ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 16
ತಾಲೂಕಿನಾದ್ಯಂತ ಕಳೆದ ಎರಡ್ಮೂರು ದಿನಗಳಿಂದ ಅಕಾಲಿಕವಾಗಿ ಸುರಿದ ಮಳೆ ಹಾಗೂ ಗಾಳಿಗೆ ಭತ್ತ ನೆಲಕ್ಕುರಳಿದ್ದು, ವಿವಿಧ ಗ್ರಾಮಗಳ ಜಮೀನುಗಳಿಗೆ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಭೇಟಿ ನೀಡಿದರು. ಅವರೊಂದಿಗೆ ತಹಸೀಲ್ದಾರ್, ಸಹಾಯಕ ಕೃಷಿ ಅಧಿಕಾರಿ ನಜೀರ್ ಅಹ್ಮದ್ ಸೇರಿದಂತೆ ಕಂದಾಯ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದರು.
ಗೊರೇಬಾಳ, ಜಾಲಿಹಾಳ, ಸಾಲಗುಂದಾ ಸೇರಿದಂತೆ ವಿವಿಧ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಕೇಳಲಾಯಿತು. ಅಕಾಲಿಕ ಮಳೆಯಿಂದಾಗಿ ಭತ್ತ ನೆಲಕ್ಕುರುಳಿದ ಹಿನ್ನೆಲೆಯಲ್ಲಿ ಹಾನಿಗೀಡಾದ ಪ್ರದೇಶಗಳಲ್ಲಿ ಕೃಷಿ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೆಕಾರ್ಯ ಪ್ರಕ್ರಿಯೆ ಚುರುಕಾಗಿ ನಡೆದಿದೆ.
“ಸರ್ಕಾರದ ಗಮನ ಸೆಳೆಯುವೆ”
ಈ ಸಂದರ್ಭದಲ್ಲಿ ಮಾತನಾಡಿದ ಬಸನಗೌಡ ಬಾದರ್ಲಿ ಅವರು “ಈಗಾಗಲೇ ಕೃಷಿ ಸಚಿವರೊಂದಿಗೆ ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ಈ ಜಂಟಿ ಸರ್ವೆಯ ವರದಿ ಬಂದ ನಂತರ ಹಾನಿ ಪ್ರಮಾಣವನ್ನು ಆಧರಿಸಿ ಪರಿಹಾರ ನೀಡಲು ಸರ್ಕಾರದ ಗಮನ ಸೆಳೆಯುವುದಾಗಿ” ತಿಳಿಸಿದ್ದಾರೆ. ಈ ವೇಳೆ ತಹಸೀಲ್ದಾರ್ ಅರುಣ ದೇಸಾಯಿ, ಸಹಾಯಕ ಕೃಷಿ ಅಧಿಕಾರಿ ನಜೀರ್ ಅಹ್ಮದ್ ಸೇರಿದಂತೆ ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.