ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 09
ಸಿಂಧನೂರಿನ ಸುಕಾಲಪೇಟೆ ಪಕ್ಕದಲ್ಲಿರುವ ಹಳ್ಳದಲ್ಲಿರುವ ಮೊಸಳೆಯನ್ನು ಪತ್ತೆಹಚ್ಚಿ ಬೇರೆಡೆ ಸಾಗಿಸಬೇಕು, ಪತ್ತೆಯಾಗುವವರೆಗೂ ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ತಾಲೂಕು ಸಮಿತಿಯಿಂದ ಸೋಮವಾರ ತಾಲೂಕು ಅರಣ್ಯಾಧಿಕಾರಿ ಅರುಣಾ ಅವರ ಮೂಲಕ ವಲಯ ಅರಣ್ಯಾಧಿಕಾರಿಗಳು ಪ್ರಾದೇಶಿಕ ವಲಯ ಮಾನ್ವಿ ಇವರಿಗೆ ಮನವಿಪತ್ರ ರವಾನಿಸಲಾಯಿತು.
ಸಿಂಧನೂರಿನ ಸುಕಾಲಪೇಟೆಯ ಪಕ್ಕದಲ್ಲಿರುವ ಹಳ್ಳದಲ್ಲಿ ದಿನಾಂಕ: 08-09-2024ರಂದು ಮೊಸಳೆ ಪ್ರತ್ಯಕ್ಷವಾಗಿದ್ದು, ಮೇಯಲು ಬಿಟ್ಟ ಕುರಿಯನ್ನು ತಿಂದುಹಾಕಿದೆ. ಕುರಿಯನ್ನು ಮೊಸಳೆ ತಿಂದುಹಾಕುತ್ತಿರುವುದನ್ನು ಕುರಿ ಮಾಲೀಕ ಬಸವರಾಜ ಸಿದ್ದಾಪುರ ಎಂಬುವವರು ಕಣ್ಣಾರೆ ಕಂಡು ಓಡಿಹೋಗಿ, ಪ್ರಾಣರಕ್ಷಣೆ ಮಾಡಿಕೊಂಡಿರುತ್ತಾರೆ. ಸುಕಾಲಪೇಟೆಯ ನಿವಾಸಿಗಳು, ಸುತ್ತಮುತ್ತಲಿನ ಗದ್ದೆಗಳ ರೈತರು, ಕುರಿಕಾಯುವವರು, ದನಕಾಯುವವರು ಮೊಸಳೆ ಪ್ರತ್ಯಕ್ಷವಾಗಿರುವ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಹಲವುಕಡೆ ಒಂದಲ್ಲೊAದು ಕಾರಣಕ್ಕೆ ದಿನವೂ ಸಂಚರಿಸುತ್ತಾರೆ. ಇಂತಹ ಸಂದರ್ಭದಲ್ಲಿ ಮೊಸಳೆ ದಾಳಿಮಾಡುವ ಭಯ ಕಾಡುತ್ತಿದೆ. ಹಾಗಾಗಿ ಈ ಕೂಡಲೇ ಅರಣ್ಯ ಇಲಾಖೆಯವರು ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ತಜ್ಞರ ತಂಡವನ್ನು ಕರೆದುಕೊಂಡು ಬಂದು ಮೊಸಳೆಯನ್ನು ಪತ್ತೆಹಚ್ಚಿ, ಹಿಡಿದು ಬೇರೆಕಡೆಗೆ ಸಾಗಿಸಬೇಕು. ಒಂದು ವೇಳೆ ನಿರ್ಲಕ್ಷ್ಯವಹಿಸಿ, ಯಾವುದೇ ರೀತಿಯ ಅವಘಡಗಳು ಸಂಭವಿಸಿದರೆ ಅದಕ್ಕೆ ಅರಣ್ಯ ಇಲಾಖೆಯೇ ಹೊಣೆಯಾಗಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
‘ಮೊಸಳೆ ಪತ್ತೆಯಾಗುವವರೆಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ’
ಮೊಸಳೆ ಪ್ರತ್ಯಕ್ಷವಾಗಿರುವ ಸಿಂಧನೂರಿನ ಹಳ್ಳದ ಪ್ರದೇಶ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ಫಲಕವನ್ನು ಹಾಕಬೇಕು, ಡಂಗುರ ಸಾರಿಸಿ ಮೊಸಳೆ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಬೇಕು, ಮೊಸಳೆಯನ್ನು ಶೀಘ್ರ ಪತ್ತೆಹೆಚ್ಚಿ ಬೇರೆಕಡೆಗೆ ಸಾಗಿಸಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ತಾಲೂಕಾ ಅರಣ್ಯಾಧಿಕಾರಿಗಳು ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ ಗಾಣಗೇರ, ರಾಜ್ಯ ಕಾಯಾಧ್ಯಕ್ಷ ಉಮೇಶಗೌಡ ಅರಳಹಳ್ಳಿ, ಜಿಲ್ಲಾ ಸಂಚಾಲಕ ಹುಸೇನ್‌ಬಾಷಾ, ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ, ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬೂದೇಶ ಮರಾಠ, ತಾಲೂಕು ಉಪಾಧ್ಯಕ್ಷ ಗದ್ದೆಪ್ಪ, ನಗರ ಘಟಕ ಪ್ರಧಾನ ಕಾರ್ಯದರ್ಶಿ ಪ್ರಶಾಂತಕುಮಾರ ಇನ್ನಿತರರು ಇದ್ದರು.