ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 20
ನಗರದ ರಾಯಚೂರು, ಕುಷ್ಟಗಿ, ಗಂಗಾವತಿ ಹಾಗೂ ಮಸ್ಕಿ ರಸ್ತೆ ಮಾರ್ಗದಲ್ಲಿ ಬೀದಿ ಬದಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುವ ವ್ಯಾಪಾರಸ್ಥರಿಗೆ ನಗರಸಭೆ ನೋಟಿಸ್ ಜಾರಿ ಮಾಡಿದ್ದು, ಬೀದಿ ವ್ಯಾಪಾರವನ್ನೇ ನಂಬಿ ಬದುಕುತ್ತಿರುವ ಬಡ ಕುಟುಂಬಗಳು ಆತಂಕ ಎದುರಿಸುತ್ತಿವೆ.
“ತಾವುಗಳು ಮುಖ್ಯ ರಸ್ತೆ ಪಕ್ಕದ ಪಾದಾಚಾರಿ ರಸ್ತೆಯನ್ನು ಅತಿಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದೀರಿ, ಇದು ಅಕ್ಷಮ್ಯ ಅಪರಾಧವಾಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಕೂಡಲೇ ಪಾದಾಚಾರಿ ರಸ್ತೆಯ ಮೇಲೆ ಹಾಕಿಕೊಂಡಿರುವ ನಿಮ್ಮ ಅಂಗಡಿಗಳನ್ನು ನೀವೇ ಸ್ವತಃ 03 ದಿನಗಳ ಒಳಗೆ ತೆರವುಗೊಳಿಸಬೇಕೆಂದು ಸೂಚಿಸಿದೆ. ತಪ್ಪಿದ್ದಲ್ಲಿ ಮುಂದಿನ ಆಗು-ಹೋಗುಗಳಿಗೆ ನೀವೇ ಜವಾಬ್ದಾರರಾಗಿರುತ್ತೀರಿ” ಎಂದು ನಗರಸಭೆ ಪೌರಾಯುಕ್ತರು ಬೀದಿ ವ್ಯಾಪಾರಸ್ಥರಿಗೆ ನೋಟಿಸ್ ನೀಡಿದ್ದು, ಇದರಿಂದ ತಮ್ಮ ದುಡಿಮೆಗೆ ಸಂಕಷ್ಟ ಎದುರಾಗಿದೆ ಎಂದು ಹಲವು ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ನಗರಸಭೆಯಿಂದ ಏಕ ಪಕ್ಷೀಯ ನಿರ್ಧಾರ
ಅಲ್ಲೊಬ್ಬರು, ಇಲ್ಲೊಬ್ಬರು ಬೆರಳೆಣಿಕೆಯಷ್ಟು ಜನರು, ಕೆಲ ಬಂಡಿಯವರು ಮಾತ್ರ ಫುಟ್‌ಪಾತ್ ಮೇಲೆ ವ್ಯಾಪಾರ ನಡೆಸುತ್ತಿರಬಹುದು. ಬಹುತೇಕರು ಫುಟ್‌ಪಾತ್ ಹೊರತುಪಡಿಸಿ ಬೀದಿಬದಿ ವ್ಯಾಪಾರ ನಡೆಸುತ್ತಿದ್ದಾರೆ. ಬೀದಿಬದಿ ವ್ಯಾಪಾರಸ್ಥರಿಂದ ಪಾದಚಾರಿಗಳಿಗೆ ಯಾವುದೇ ರೀತಿಯ ತೊಂದರೆಯಾಗುತ್ತಿಲ್ಲ. ಆದರೆ ನಗರಸಭೆಯವರು ಪಟ್ಟಣ ವ್ಯಾಪಾರ ಸಮಿತಿಯವರ ಗಮನಕ್ಕೆ ತರದೇ, ಸಭೆ ಕರೆಯದೇ ಏಕ ಪಕ್ಷೀಯ ನಿರ್ಧಾರ ಕೈಗೊಂಡು ನೋಟಿಸ್ ನೀಡಿರುವುದು ಸರಿಯಲ್ಲ ಎಂದು ಪಟ್ಟಣ ವ್ಯಾಪಾರ ಸಮಿತಿಯವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಪಟ್ಟಣ ವ್ಯಾಪಾರ ಸಮಿತಿಗೆ ನಗರಸಭೆಯ ಪೌರಾಯುಕ್ತರು ಅಧ್ಯಕ್ಷರಾಗಿದ್ದು, ನಗರಸಭೆಯ ಮತ್ತೊಬ್ಬ ಅಧಿಕಾರಿ ಕಾರ್ಯದರ್ಶಿಯಾಗಿರುತ್ತಾರೆ. ಸಲಹಾ ಸಮಿತಿಯಲ್ಲಿ ತಹಸೀಲ್ದಾರ್, ಪೊಲೀಸ್ ಇಲಾಖೆ, ಪಿಡಬ್ಲ್ಯುಡಿ ಸೇರಿದಂತೆ ಇನ್ನಿತರೆ ಇಲಾಖೆಯ ಅಧಿಕಾರಿಗಳು ಬರುತ್ತಾರೆ. ಸಮಿತಿಯಿಂದ ಸಭೆ ಕರೆದು ಎಲ್ಲ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸರಿಯಾದ ತೀರ್ಮಾನಕ್ಕೆ ಬಂದು, ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದೇ ದಿಢೀರ್ ನೊಟೀಸ್ ನೀಡುವುದು ಸರಿಯಲ್ಲ ಎಂದು ಬೀದಿ ಬದಿ ವ್ಯಾಪಾರಸ್ಥರೊಬ್ಬರು ಆಕ್ಷೇಪ ವ್ಯಕ್ತಪಡಿಸುತ್ತಾರೆ.
