ಸ್ಪೆಷಲ್ ಸ್ಟೋರಿ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 8
ಸಿಂಧನೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರ ಅಸ್ವಸ್ಥಗೊಂಡ ನಾಲ್ವರು ಬಾಣಂತಿಯರು ರಿಮ್ಸ್ನಲ್ಲಿ ಮೃತಪಟ್ಟ ಪ್ರಕರಣಗಳು ವರದಿಯಾಗಿ ಎರಡು ತಿಂಗಳು ಕಳೆದರೂ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಇದುವರೆಗೂ ಬಿಡಿಗಾಸು ಪರಿಹಾರ ದೊರೆತಿಲ್ಲ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದ 7 ಪ್ರಕರಣಗಳಲ್ಲಿ ನಾಲ್ವರು ಬಾಣಂತಿಯರು ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇನ್ನುಳಿದ ಮೂವರು ಚೇತರಿಸಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಈ ಪ್ರಕರಣಗಳು ವರದಿಯಾಗಿ ತಿಂಗಳುಗಳು ಕಳೆದರೂ ಬಡ ಕುಟುಂಬಗಳಿಗೆ ಕನಿಷ್ಠ ಪರಿಹಾರ ನೀಡುವ ಬಗ್ಗೆ ಜಿಲ್ಲಾಡಳಿತವಾಗಲೀ ಹಾಗೂ ತಾಲೂಕು ಆಡಳಿತವಾಗಲೀ ಗಮನ ಹರಿಸದೇ ಇರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಸಿಂಧನೂರು ತಾಲೂಕಿನ ಆರ್.ಎಚ್.ಕ್ಯಾಂಪ್-3ರ ಮೌಸಂಬಿ ಮಂಡಲ್ ಮಹೇಶ್ವರ ಮಂಡಲ್, ಉದ್ಬಾಳ್.ಜೆ.ಗ್ರಾಮದ ಚಂದ್ರಕಲಾ, ರಾಗಲಪರ್ವಿಯ ಚನ್ನಮ್ಮ ಬಸವರಾಜ ಹಾಗೂ ಅಂಕುಶದೊಡ್ಡಿಯ ರೇಣುಕಮ್ಮ ಬಸವರಾಜ ಒಟ್ಟು ನಾಲ್ವರು ಬಾಣಂತಿಯರು ಇಲ್ಲಿಯವರೆಗೆ ಮೃತಪಟ್ಟಿದ್ದಾರೆ.
ಬಾಣಂತಿಯರ ಸಾವು, ಅನಾಥವಾದ ಕಂದಮ್ಮುಗಳು !!
ಸಿಂಧನೂರು ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಿನಾಂಕ: 21-10-2024ರಿಂದ ದಿನಾಂಕ: 06-11-2024ರ ಅವಧಿಯಲ್ಲಿ ಹೆರಿಗೆಗೆ ದಾಖಲಾಗಿದ್ದ ಮಹಿಳೆಯರಲ್ಲಿ ನಾಲ್ವರು ಮಹಿಳೆಯರು ಹೆರಿಗೆಯಾದ ನಂತರ ಅಸ್ವಸ್ಥಗೊಂಡು, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತ ಬಾಣಂತಿಯರ ನವಜಾತ ಶಿಶುಗಳನ್ನು ಅವರ ಮನೆಯವರೇ ಪೋಷಣೆ ಮಾಡುತ್ತಿದ್ದು, ತಾಯಿಯ ಎದೆಹಾಲಿನ ಭಾಗ್ಯ ಈ ಕಂದಮ್ಮಗಳಿಗೆ ಇಲ್ಲದಂತಾಗಿದೆ.
