(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 21
ನಗರದ ವಿವಿಧ ವಾರ್ಡ್‌ಗಳಲ್ಲಿ ನಾಗರಿಕ ಸೌಲಭ್ಯಕ್ಕಾಗಿ ನಿಗದಿಪಡಿಸಿದ ‘ನಗರಸಭೆ ಸ್ವತ್ತುಗಳು’ ಜಾಲಿ, ಬೇಲಿ, ಚರಂಡಿ ನೀರಿನಲ್ಲಿ ದಿನದಿಂದ ದಿನಕ್ಕೆ ‘ಕಣ್ಮರೆ’ಯಾಗುತ್ತಿವೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಈ ಆಸ್ತಿಗಳು ಬರುಬರುತ್ತಾ ಅತಿಕ್ರಮಣವಾದರೂ ಅಚ್ಚರಿಯೇನಿಲ್ಲ ! ಎಂಬ ಆರೋಪಗಳು ಕೇಳಿಬಂದಿವೆ.
ಸಿಂಧನೂರು ನಗರ ವೇಗವಾಗಿ ಬೆಳೆಯುತ್ತಿದೆ. ವಾರ್ಡ್‌ಗಳ ವ್ಯಾಪ್ತಿಯೂ ಹೆಚ್ಚುತ್ತಿದೆ. ಹೀಗಾಗಿ ದಿನ ಬೆಳಗಾಗುವುದರೊಳಗಾಗಿ ಹೊಸ ಹೊಸ ಲೇಔಟ್‌ಗಳು ಜನ್ಮತಾಳುತ್ತಿವೆ. ಹೊಸ ಲೇಔಟ್‌ಗಳಲ್ಲಿ ಸಾರ್ವಜನಿಕ ಸೌಲಭ್ಯಕ್ಕಾಗಿ ತೆಗೆದಿರಿಸಿದ ಜಾಗಗಳು ಕಾಳಜಿಯ ಕೊರತೆಯಿಂದ ಅನ್ಯರಪಾಲಾಗುವ ಅನುಮಾನ ವ್ಯಕ್ತವಾಗಿದೆ. ವಿವಿಧ ವಾರ್ಡ್ಗಳಲ್ಲಿ ತಲೆ ಎತ್ತಿರುವ ಹೊಸ ಲೇಔಟ್‌ಗಳಲ್ಲಿ ನಾಗರಿಕರ ಸೌಲಭ್ಯಕ್ಕೆ ನಿಗದಿಪಡಿಸಿದ ಜಾಗೆಗಳಲ್ಲಿ ನಗರಸಭೆಯವವರು ತ್ರಿಭುಜಾಕಾರದ ಸಿಮೆಂಟ್ ಕಂಬಕ್ಕೆ ಫಲಕ ಹಾಕಿ ಕೈಬಿಟ್ಟಿದ್ದಾರೆ. ಈ ಜಾಗಗಳ ಸುತ್ತಳತೆ ನಿಗದಿಪಡಿಸಿ ಉದ್ಯಾನ ಇಲ್ಲವೇ ನಾಗರಿಕರ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸದೇ ನಿರ್ಲಕ್ಷö್ಯವಹಿಸಿರುವುದು ಕಣ್ಣಿಗೆ ರಾಚುತ್ತದೆ.
