(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜುಲೈ 12
ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನ ಸಂಚಾರಿ ಪೊಲೀಸ್ ಠಾಣೆ ಬಳಿ ನಿರ್ಮಾಣವಾಗುತ್ತಿರುವ ತಾಯಿ, ಮಕ್ಕಳ ಆಸ್ಪತ್ರೆ ಕಾಮಗಾರಿ ಕಳೆದ ಕೆಲವು ದಿನಗಳಿಂದ ಚುರುಕುಗೊಂಡಿದ್ದು, ಕಟ್ಟಡದ ಹೊರಮೈಗೆ ಸುಣ್ಣ ಬಳಿಯುವ ಕೆಲಸ ನಡೆದಿದೆ. ನಾನಾ ಕಾರಣಗಳಿಂದ ಕಾಮಗಾರಿ ಕೆಲವು ದಿನಗಳಿಂದ ನನೆಗುದಿ ಬಿದ್ದಿತ್ತು. ಆದರೆ ಇತ್ತೀಚೆಗೆ ಕೆಲಸ ಪುನಃ ಪ್ರಾರಂಭಗೊಂಡಿದೆ.
‘ಸರ್ಕಾರ ತಾಲೂಕಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮಂಜೂರಾಗಿದ್ದು, ಸರ್ಕಾರದಿಂದ 11 ಕೋಟಿ ರೂಪಾಯಿ ಮಂಜೂರಾಗಿದೆ. ಇದು 60 ಹಾಸಿಗೆಯ ಸೌಲಭ್ಯವುಳ್ಳ ಆಸ್ಪತ್ರೆಯಾಗಿದ್ದು, 3 ಜನ ಪ್ರಸೂತಿ ತಜ್ಞರು ಸೇರಿದಂತೆ ಆರೋಗ್ಯ ಸಿಬ್ಬಂದಿಯ ಅವಶ್ಯಕತೆ ಇದೆ’ ಎಂದು ಏಪ್ರಿಲ್ 28, 2020ರಂದು ಅಂದಿನ ಶಾಸಕರಾಗಿದ್ದ ವೆಂಕಟರಾವ್ ನಾಡಗೌಡ ಹೇಳಿದ್ದರು. ಆದರೆ ನಾಲ್ಕು ವರ್ಷ ಗತಿಸಿದರೂ ಇನ್ನೂ ಆಸ್ಪತ್ರೆ ಕಟ್ಟಡ ಕಾಮಗಾರಿ ಕುಂಟುತ್ತಾ ಸಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ರೋಗಿಗಳಿಂದ ತುಂಬಿ ತುಳುಕುತ್ತಿರುವ ಸಾರ್ವಜನಿಕ ಆಸ್ಪತ್ರೆ
ನಗರದ 100 ಹಾಸಿಗೆ ಸಾಮರ್ಥ್ಯದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ಸೇರಿದಂತೆ ಇನ್ನಿತರೆ ಶಸ್ತçಚಿಕಿತ್ಸೆಗಳಿಗೆ ವೈದ್ಯರು ಕೊಠಡಿಗಳನ್ನು ಹೊಂದಿಸುವುದೇ ಸಮಸ್ಯೆಯಾಗಿದೆ.ಕೆಲವೊಂದು ಬಾರಿ ಆಸ್ಪತ್ರೆಗೆ ನೂರಾರು ರೋಗಿಗಳು ಬರುವುದರಿಂದ ಜನಜಂಗುಳಿಯಿಂದ ತುಂಬಿ ತುಳುಕುತ್ತದೆ. ರೋಗಿಗಳಿಗೆ ತಕ್ಕಂತೆ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಸಲಕರಣೆ, ಸಾಮಗ್ರಿ ಸೇರಿದಂತೆ ಮೂಲ ಸೌಕರ್ಯಗಳ ಅಭಾವದಿಂದಾಗಿ ವೈದ್ಯರು ದಿನವೂ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಇದರಿಂದ ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ. ವೈದ್ಯರ ಹೆಣಗಾಟ
ಸರ್ಕಾರಿ ಆಸ್ಪತ್ರೆಗೆಯಲ್ಲಿ ಸೌಲಭ್ಯದ ಕೊರತೆಯಿಂದಾಗಿ ಅತಿಸೂಕ್ಷ್ಮ ಬಾಣಂತಿಯರ ವಾರ್ಡ್ಗಳಲ್ಲಿ ಅಗತ್ಯ ಸೌಲಭ್ಯಗಳು, ಸೌಕರ್ಯಗಳು ಇಲ್ಲ. ಇರುವ ಸೌಕರ್ಯಗಳಲ್ಲೇ ಇಲ್ಲಿನ ಮುಖ್ಯ ವೈದ್ಯರು ಸೇರಿದಂತೆ ಸಿಬ್ಬಂದಿ ಚಿಕಿತ್ಸೆ ನೀಡಲು ಹೆಣಗಾಡುತ್ತಿದ್ದಾರೆ. ಇನ್ನೂ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿಯರಿಗೆ ಹೆಚ್ಚಿನ ಅನುಕೂಲಗಳು ಇಲ್ಲದ ಕಾರಣ ಹೆರಿಗೆ ಸಂದರ್ಭದಲ್ಲಿ ತೊಂದರೆ ಅನುಭವಿಸುವ ಸಾಧ್ಯತೆಯನ್ನು ತಳ್ಳಿಹಾಕುವ ಆಗಿಲ್ಲ ಎಂದು ನಾಗರಿಕರೊಬ್ಬರು ಆರೋಪಿಸುತ್ತಾರೆ.
ಡೆಂಗೆ ಆತಂಕ, ಚಿಕಿತ್ಸೆಗೆ ಪರದಾಟ
ಇನ್ನೂ ಕಳೆದ ಕೆಲವು ದಿನಗಳಿಂದ ಡೆಂಗೆ ಹಾವಳಿಯಿಂದಾಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚಿದೆ. ಅಗತ್ಯ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಬಂದ ರೋಗಿಗಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಖಾಸಗಿ ಆಸ್ಪತ್ರೆ ದಾರಿ ಹಿಡಿಯುತ್ತಿದ್ದಾರೆ. ರೋಗಿಗಳ ಸಂಖ್ಯೆಗೆ ತಕ್ಕಂತೆ ಆಸ್ಪತ್ರೆಯ ಕಟ್ಟಡ ಚಿಕ್ಕದಾಗಿದ್ದು, ಜಾಗದ ಕೊರತೆ, ಹೊರ ಮತ್ತು ಒಳಾವರಣದ ವಿಸ್ತೀರ್ಣ ಕಡಿಮೆ ಇರುವುದರಿಂದ ಕೆಲವೊಂದು ಬಾರಿ ಜನಜಾತ್ರೆಯಂತಾಗುತ್ತದೆ. ಹಾಗಾಗಿ ಕೂಡಲೇ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಬೇಗ ಆರಂಭಿಸಿದರೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ವಿಶೇಷವಾಗಿ ಚಿಕಿತ್ಸೆ ಒದಗಿಸಲು ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.