2500ಕ್ಕೂ ಹೆಚ್ಚು ಬೀದಿ ವ್ಯಾಪಾರಸ್ಥರು
ನಗರದ ರಾಯಚೂರು, ಕುಷ್ಟಗಿ, ಗಂಗಾವತಿ ಹಾಗೂ ಮಸ್ಕಿ ರಸ್ತೆ ಮಾರ್ಗದ ಬೀದಿ ಬದಿಗಳಲ್ಲಿ 2500ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಸ್ಥರು ದಿನವೂ ಸಣ್ಣಪುಟ್ಟ ವ್ಯಾಪಾರ ಮಾಡುತ್ತಾರೆ. ಅದರಲ್ಲಿ ಅಧಿಕೃತವಾಗಿ 2500ಕ್ಕೂ ಹೆಚ್ಚು ಜನರು ನಗರಸಭೆಯಿಂದ ಕಾರ್ಡ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಬಹುತೇಕ ಬೀದಿ ಬದಿ ವ್ಯಾಪಾರಸ್ಥರು ಅಂದಿನ ದುಡಿಮೆಯಿಂದ ಕುಟುಂಬದ ಖರ್ಚು-ವೆಚ್ಚ ನಿರ್ವಹಿಸುತ್ತ ಬರುತ್ತಿದ್ದಾರೆ. ಒಂದು ದಿನ ವ್ಯಾಪಾರ ಇಲ್ಲದೇ ಹೋದರೆ ಸಾಲಕ್ಕಾಗಿ ಇನ್ನೊಬ್ಬರ ಬಳಿ ಮೊರೆ ಇಡಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ಬೀದಿ ಬದಿ ವ್ಯಾಪಾರಸ್ಥರಿಂದ ನಗರಸಭೆಗೆ ವಾರ್ಷಿಕ 23 ರೂ. ಲಕ್ಷ ಆದಾಯ !
“ಪ್ರತಿ ವರ್ಷ ನಗರದ ಬೀದಿ ಬದಿ ವ್ಯಾಪಾರಸ್ಥರಿಂದ ನಗರಸಭೆಗೆ 23 ಲಕ್ಷ ರೂಪಾಯಿ ಆದಾಯವಿದೆ. ಬೀದಿ ಬದಿ ವ್ಯಾಪಾರಸ್ಥರಿಂದ ತೆರಿಗೆ ಪಡೆಯಲು ಖಾಸಗಿಯವರಿಗೆ ಕಳೆದ ವರ್ಷ 23 ಲಕ್ಷ ರೂಪಾಯಿ ಟೆಂಡರ್ ಆಗಿದೆ. ಪ್ರತಿ ದಿನವೂ ಬೀದಿ ಬದಿ ವ್ಯಾಪಾರಸ್ಥರು 10 ರಿಂದ 20 ರೂಪಾಯಿ ಪಾವತಿಸುತ್ತಾರೆ. 20 ರೂಪಾಯಿ ಪಾವತಿಸುವವರು ವಾರ್ಷಿಕ 7200 ರೂಪಾಯಿ ಹಾಗೂ 10 ರೂಪಾಯಿ ಪಾವತಿಸುವವರು 3600 ರೂಪಾಯಿಯನ್ನು ನಗರಸಭೆಗೆ ಕಟ್ಟುತ್ತಾರೆ. ತೆರಿಗೆ ಪಾವತಿಸಿಯೂ ಬೀದಿ ಬದಿ ವ್ಯಾಪಾರಸ್ಥರು ಇನ್ನಿಲ್ಲದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ” ಎಂದು ರಾಯಚೂರು ಮಾರ್ಗದ ರಸ್ತೆಯಲ್ಲಿರುವ ಬೀದಿಬದಿ ವ್ಯಾಪಾರಸ್ಥರೊಬ್ಬರು ನೊಂದು ನುಡಿದರು.