ಬಾಬಾರಾಮದೇವ ಗುಡಿ ಪಕ್ಕದ ಸ್ವತ್ತಿನಲ್ಲಿ ಕಸ-ಕಡ್ಡಿ
ಆದರ್ಶ ಕಾಲೋನಿಯ ಬಾಬಾ ರಾಮದೇವ ಗುಡಿಯ ಪಕ್ಕದಲ್ಲಿ ನಗರಸಭೆಯ ಜಾಗೆ ಇದ್ದು, ಈ ಜಾಗೆ ಬಹಳಷ್ಟು ಉದ್ದ ವ್ಯಾಪ್ತಿ ಹೊಂದಿದೆ. ಇದಕ್ಕೆ ಎರಡೂ ಬದಿಯೂ ಕಾಂಪೌAಡ್ ಗೋಡೆ ಇದ್ದು, ಈ ಆವರಣದೊಳಗೆ ಈ ಹಿಂದೆ ಇದ್ದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಈಗ ಕಾರ್ಯನಿರ್ವಹಿಸುತ್ತಿಲ್ಲ. ಇದೇ ಆವರಣದಲ್ಲಿ ನಗರಸಭೆಯವರು ಪತ್ರಿಕಾ ಭವನಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಇನ್ನುಳಿದಂತೆ ಬಹಳಷ್ಟು ಜಾಗ ಖಾಲಿ ಬಿದ್ದಿದೆ. ಈ ಜಾಗದಲ್ಲಿ ಕಸ-ಕಡ್ಡಿ ಬೆಳೆದು ನಿಂತಿದೆ. ಸಾರ್ವಜನಿಕ ಉಪಯೋಗಕ್ಕೆ ಸುಂದರ ಉದ್ಯಾನ ನಿರ್ಮಿಸಬಹುದಾಗಿದ್ದು, ಆದರೆ ಆಸಕ್ತಿ, ಬೇಜವಾಬ್ದಾರಿಯಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗೆ ನಿರುಪಯುಕ್ತವಾಗಿದೆ. ಈ ಜಾಗದ ಪಕ್ಕದ ಸಾರ್ವಜನಿಕ ರಸ್ತೆ ಬಳಿ ‘ನಗರಸಭೆಯ ಸಾರ್ವಜನಿಕ ಸ್ವತ್ತು’ ಎಂಬ ನಾಮಫಲಕ ಹಾಕಿ ಕೈತೊಳೆದುಕೊಳ್ಳಲಾಗಿದೆ.
ಗಂಗಾನಗರದಲ್ಲಿ ಮುಳ್ಳುಕಂಟಿ ಪಾಲಾದ ಆಸ್ತಿಗಳು
ವಾರ್ಡ್ ನಂ.೧೪ರ ಗಂಗಾನಗರದ (ವಿದ್ಯಾನಗರ) ವ್ಯಾಪ್ತಿಯಲ್ಲಿರುವ ಚಾಲೇಂಜಿAಗ್ ಕೋಚಿಂಗ್ ಸೆಂಟರ್, ವಿಕಾಸ ಭಾರತಿ ಶಾಲೆ ಸೇರಿದಂತೆ ಇನ್ನೂ ನಾಲ್ಕಾರು ಕಡೆ ನಗರಸಭೆಯ ‘ನಾಗರಿಕ ಸೌಲಭ್ಯದ ಜಾಗೆ’ಗಳು ಮುಳ್ಳುಕಂಟಿಗಳ ಪಾಲಾಗಿವೆ. ಹಲವು ಕೆಲವು ಕಡೆ ಚರಂಡಿ ನೀರು ಮಡುಗಟ್ಟಿ ಹೊಂಡ ನಿರ್ಮಾಣವಾಗಿದೆ. ಕೆಲ ಆಸ್ತಿಗಳ ವ್ಯಾಪ್ತಿಯಲ್ಲಿ ಸಿಮೆಂಟ್ ಕಂಬ, ಫಲಕ, ತಂತಿಬೇಲಿ ಹಾಕಿದ್ದು ಬಿಟ್ಟರೆ ಇನ್ನೂ ಬಹಳಷ್ಟು ಕಡೆ ಹಾಗೆಯೇ ಬಿಡಲಾಗಿದೆ.
ಆಸ್ತಿ ರಕ್ಷಣೆಗೆ ಬೇಜವಾಬ್ದಾರಿ ?
