ಸಿಂಧನೂರು: ಎಮ್ಮೆಲ್ಲೆಯವರಿಂದ ಮುಸ್ಲಿಂ ಸಮುದಾಯ ನಿರ್ಲಕ್ಷ್ಯ ಆರೋಪ, ಜಾಫರ್ ಜಾಗೀರದಾರ ಮನೆಯಲ್ಲಿ ಮುಸ್ಲಿಂ ಮುಖಂಡರ ದಿಢೀರ್ ಸಭೆ

Spread the love

ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 23

ಮುಸ್ಲಿಂ ಸಮುದಾಯವನ್ನು ಹಾಲಿ ಶಾಸಕರು ಕಳೆದ ಹಲವು ದಿನಗಳಿಂದ ನಿರ್ಲಕ್ಷಿಸುತ್ತಿದ್ದಾರೆ, ಹೀಗಾಗಿ ಸಮಾಜದ ಕೆಲಸ-ಕಾರ್ಯಗಳು ನನೆಗುದಿಬಿದ್ದಿವೆ ಎಂದು ಅಸಮಾಧಾನಗೊಂಡ ಕೆಲ ಮುಸ್ಲಿಂ ಮುಖಂಡರು ಹಾಗೂ ಯುವಕರು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಂಪನಗೌಡ ಬಾದರ್ಲಿ ಅವರ ಆಪ್ತ ಜಾಫರ್ ಜಾಗೀರದಾರ್ ಅವರ ಮನೆಗೆ ಬುಧವಾರ ಭೇಟಿ ನೀಡಿ ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಅಹವಾಲುಗಳ ಪಟ್ಟಿ
ಕಳೆದ 7 ತಿಂಗಳಿನಿಂದ ಬೀದಿ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿದರೂ ಇಲ್ಲಿಯವರೆಗೂ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ನಿರ್ಲಕ್ಷ್ಯ ವಹಿಸಿರುವುದು, ಜಾನುವಾರು ಸಂತೆಯಲ್ಲಿ ಸಮುದಾಯದ ಕೆಲವರ ಮೇಲೆ ಪದೇ ಪದೆ ಕಿರುಕುಳ ಆಗುತ್ತಿರುವುದು, ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ ಸಂಸ್ಥೆಗಳ ಮೇಲಾಗುತ್ತಿರುವ ಸಮಸ್ಯೆಗಳು ಹಾಗೂ ಸರ್ಕಾರದಿಂದ ಅನುದಾನ ಬಂದರೂ ಬಳಕೆಗೆ ಮೀನಮೇಷ ಮಾಡುತ್ತಿರುವುದು, ಸಿಎಂಸಿಯಲ್ಲಿ ಪಾರ್ಮ್ ನಂ.3 ಮುಟೇಶನ್, ಹಾಸ್ಟೆಲ್ ಸಮಸ್ಯೆ, ಕಟ್ಟಡ ಕಾರ್ಮಿಕರ ಸಮುದಾಯ ಭವನ ಸೇರಿದಂತೆ ಹಲವು ವಿಷಯಗಳ ಕುರಿತು ಸೇರಿದ್ದ ಮುಖಂಡರು ಹಾಗೂ ಯುವಕರು ಪರಸ್ಪರ ಪ್ರಸ್ತಾಪಿಸಿದರು.