“ಒಂದು ರೂಪಾಯಿ ಪರಿಹಾರ ಬಂದಿಲ್ರಿ”
“ನಮ್ಮ ಹೆಣ್ಮಕ್ಕಳು ಸತ್ತಾಂಗ್ಲಿಂದ ಇಲ್ಲೀರ‍್ಗೆ ಸರ್ಕಾರದಿಂದ ನಮಗ ಒಂದು ರೂಪಾಯಿ ಪರಿಹಾರ ಬಂದಿಲ್ರಿ. ಇದ್ರ ಬಗ್ಗೆ ಯಾವ ಅಧಿಕಾರಿಗುಳು ಕೂಡ ನಮನ ಮಾತಾಡ್ಸಿಲ್ಲ. ಹೆಣ್ಮಕ್ಳು ಹೋದ ನಂತ್ರ ಎಲ್ಲಾ ಕಾರ್ಯೇವು ಮುಗಿಸೆಂಡು, ಮನಿ ಪರಿಸ್ಥಿತಿ ಕೆಟ್ಟದಿದ್ದಕ ಹಡದ ಕೂಸು ಮಾವನವರ ಮನ್ಯಾಗ ಬಿಟ್ಟು, ನಾನು, ನನ್ನ ತಮ್ಮ ಸೇರಿಕೆಂಡು ಬೆಂಗಳೂರಿಗೆ ದುಡ್ಯಾಕ ಬಂದೀವಿ. ಪರಿಹಾರ ಬರ್ತೈತಿ ಅಂತ ಹೇಳ್ತಾರ. ಯಾವಾಗ ಬರ್ತೈತೋ ಏನೋ ? ತಾಯಿ ಇಲ್ಲದ ಮಗು ತಬ್ಲಿ ಅಂತು ಆತು ! ಅದಕ ದಿಕ್ಕು ಯಾರು ?” ಎಂದು ಮೃತ ಬಾಣಂತಿ ರಾಗಲಪರ್ವಿ ಗ್ರಾಮದ ಚನ್ನಮ್ಮ ಅವರ ಪತಿ ಬಸವರಾಜ ನಾಯಕ ಅಳಲು ತೋಡಿಕೊಂಡಿದ್ದಾರೆ.
ಸಾವಿನ ನಿಖರ ಕಾರಣದ ವರದಿ ಬಂತಾ ?
ರಾಜ್ಯದಾದ್ಯಂತ ಬಾಣಂತಿಯರ ಸರಣಿ ಸಾವಿನ ಪ್ರಕರಣಗಳಿಗೆ ಐವಿ ದ್ರಾವಣವೇ ಕಾರಣ ಎಂದು ಸರ್ಕಾರ ವಾದಿಸುತ್ತಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸಂಭವಿಸಿರುವ ಬಾಣಂತಿಯರ ಸಾವಿನ ಪ್ರಕರಣಗಳ ತನಿಖೆಗೆ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಿ, ವಾರದೊಳಗೆ ವರದಿ ಪಡೆಯಲಾಗುವುದು ಎಂದು ಸಿಎಂ ಅವರು ಡಿಸೆಂಬರ್‌ನಲ್ಲಿಯೇ ಮಾಧ್ಯಮದವರ ಮುಂದೆ ಹೇಳಿದ್ದಾರೆ. ಆದರೆ ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಅಸ್ವಸ್ಥಗೊಂಡ ಬಾಣಂತಿಯರು ರಿಮ್ಸ್ನಲ್ಲಿ ಮೃತಪಟ್ಟ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆಯಾ ? ಹಾಗಾದರೆ ಇವರ ಸಾವಿಗೆ ಕಾರಣ ಏನು ? ಎಂಬುವುದು ಇನ್ನೂ ನಿಗೂಢವಾಗಿಯೇ ಇದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಕ್ಕೆ ಕಾರಣವಾಗಿದೆ.