ನಗರದಲ್ಲಿ ಅಂದಾಜು ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದರೂ ನೈರ್ಮಲ್ಯ, ಪರಿಸರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಸಾರ್ವಜನಿಕ ಉದ್ಯಾನಗಳ ಕೊರತೆ ಕಾಡುತ್ತಿದೆ. ಸಾರ್ವಜನಿಕರ ಸೌಲಭ್ಯಕ್ಕಾಗಿ ತೆಗೆದಿರಿಸಿದ ಜಾಗಗಳು ಮುಳ್ಳಬೇಲಿ, ಕಸ-ಕಡ್ಡಿ, ಚರಂಡಿ ನೀರಿನ ತಾಣಗಳಾಗಿ ಮಾರ್ಪಟ್ಟಿದ್ದರೂ ಅವುಗಳನ್ನು ರಕ್ಷಿಸಿ ಮೂಲ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂಬುದು ನಾಗರಿಕರ ಆರೋಪವಾಗಿದೆ.
ರಾಯಚೂರು ಜಿಲ್ಲೆಯಲ್ಲೇ ಸಿಂಧನೂರು ನಗರ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವುದರಿAದ ಯಾವುದೇ ವಾರ್ಡ್ಗಳಲ್ಲೂ ಪ್ಲಾಟುಗಳ ಬೆಲೆ ಗಗನಮುಖಿಯಾಗಿದ್ದು, ಲಕ್ಷಾಂತರ ರೂಪಾಯಿ ಬಾಳುತ್ತಿವೆ. ಪ್ರತಿ ವಾರ್ಡ್ನಲ್ಲೂ ನಗರಸಭೆಯ ನಿರ್ಲಕ್ಷಿತ ಆಸ್ತಿ-ಪಾಸ್ತಿಯ ಲೆಕ್ಕ ಹಾಕುತ್ತ ಹೋದರೆ ಕೋಟ್ಯಂತರ ರೂಪಾಯಿ ಆಗುತ್ತದೆ. ನಿರ್ಲಕ್ಷö್ಯ ವಹಿಸುವುದರಿಂದ ಖಾಸಗಿ ವ್ಯಕ್ತಿಗಳು ಅತಿಕ್ರಮಿಸುವ ಸಾಧ್ಯತೆ ಇರುತ್ತದೆ, ಇಲ್ಲದೇ ಹೋದರೆ ಕೊಚ್ಚೆ-ಕೊಳಚೆಯ ತಾಣಗಳಾಗಿ ಮಾರ್ಪಟ್ಟು ನಿರುಪಯುಕ್ತವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕಳೆದು ಹೋದ ಉದ್ಯಾನಗಳು ?
ಸಿಂಧನೂರು ನಗರದಲ್ಲಿ ೩೧ ವಾರ್ಡ್ಗಳಿದ್ದು, ಈ ಹಿಂದೆ ಸಾರ್ವಜನಿಕ ಉಪಯೋಗಕ್ಕಾಗಿ ಅಲ್ಲಲ್ಲಿ ಗುರುತಿಸಿದ್ದ ಉದ್ಯಾನಗಳು ಹಾಗೂ ಸಾರ್ವಜನಿಕ ಜಾಗೆಗಳು ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ಕೆಲವು ಉದ್ಯಾನಗಳ ಕಾಗದದಲ್ಲಿ ಮಾತ್ರ ಉಳಿದಿದ್ದು, ಬಹಳಷ್ಟು ಕಡೆ ಅನ್ಯರಪಾಲಾಗಿವೆ ಎಂಬ ಆರೋಪಗಳಿದ್ದು, ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಆ ಬಗ್ಗೆ ಚಕಾರವೆತ್ತದೇ ಸುಮ್ಮನಿದ್ದಾರೆ ಎಂದು ಹೇಳಲಾಗುತ್ತಿದೆ. ಹೊಸ ಲೇಔಟ್ ಸೇರಿದಂತೆ ಹಲವು ಕಡೆ ನಗರಸಭೆ ತೆಗೆದಿರಿಸಿದ ಸಾರ್ವಜನಿಕ ಸ್ವತ್ತುಗಳನ್ನು ರಕ್ಷಣೆ ಮಾಡದೇ ಹೋದರೆ ಇವುಗಳು ಕೂಡ ‘ಅನ್ಯರಪಾಲಾಗುವುದು’ ಗ್ಯಾರಂಟಿ ಎನ್ನುತ್ತಾರೆ ಸಂಘಟನೆಯೊAದರ ಮುಖ್ಯಸ್ಥರೊಬ್ಬರು.
