ನಮ್ಮ ಸಿಂಧನೂರು, ಎಪ್ರಿಲ್ 27
ನಗರದ ಕುಷ್ಟಗಿ ಮಾರ್ಗದ ರಸ್ತೆಯಲ್ಲಿರುವ ಅಂಬೇಡ್ಕರ್ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿನಿಯರು ಕಳಪೆ ಆಹಾರ ಸೇವಿಸಿ ಅಸ್ವಸ್ಥಗೊಂಡ ಪರಿಣಾಮ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಘಟನೆ ಶುಕ್ರವಾರ ಸಾಯಂಕಾಲ ನಡೆದಿದೆ. ಮಧ್ಯಾಹ್ನ ಆಹಾರ ಸೇವಿಸಿದ್ದ ವಿದ್ಯಾರ್ಥಿನಿಯರಿಗೆ ಹೊಟ್ಟೆನೋವು, ಕೆಲವರಿಗೆ ವಾಂತಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಅಸ್ವಸ್ಥತೆಯಿಂದ ಬಳಲಿದ ವಿದ್ಯಾರ್ಥಿನಿಯರನ್ನು ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಹುತೇಕ ಎಲ್ಲ ವಿದ್ಯಾರ್ಥಿನಿಯರು ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಗೆ ಇಲಾಖೆಗೆಯ ಜಿಲ್ಲಾ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿದರು.
ಪಾಲಕರ ಆಗ್ರಹ
ಕಳೆದ ಹಲವು ದಿನಗಳಿಂದ ಈ ಹಾಸ್ಟೆಲ್ನಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು, ವಾರ್ಡನ್ಗಳು ಸೇರಿದಂತೆ ಸಿಬ್ಬಂದಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದ ವಿದ್ಯಾರ್ಥಿನಿಯರು ಸಮಸ್ಯೆ ಎದುರಿಸುವಂತಾಗಿದೆ. ಆಹಾರ ತಯಾರಿಸಿದ ನಂತರ ವಾರ್ಡನ್ ಸೇವಿಸಬೇಕೆನ್ನುವ ನಿಯಮವಿದ್ದರೂ ಆ ಬಗ್ಗೆ ಯಾರೂ ಗಮನಹರಿಸುವುದಿಲ್ಲ. ಇನ್ನೂ ಈ ತರಹದ ಘಟನೆಗಳು ಸಂಭವಿಸಿದಾಗ ಎಲ್ಲರೂ ಓಡೋಡಿ ಬಂದು, ನಾಲ್ಕಾರು ಭರವಸೆಯ ಮಾತುಗಳನ್ನಾಡಿ ಮಾಯವಾಗುತ್ತಾರೆ. ಇದರಿಂದ ಪದೇ ಪದೆ ಇಂತಹ ಘಟನೆಗಳು ಮರುಕಳಿಸುತ್ತವೆ. ಹಾಸ್ಟೆಲ್ಗಳಲ್ಲಿ ಸ್ವಚ್ಛತೆ, ಶುದ್ಧ ಕುಡಿವ ನೀರು, ಆಹಾರ ತಯಾರಿಕೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳದೇ ಇರುವುದು ಹಾಗೂ ಗುಣಮಟ್ಟದ ಆಹಾರ ಧಾನ್ಯ, ತರಕಾರಿ ಬಳಸದೇ ಇರುವುದೇ ಇಂತಹ ಘಟನೆಗಳಿಗೆ ಕಾರಣವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಆಲೋಚಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಹಾಗೂ ಈ ಘಟನೆಯಲ್ಲಿ ಲೋಪವೆಸಗಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ವಿದ್ಯಾರ್ಥಿನಿಯರ ಪಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.