‘ಅಂಗಡಿ ಬಂದ್ ಮಾಡಿದರೆ ನಾವು ಬೀದಿಗೆ ಬೀಳುತ್ತೇವೆ’
“ನಗರಸಭೆಯಿಂದ ಅಧಿಕೃತ ಕಾರ್ಡ್ ಪಡೆದ 1000ಕ್ಕೂ ಹೆಚ್ಚು ಜನರು ವಿವಿಧ ಬ್ಯಾಂಕ್‌ಗಳಲ್ಲಿ 50 ಸಾವಿರ ರೂಪಾಯಿ ಮುದ್ರಾ ಸಾಲ ಪಡೆದಿದ್ದಾರೆ. ಏಕಾಏಕಿ ನೋಟಿಸ್ ಕೊಟ್ಟು ಅಂಗಡಿಗಳನ್ನು ಮುಚ್ಚಿಸುವುದರಿಂದ ಆ ಸಾಲವನ್ನು ನಾವು ಹೇಗೆ ತೀರಿಸಬೇಕೆಂಬುದೇ ತಿಳಿಯುತ್ತಿಲ್ಲ. ಬೀದಿ ಬದಿ ಸಣ್ಣಪುಟ್ಟ ವ್ಯಾಪಾರ ಮಾಡಿಯೇ ಜೀವನ ನಡೆಸಬೇಕಿದೆ. ಒಂದು ದಿನ ವ್ಯಾಪಾರ ಬಂದ್ ಆದರೆ ನಮ್ಮ ಕೈಕಾಲು ಆಡುವುದಿಲ್ಲ” ಎಂದು ಬೀದಿ ಬದಿ ವ್ಯಾಪಾರದಲ್ಲಿ ತೊಡಗಿರುವ ಮಹಿಳೆಯರೊಬ್ಬರು ಆತಂಕ ವ್ಯಕ್ತಪಡಿಸಿದರು.
‘ದೊಡ್ಡ ಅಂಗಡಿಗಳ ಮೇಲೆ ಯಾವುದೇ ಕ್ರಮ ಇಲ್ಲ’
“ನಗರದ ನಾಲ್ಕು ಪ್ರಮುಖ ರಸ್ತೆಗಳಲ್ಲಿರುವ ವಾಣಿಜ್ಯ ಮಳಿಗೆಗೆಗಳು ಸೇರಿದಂತೆ ಹಲವು ದೊಡ್ಡ ದೊಡ್ಡ ಅಂಗಡಿಗಳಿದ್ದು, ಎಲ್ಲೆಂದರಲ್ಲಿ ಮನಬಂದಂತೆ ದ್ವಿಚಕ್ರವಾಹನ, ಕಾರು-ಲಾರಿ ಸೇರಿದಂತೆ ಇನ್ನಿತರೆ ವಾಹನಗಳನ್ನು ನಿಲ್ಲಿಸಿರುತ್ತಾರೆ. ದೊಡ್ಡ ಯಾವುದೇ ದೊಡ್ಡ ಅಂಗಡಿಗಳವರು ಪಾರ್ಕಿಂಗ್ ಹೊಂದಿಲ್ಲ. ಆಯಾ ಅಂಗಡಿಗಳಿಗೆ ಬಂದವರು ರಸ್ತೆಯ ಬದಿಯೇ ವಾಹನಗಳನ್ನು ಬಿಟ್ಟು ಹೋಗುತ್ತಾರೆ. ಆ ಎಲ್ಲ ವಾಹನಗಳನ್ನು ಅಲ್ಲಿ ನಿಲ್ಲಿಸದಂತೆ ಕ್ರಮ ಕೈಗೊಂಡರೆ ಟ್ರಾಫಿಕ್ ಜಾಮ್ ಇರಲಿ, ಸಾರ್ವಜನಿಕರಿಗೆ ತೊಂದರೆ ಆಗುವುದಿಲ್ಲ. ಅದನ್ನು ಬಿಟ್ಟು ಬಡ ವ್ಯಾಪಾರಿಗಳ ಮೇಲೆ ಕ್ರಮ ಜರುಗಿಸುವುದು ಎಷ್ಟು ಸರಿ ಎಂದು” ಬೀದಿ ಬದಿ ವ್ಯಾಪಾರಿ ಸಂಘದ ಸದಸ್ಯರೊಬ್ಬರು ಪ್ರಶ್ನಿಸಿದ್ದಾರೆ.