ಸ್ವತ್ತುಗಳ ಗುರುತೇ ಇಲ್ಲಒಳಬಳ್ಳಾರಿ ರಸ್ತೆ ಮಾರ್ಗ, ರಾಯಚೂರು ರಸ್ತೆ ಮಾರ್ಗ, ಗಂಗಾವತಿ ರಸ್ತೆ ಮಾರ್ಗ, ಕುಷ್ಟಗಿ ರಸ್ತೆ ಮಾರ್ಗ ಸೇರಿದಂತೆ ನಗರದ ೩೧ ವಾರ್ಡ್ ವ್ಯಾಪ್ತಿಯಲ್ಲಿ ಹೊಸದಾಗಿ ಲೇಔಟ್‌ಗಳು ಪ್ರಗತಿ ಹಂತದಲ್ಲಿದ್ದು ನಗರಸಭೆಯ ಸ್ವತ್ತುಗಳನ್ನು ಸಮರ್ಪಕವಾಗಿ ಗುರುತಿಸಿ, ಫಲಕ ಹಾಕುವ ಕೆಲಸಗಳಾಗಿಲ್ಲ. ಹಾಗಾಗಿ ಹೊಸ ಲೇಔಟ್‌ಗಳು ಸೇರಿದಂತೆ ಹಳೆ ಲೇಔಟ್‌ಗಳಲ್ಲಿರುವ ನಗರಸಭೆಯ ಆಸ್ತಿಗಳನ್ನು ಗುರುತಿಸಿ ಅವುಗಳನ್ನು ನಾಗರಿಕರ ಸೌಲಭ್ಯಕ್ಕೆ ಬಳಸಬೇಕಿದೆ.
‘೩೧ ವಾರ್ಡ್ಗಳಲ್ಲಿರುವ ನಗರಸಭೆಯ ಸ್ವತ್ತುಗಳನ್ನು ಸುಪರ್ದಿಗೆ ಪಡೆಯಲಿ’
ನಗರದ ೩೧ ವಾರ್ಡ್ಗಳಲ್ಲಿ ನಾಗರಿಕ ಸೌಲಭ್ಯಕ್ಕಾಗಿ, ಉದ್ಯಾನಕ್ಕಾಗಿ ತೆಗೆದಿರಿಸಿದ ಜಾಗಗಳನ್ನು ನಗರಸಭೆ ಆಡಳಿತ ತನ್ನ ಸುಪರ್ದಿಗೆ ಪಡೆಯಬೇಕು. ಎಲ್ಲೆಲ್ಲಿ ನಗರಸಭೆಯ ಸ್ವತ್ತುಗಳಿವೆ ಎಂಬುದರ ಕುರಿತು ಪ್ರಕಟಣೆ ಹೊರಡಿಸಿ, ಆ ಜಾಗಗಳಲ್ಲಿ ಉದ್ಯಾನ, ಹಿರಿಯ ನಾಗರಿಕರ ವಿಶ್ರಾಂತಿಗೆ ವ್ಯವಸ್ಥೆ, ಮಕ್ಕಳ ಆಟದ ಮೈದಾನ ಸೇರಿದಂತೆ ಜನಸಾಮಾನ್ಯರ ಅಗತ್ಯತೆಗಳಿಗೆ ಬಳಕೆ ಮಾಡುವ ಮೂಲಕ ಒತ್ತುವರಿ ಇಲ್ಲವೇ ಅತಿಕ್ರಮಣವಾಗುವುದನ್ನು ತಡೆಯಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.