(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 16
ನಗರದ ನಿವಾಸಿಗಳ ಆರೋಗ್ಯದ ಹಿತದೃಷ್ಟಿಯಿಂದ, ಕುಷ್ಟಗಿ ಮಾರ್ಗದಲ್ಲಿರುವ ಕುಡಿವ ನೀರಿನ ಕೆರೆಯ ಶುದ್ಧೀಕರಣ ಘಟಕಗಳ ಅವ್ಯವಸ್ಥೆ, ನೀರು ಸರಬರಾಜು ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ವೈಜ್ಞಾನಿಕ ಕ್ರಮಗಳ ಬಗ್ಗೆ ‘ನಮ್ಮ ಸಿಂಧನೂರು ವೆಬ್ ನ್ಯೂಸ್’ ತಾಣ ಹಾಗೂ ‘ರಾಯಚೂರು ಸುದ್ದಿಬಿಂಬ’ ದಿನಪತ್ರಿಕೆ ಜಂಟಿ ಮೀಡಿಯಾಗಳ ವರದಿಗೆ ನಗರಸಭೆ ಆಡಳಿತ ಎಚ್ಚೆತ್ತುಕೊಂಡಿದ್ದು, ದಿನಾಂಕ: 16-05-2024 ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
“ಸಿಂಧನೂರು ನಗರಸಭೆಯು ಮೂರು ಜಲ ಮೂಲಗಳನ್ನು ಹೊಂದಿದ್ದು, ತುಂಗಭದ್ರಾ ಎಡದಂಡೆ ಕಾಲುವೆಯ ಮೇಲೆಯೇ ಅವಲಂಬಿತವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಗರಸಭೆಯು ವಾರಕ್ಕೊಮ್ಮೆ ಕುಡಿಯುವ ನೀರನ್ನು ಪೂರೈಸುತ್ತಿದ್ದು, ನೀರಿನ ಲಭ್ಯತೆಯ ಆಧಾರದ ಮೇಲೆ ಮತ್ತೆ ಎರಡು ದಿನಗಳನ್ನು ವಿಸ್ತರಿಸಿದೆ. ಇನ್ನೂ ಮುಂದೆ ನಗರಸಭೆಯು ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಹರಿಸುವವರೆಗೂ ೧೦ ದಿನಗಳಗೊಮ್ಮೆ ನೀರು ಸರಬರಾಜು ಮಾಡಲಾಗುವುದು.ಹಾಗಾಗಿ ಸಿಂಧನೂರು ನಗರದ ಜನತೆಯು ನಗರಸಭೆಯೊಂದಿಗೆ ಸಹಕರಿಸಲು ಕೋರಿದೆ. ಮೂರು ಕೆರೆಗಳಲ್ಲಿ ಒಟ್ಟು ನೀರಿನ ಪ್ರಮಾಣವನ್ನಾಧರಿಸಿ ಈ ತೀರ್ಮಾನಕ್ಕೆ ಬಂದಿದ್ದು ನಗರದ ಸಾರ್ವಜನಿಕರು ನೀರನ್ನು ಮಿತವ್ಯಯವಾಗಿ ಬಳಸಲು ಹಾಗೂ ತಮ್ಮ ಎಲ್ಲಾ ನಳ ಸಂಪರ್ಕಗಳಿಗೆ ನೀರು ಪೋಲಾಗದಂತೆ ಜಾಗೃತಿ ವಹಿಸಲು ಸೂಚಿಸಿದೆ.
ಕಡ್ಡಾಯವಾಗಿ ಎಲ್ಲಾ ಸಾರ್ವಜನಿಕರು ತಮ್ಮ ಮನೆಯ ನಳ ಸಂಪರ್ಕ ಬಾಕಿ ಮೊತ್ತವನ್ನು ನಗರಸಭೆಗೆ ಭರಿಸಲು ಕೋರಿದೆ. ಒಂದು ವೇಳೆ ಸಾರ್ವಜನಿಕರು ನೀರನ್ನು ಅಪವ್ಯಯವಾಗಿ ಬಳಸಿದ್ದು ಕಂಡು ಬಂದಲ್ಲಿ ಹಾಗೂ ನಳ ಸಂಪರ್ಕದ ಬಾಕಿಯನ್ನು ಭರಿಸದಿದ್ದಲ್ಲಿ ಅವರ ನಳ ಸಂಪರ್ಕವನ್ನು ಕಟಾಯಿಸಿ ಕರ್ನಾಟಕ ಪೌರ ಅಧಿನಿಯಮದಡಿ ಕಾನೂನು ಕ್ರಮ ಜರುಗಿಸಲಾಗುವುದು.
ನಗರಸಭೆಯು ಪೂರೈಸುತ್ತಿರುವ ಕುಡಿಯುವ ನೀರು ಅತ್ಯಂತ ಶುದ್ಧವಾಗಿದ್ದು ಜನತೆ ಆತಂಕ ಪಡಬೇಕಿಲ್ಲ. ಪ್ರತಿ ದಿನಾಲೂ ನೀರು ಸರಬರಾಜು ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ನಿರ್ವಹಿಸುತ್ತಿದ್ದು ನೀರಿಗೆ ನಿಗದಿತ ಪ್ರಮಾಣದಲ್ಲಿ ಕ್ಲೋರಿನೇಶನ್ ಮಾಡಲಾಗುತ್ತಿದೆ. ಹಾಗೂ ಪ್ರತಿ ವಾರವೂ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು ನೀರು ಕುಡಿಯಲು ಯೋಗ್ಯವಾಗಿದೆ ಎಂದು ವೈದ್ಯಾಧಿಕಾರಿಗಳು ಪ್ರಮಾಣ ಪತ್ರ ವಿತರಿಸಿರುತ್ತಾರೆ. ನೀರು ಸರಬರಾಜು ಮಾಡುವ ಸಿಬ್ಬಂದಿ ತಾಂತ್ರಿಕವಾಗಿ ನಿಪುರಣರಾಗಿದ್ದು, ನೀರಿನ ಫಿಲ್ಟರ್ ಮೀಡಿಯಾವನ್ನು ಪ್ರತಿದಿನ ಶುಚಿಗೊಳಿಸುತ್ತಿರುವುದರಿಂದ ನಗರದ ಸಾರ್ವಜನಿಕರು ಆತಂಕ ಪಡಬೇಕಿಲ್ಲ’’ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.