Namma Sindhanuru Click For Breaking & Local News

“ಚುನಾವಣೆ ಸಂದರ್ಭದಲ್ಲಿ ಏನು ಮಾತು ಕೊಟ್ಟಿದ್ದೀರಿ”
“ಕಳೆದ ವಿಧಾನಸಭೆ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಜಾಫರ್ ಜಾಗೀರದಾರ ಅವರು ಹಾಗೂ ಹಾಲಿ ಎಮ್ಮೆಲ್ಲೆಯವರು ಹಲವು ಆಶ್ವಾಸನೆಗಳನ್ನು ನೀಡಿದ್ದರು. ಆದರೆ ಆ ಬಗ್ಗೆ ನಂತರ ನಿರ್ಲಕ್ಷಿಸುತ್ತಾ ಬರಲಾಗಿದೆ. ಹೀಗಾಗಿ ಸಮುದಾಯದ ಜನರು ಮತ್ತಷ್ಟು ಸಮಸ್ಯೆಗೊಳಗಾಗುತ್ತಿದ್ದಾರೆ. ಹಲವು ಬಾರಿ ಸಮಸ್ಯೆಗಳ ಕುರಿತು ಗಮನ ಸೆಳೆದರೂ ಪರಿಹರಿಸಲು ಮುಂದಾಗುತ್ತಿಲ್ಲ. ಹೀಗಾದರೆ ಹೇಗೆ ?” ಎಂದು ಹಲವು ಮುಖಂಡರು ಜಾಫರ್ ಜಾಗೀರದಾರ ಅವರನ್ನು ಪ್ರಶ್ನಿಸಿದರು.
“ಸಮುದಾಯದವರ ಪ್ರಸ್ತಾಪಗಳನ್ನು ಶಾಸಕರೊಂದಿಗೆ ಚರ್ಚಿಸುವೆ”
“ನನ್ನ ಮೇಲೆ ಗೌರವವನ್ನಿಟ್ಟುಕೊಂಡು ನನ್ನ ನಿವಾಸಕ್ಕೆ ಬಂದು ಸಮುದಾಯದ ಅಹವಾಲುಗಳನ್ನು ಗಮನಕ್ಕೆ ತಂದಿರುವುದು ಸ್ವಾಗತಾರ್ಹವಾಗಿದ್ದು, ಈ ಕುರಿತು ಶಾಸಕರಾದ ಹಂಪನಗೌಡ ಬಾದರ್ಲಿ ಅವರೊಂದಿಗೆ ಚರ್ಚಿಸುವೆ. ಶಾಸಕರು ಸಮುದಾಯವರೊಂದಿಗೆ ಇದ್ದು, ಯಾವುದೇ ರೀತಿಯ ನಿರ್ಲಕ್ಷö್ಯ ತೋರಿರುವುದಿಲ್ಲ. ಸಮುದಾಯದ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಅವರ ಗಮನಕ್ಕೆ ತಂದು ಪರಿಹಾರಕ್ಕೆ ಗಮನಹರಿಸಲಾಗುವುದು” ಎಂದು ಜಾಫರ್ ಜಾಗೀರದಾರ್ ಸಮುದಾಯದ ಮುಖಂಡರನ್ನು ಮನವೊಲಿಸಿದ್ದಾರೆ.
* * * * * * * * * * * * * * * * *
ಇದು ʼಸುಡಾʼ ಮುನಿಸು ?
ನಗರ ವ್ಯಾಪ್ತಿಯ ಹಲವು ವಾರ್ಡ್‌ಗಳಲ್ಲಿ ಮುಸ್ಲಿಂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಚುನಾವಣೆಯ ಸಂದರ್ಭದಲ್ಲಿ ಜಾಫರ್ ಜಾಗೀರ್‌ದಾರ್ ಅವರು ಹಂಪನಗೌಡರ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಸದಾ ಹಂಪನಗೌಡರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಜಾಫರ್ ಜಾಗೀರ್‌ದಾರ್ ಅವರು ಒಂದು ಬಾರಿ ನಗರಸಭೆ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದರು. ತದನಂತರ ಕೆಲ ದಿನಗಳಿಂದ ಹಿನ್ನೆಲೆಗೆ ಸರಿದಿದ್ದರು. ಇತ್ತೀಚೆಗೆ ಸಿಂಧನೂರು ಅಭಿವೃದ್ಧಿ ಪ್ರಾಧಿಕಾರ ಹೊಸದಾಗಿ ರಚನೆಯಾದ ನಂತರ ಅದರ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು ಎಂಬ ಮಾತು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಬದಲಾದ ರಾಜಕೀಯ ವಾತಾವರಣದ ಹಿನ್ನೆಲೆಯಲ್ಲಿ ಸುಡಾ ಅಧ್ಯಕ್ಷರಾಗಿ ಬಾಬುಗೌಡ ಬಾದರ್ಲಿ ಅವರು ನೇಮಕಗೊಂಡಿದ್ದರು. ಇದು ಜಾಫರ್ ಜಾಗೀರದಾರ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಜಾಫರ್ ಜಾಗೀರ್‌ದಾರ್ ಅವರ ಮನೆಯಲ್ಲಿ ದಿಢೀರ್ ಸಭೆ ನಡೆದಿದೆ ಎಂದು ಹೇಳಲಾಗುತ್ತಿದೆ.


Spread the love

Leave a Reply

Your email address will not be published. Required fields are marked *