ್ತರ ಕೊಡಬೇಕು” ಎಂದು ಸಾರ್ವಜನಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮನ ಬಂದಂತೆ ಹೆದ್ದಾರಿ ಅಗೆದರೆ ಹೇಗೆ ?’
“ಒಂದು ಸಲ ವಿದ್ಯುತ್ ವೈರ್ ಅಳವಡಿಕೆ, ಇನ್ನೊಂದು ಸಲ ಕುಡಿವ ನೀರಿನ ಪೈಪ್ ಹೀಗೆ ಒಂದಿಲ್ಲೊಂದು ಕಾರಣಕ್ಕೆ ಮನಬಂದಂತೆ ಹೆದ್ದಾರಿಯನ್ನೇ ಅಗೆದು ಮರಂ ಗುಡ್ಡೆ ಇಲ್ಲವೇ ಕಂದಕ ಉಂಟು ಮಾಡಿದರೆ ಸಾರ್ವಜನಿಕರು ಏನು ಮಾಡಬೇಕು. ಅನಿವಾರ್ಯ ಸಂದರ್ಭ ಉಂಟಾದರೆ, ನಿಯಮಗಳ ಅನ್ವಯ ಕ್ರಮ ಕೈಗೊಂಡು ಪೈಪ್‌ಲೈನ್ ಅಥವಾ ವಿದ್ಯುತ್ ಸಂಪರ್ಕ ಅಳವಡಿಸಿ, ತದನಂತರ ಮೊದಲಿನಂತೆ ದುರಸ್ತಿಗಳಿಸಲು ಬರುವುದಿಲ್ಲವೇ ?. ಸಾರ್ವಜನಿಕರಿಗೆ ಏನಾದರೂ ಆಗಲಿ ಎಂದು ಹೀಗೆಲ್ಲಾ ಬೇಜವಾಬ್ದಾರಿ ವಹಿಸುವುದು ಯಾವ ನ್ಯಾಯ ?” ಎಂದು ಸಂಘಟನೆಯ ಮುಖಂಡರೊಬ್ಬರು ಪ್ರಶ್ನಿಸಿದ್ದಾರೆ.
ವಾರದೊಳಗೆ ದುರಸ್ತಿಗೊಳಿಸಲು ಆಗ್ರಹ
ಕುಷ್ಟಗಿ ಮಾರ್ಗದ ಬಸವ ಸರ್ಕಲ್ ಬಳಿ ದಿನವೂ ವಾಹನ ದಟ್ಟಣೆ ಇರುವುದರಿಂದ ಹಾಗೂ ಈ ಮಾರ್ಗದಲ್ಲಿ ಆಸ್ಪತ್ರೆಗಳು ಇರುವ ಕಾರಣ ವಾರದ ಒಳಗಾಗಿ ಈ ಮೊದಲಿನಂತೆ ಡಾಂಬರ್ ರಸ್ತೆಯನ್ನು ನಿರ್ಮಿಸಬೇಕು. ಇಲ್ಲವಾದರೆ ನಿರ್ಲಕ್ಷö್ಯ ವಹಿಸಿದ ಅಧಿಕಾರಿಗಳು ಹಾಗೂ ರಾತ್ರೋ ರಾತ್ರಿ ಹೆದ್ದಾರಿಯನ್ನು ನಿಯಮಬಾಹಿರವಾಗಿ ಅಗೆದವರ ವಿರುದ್ಧ ಮೇಲಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಸಂಘಟನೆಯ ಮುಖಂಡರೊಬ್ಬರು ಎಚ್ಚರಿಸಿದ್ದಾರೆ.