ನಮ್ಮ ಸಿಂಧನೂರು, ಜುಲೈ 22
“ನಗರದ ತಹಸಿಲ್ ಕಾರ್ಯಾಲಯದ ಮುಂಭಾಗದ ಗಾಂಧಿಸರ್ಕಲ್‌ನಲ್ಲಿ ಅಳವಡಿಸಿದ್ದ ನೂತನ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಭಾವಚಿತ್ರದ ಬೃಹತ್ತಾದ ಕಬ್ಬಿಣದ ಕಟೌಟ್ ಬಿದ್ದು ಗಾಯಗೊಂಡ ಚಿಟ್ಟಿಬಾಬು ಬೂದಿವಾಳಕ್ಯಾಂಪ್ ಚಿಟ್ಟಿಬಾಬು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ ಸಂದರ್ಭದಲ್ಲಿ, ಆಸ್ಪತ್ರೆಗೆ ಏಕಾಏಕಿ ಬಂದು ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಸೋದರ ಸೋಮನಗೌಡ ಬಾದರ್ಲಿ ತಮಗೆ ಧಮಕಿ ಹಾಕಿದ್ದಾರೆ” ಎಂದು ವಕೀಲ ಬಾಲಸ್ವಾಮಿ ಅವರು ಸೋಮವಾರ ಆರೋಪಿಸಿದ್ದಾರೆ.
“ಮಧ್ಯಾಹ್ನ ಕೋರ್ಟ್ ಆವರಣದಿಂದ ಹೊರಬಂದ ಸಂದರ್ಭದಲ್ಲಿ, ಗಾಂಧಿಸರ್ಕಲ್‌ನಲ್ಲಿ ಜನ ನಿಂತಿದ್ದನ್ನು ಕಂಡು ಅಲ್ಲಿಗೆ ಹೋದಾಗ, ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಭಾವಚಿತ್ರವಿದ್ದ ಕಬ್ಬಿಣದ ಕಟೌಟ್ ಬಿದ್ದು ಸ್ನೇಹಿತ ಚಿಟ್ಟಿಬಾಬು ಅವರು ಗಾಯಗೊಂಡಿದ್ದರು. ಆ ಕೂಡಲೇ ನಾನು ಮತ್ತು ನಮ್ಮ ಸ್ನೇಹಿತರೊಡಗೂಡಿ ಕೂಡಲೇ ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದೆವು. ಅಲ್ಲಿ ಎಂ.ಎಲ್.ಸಿ ಮಾಡಿಸಿಕೊಂಡು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ನಗರದ ಶಾಂತಿ ಆಸ್ಪತ್ರೆಗೆ ದಾಖಲಿಸಿದೆವು. ಈ ಸಂದರ್ಭದಲ್ಲಿ ಆಸ್ಪತ್ರೆಗೆ ಏಕಾಏಕಿ ಬಂದ ಎಮ್ಮೆಲ್ಸಿ ಬಸನಗೌಡ ಬಾದರ್ಲಿ ಅವರ ಸಹೋದರ ಸೋಮನಗೌಡ ಬಾದರ್ಲಿ, ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೇ, ಪೊಲೀಸರನ್ನೇಕೆ ಕರೆಸಿದ್ರಿ, ಇದರಲ್ಲಿ ರಾಜಕೀಯ ಮಾಡ್ತೀರಾ ?. ನೀವು ಹೇಗೆ ಪ್ರಾಕ್ಟೀಸ್ ಮಾಡ್ತೀರಾ ನೋಡ್ತೀನಿ ? ಎಂದು ಹೆದರಿಸಿ ಜೀವ ಬೆದರಿಕೆ ಹಾಕಿ ಹೋಗಿದ್ದಾರೆ. ವಕೀಲರಿಗೇ ಇಂತಹ ಪರಿಸ್ಥಿತಿಯಾದರೆ, ಜನಸಾಮಾನ್ಯರ ಗತಿಯೇನು ?” ಎಂದು ಬಾಲಸ್ವಾಮಿ ಅವರು ದೂರಿದ್ದಾರೆ.
ಕಟೌಟ್ ಪರ್ಮಿಶನ್ ಕುರಿತಂತೆ ಕಟೌಟ್ ಹಾಕಿದವರು ನಗರಸಭೆಯಿಂದ ಪಡೆದಿರುವರೇ ? ಎನ್ನುವ ಮಾಧ್ಯಮದವರ ಪ್ರಶ್ನೆಗೆ, “ಚಿಟ್ಟಿಬಾಬು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ಗದ್ದಲದಲ್ಲಿ ಇದ್ದೇವೆ. ಹಾಗಾಗಿ ಆ ಬಗ್ಗೆ ವಿಚಾರಿಸಿಲ್ಲ. ಯಾವಾಗ ಪರವಾನಗಿ ಪಡೆದಿದ್ದಾರೆ ?, ಯಾರು ಪರವಾನಗಿ ಕೊಟ್ಟಿದ್ದಾರೆ, ಏನು ಎತ್ತ ಎನ್ನುವ ಬಗ್ಗೆ ನಗರಸಭೆ ಅಧಿಕಾರಿಗಳನ್ನು ತದನಂತರ ವಿಚಾರಿಸಲಾಗುವುದು” ಎಂದು ಬಾಲಸ್ವಾಮಿ ವಕೀಲ ಅವರು ಹೇಳಿದ್ದಾರೆ.
ವಿಡಿಯೋ ವೈರಲ್
ಎಮ್ಮೆಲ್ಸಿ ಸೋದರ ಸೋಮನಾಥಗೌಡ ಬಾದರ್ಲಿ ಅವರು, ತಮಗೆ ಧಮಕಿ ಹಾಕಿದ್ದಾರೆನ್ನುವ ಬಗ್ಗೆ ವಕೀಲ ಬಾಲಸ್ವಾಮಿ ಅವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.