“ಸಾವಿನ ವರದಿ ನಮ್ಗೆ ಇನ್ನೂ ಸಿಕ್ಕಿಲ್ರಿ, ಯಾಕ್ ಸತ್ಲು ನಮ್ ರೇಣುಕಮ್ಮ ಅನ್ನೋದು ಇನ್ನೂ ಗೊತ್ತಾಗವಲ್ತು”
“ನಮ್ಮ ತಮ್ಮನ ಹೆಣ್ತಿ ರೇಣುಕಮ್ಮ ಸತ್ತು ಇಲ್ಲಿಗೆ ರ‍್ಡುವರಿ ತಿಂಗ್ಳ ಆಗಾಗ ಬಂತು. ಆಕಿ ಯಾಕ್ ಸತ್ಲು, ಸಾವಿಗೆ ಕಾರಣ ಏನು ? (ಕಾಸ್ ಆಫ್ ಡೆತ್) ಅಂಬೋದೇ ತಿಳಿವಲ್ತು. ನಮ್ಮ ಕುಟುಂಬದವರಿಗೆ ಅದರ ವರದೀನೆ ಸಿಕ್ಕಿಲ್ಲ. ಹಿಂಗಾಗಿ ನಮಗ ಅನುಮಾನಾ ಕಾಡಾಕ ಅತ್ತೆöÊತಿ. ಸಿಎಂ ಅವರು ಒಂದು ವಾರದೊಳಗ ವರದಿ ಪಡೆಯುವುದಾಗಿ ಸುದ್ದಿ ಮಾಧ್ಯಮದವರ ಮುಂದೆ ಸಾರ್ವಜನಿಕವಾಗಿ ಹೇಳಿದ್ದಾರೆ. ಆದರೆ ಇಲ್ಲಿಯವರೆಗೂ ನಮ್ಮ ತಮ್ಮನ ಹೆಂಡತಿ ಸಾವಿನ ವರದಿ ನಮ್ಮ ಕೈ ಸೇರಿಲ್ಲ, ಸರಕಾರದಿಂದ ಬಿಡಿಗಾಸು ಪರಿಹಾರ ಬಂದಿಲ್ಲ. ಈ ಹಿಂದೆ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಹೋರಾಟ ಮಾಡಿ ರಾಯಚೂರು ಡಿಎಚ್‌ಒ ಅವರಿಗೆ ಡಿಸೆಂಬರ್‌ನಲ್ಲಿ ಮನವಿ ಸಲ್ಲಿಸಿದಾಗ ಈ ಕುರಿತು ವೈದ್ಯಾಧಿಕಾರಿಗಳನ್ನು ನೇಮಿಸಿ ತನಿಖೆ ಕೈಗೊಂಡು 15 ದಿನದೊಳಗೆ ವರದಿ ಪಡೆದು ಸಾವಿಗೆ ನಿಖರ ಕಾರಣ ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಯಾವ ವರದಿಯನ್ನೂ ಕುಟುಂಬಸ್ಥರಾದ ನಮಗೆ ನೀಡಿಲ್ಲ. ಹಾಗಾದರೆ ಇಷ್ಟು ತಡ ಮಾಡುತ್ತಿರುವುದು ಏಕೆ ? ” ಎಂದು ಪರಶುರಾಮ ಅಂಕುಶದೊಡ್ಡಿ ಆಪಾದಿಸಿದ್ದಾರೆ.
ಪರಿಹಾರ ನೀಡುವಲ್ಲಿ ತಾರತಮ್ಯ ಆರೋಪ
ಕಳೆದ ಅಕ್ಟೋಬರ್‌ನಲ್ಲೇ ರಾಜ್ಯದಲ್ಲೇ ಮೊದಲು ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಪ್ರಕರಣಗಳು ವರದಿಯಾದರೂ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ತದನಂತರ ಬಳ್ಳಾರಿಯಲ್ಲಿ ನವೆಂಬರ್ 9ರ ನಂತರ ಪ್ರಕರಣಗಳು ವರದಿಯಾದವು. ಆದರೆ ಸರ್ಕಾರ ಬಳ್ಳಾರಿ ಜಿಲ್ಲೆಯ ಬಾಣಂತಿಯರಿಗೆ 5 ಲಕ್ಷ ರೂ ಪರಿಹಾರ ಘೋಷಿಸಿದೆ. ಹಾಗಾದರೆ ರಾಯಚೂರು ಜಿಲ್ಲೆಯಲ್ಲಿ ಮೃತಪಟ್ಟವರು ಬಾಣಂತಿಯರಲ್ಲವೇ ಎಂದು ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ”
ಬೇರೆ ಜಿಲ್ಲೆಯವರಾದ ಶರಣ ಪ್ರಕಾಶ್ ಪಾಟೀಲ್ ಅವರು ರಾಯಚೂರು ಜಿಲ್ಲೆಯ ಆಗು-ಹೋಗುಗಳು ಹಾಗೂ ಅಭಿವೃದ್ಧಿ ವಿಷಯದ ಸಂಪೂರ್ಣ ನಿರ್ಲಕ್ಷö್ಯವಹಿಸಿದ್ದಾರೆ. ಇದಕ್ಕೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬಾಣಂತಿಯರ ಸರಣಿ ಸಾವಿನ ಘಟನೆಗಳೇ ಸಾಕ್ಷಿಯಾಗಿವೆ. ಹಾಗಾಗಿ ಈ ಕೂಡಲೇ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಜನಪರ ಸಂಘಟನೆಗಳು ಮುಖಂಡರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.