“ಬಡ ವ್ಯಾಪಾರಿಗಳ ಗೋಳು ಕೇಳುವವರಿಲ್ಲ”
“ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜೀವನೋಪಾಯ ರಕ್ಷಣೆ ಹಾಗೂ ನಿಯಂತ್ರಣ ಕಾಯ್ದೆ 2014 ಇಲ್ಲಿಯವರೆಗೂ ನಗರದಲ್ಲಿ ಸಮರ್ಪಕವಾಗಿ ಜಾರಿಯಾಗಿಲ್ಲ. ಅಲ್ಲದೇ ಸುಪ್ರೀಂ ಕೋರ್ಟ್ನ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ. ಪೊಲೀಸರು ಹಣ ವಸೂಲಿ ಮಾಡುತ್ತಾರೆ, ನಗರಸಭೆ ಅಧಿಕಾರಿಗಳು ಎತ್ತಂಗಡಿ ಮಾಡಿಸುತ್ತಾರೆ, ವಾಣಿಜ್ಯ ಮಳಿಗೆ ಇಟ್ಟುಕೊಂಡವರು ಅಡ್ಡಿಪಡಿಸುತ್ತಾರೆ. ಬೆಳಿಗ್ಗೆ ಬಡ್ಡಿಗೆ ಹಣ ತಂದು ವಸ್ತುಗಳನ್ನು ಖರೀದಿ ಮಾಡಿ, ರಾತ್ರಿ ವ್ಯಾಪಾರ ಮುಗಿಸಿಕೊಂಡು ಅಸಲು-ಬಡ್ಡಿ ಕಟ್ಟಿ ಹಣ ಉಳಿದರೆ ತೆಗೆದುಕೊಂಡು ಮನೆಗೆ ಹೋಗಬೇಕು. ಇಷ್ಟೆಲ್ಲ ಕಿರಿ ಕಿರಿಗಳ ಮಧ್ಯೆ ದಿನವೂ ಜೀವನ ನಡೆಸಬೇಕಿದೆ. ಪದೇ ಪದೆ ಎತ್ತಂಗಡಿ ನೋಟಿಸ್ ನೀಡುವ ಮುಂಚೆ ನಮಗೊಂದು ಪ್ರತ್ಯೇಕ ಜಾಗ ನೀಡಿದರೆ ಪುಣ್ಯ ಬರುತ್ತದೆ” ಎಂದು ಬೀದಿ ಬದಿ ವ್ಯಾಪಾರಸ್ಥರೊಬ್ಬರು ಹೇಳುತ್ತಾರೆ.
‘ಪರ್ಯಾಯ ವ್ಯವಸ್ಥೆ ಕಲ್ಪಿಸಲಿ’
“ಜನರ ಜೀವಿಸುವ ಹಕ್ಕು, ಜೀವನೋಪಾಯದ ಹಕ್ಕನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಹಾಗಾಗಿ ನಗರಸಭೆ, ತಾಲೂಕು, ಜಿಲ್ಲಾಡಳಿತಗಳು ಬೀದಿ ಬದಿ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಸೂಕ್ತ ಸ್ಥಳ ಗುರುತಿಸಬೇಕು, ಆ ಮೂಲಕ ಬಡ ವ್ಯಾಪಾರಸ್ಥರ ಜೀವನ ನಿರ್ವಹಣೆಗೆ ಪ್ರೋತ್ಸಾಹಿಸಬೇಕು. ಯಾವುದೇ ರೀತಿಯ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಅಂಗಡಿಗಳನ್ನು ಎತ್ತಂಗಡಿ ಮಾಡಲು ಮುಂದಾದರೆ ಕುಟುಂದವರೊಂದಿಗೆ ಬೀದಿ ಬದಿ ವ್ಯಾಪಾರಸ್ಥರ ಹೋರಾಟ ನಡೆಸಬೇಕಾಗುತ್ತದೆ” ಎಂದು ಬೀದಿ ಬದಿ ವ್ಯಾಪಾರಸ್ಥರೊಬ್ಬರು ಎಚ್ಚರಿಸಿದ್ದಾರೆ.