ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 2
ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಹಾಗೂ ತೋಟಗಾರಿಕೆ ಇಲಾಖೆಯ ಜಾಗಕ್ಕೆ ಸಂಬಂಧಿಸಿ, 6-01-2026 ರಂದು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಹಂಪನಗೌಡ ಬಾದರ್ಲಿ ಅವರು ಭರವಸೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಧರಣಿ ಹೋರಾಟವನ್ನು ಮುಂದೂಡಲಾಗಿದೆ ಎಂದು ಬೀದಿ ಬದಿ ವ್ಯಾಪಾರಿಗಳ ಹೋರಾಟ ಸಮಿತಿ ಸಂಚಾಲಕ ಡಿ.ಎಚ್.ಪೂಜಾರ್ ತಿಳಿಸಿದ್ದಾರೆ.
ಆಹಾರ ಗೋದಾಮು ಬಳಿ 200 ವಾಣಿಜ್ಯ ಮಳಿಗೆ ನಿರ್ಮಾಣದ ಕ್ರಿಯಾಯೋಜನೆ
ಈ ಕುರಿತು ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, “ದಿನಾಂಕ 01-01-2026 ರಂದು ಸಂಜೆ ಸರ್ಕ್ಯೂಟ್ ಹೌಸನಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ, ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲ್ಶೆಟ್ಟಿ. ತಹಶೀಲ್ದಾರ್ ಅರುಣ ದೇಸಾಯಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮತ್ತು ಡಿವೈಎಸ್ಪಿ ಚಂದ್ರಶೇಖರ ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕುರಿತು 15 ದಿನದೊಳಗೆ ಸರ್ವೆ ನಡೆಸಿ, ಕ್ರಮ ಜರುಗಿಸಲು ಭರವಸೆ ನೀಡಿದ್ದಾರೆ. ಇದಲ್ಲದೇ ಆಹಾರ ಇಲಾಖೆಯ ಗೋದಾಮು ಜಾಗದಲ್ಲಿ 104 ಕೋಟಿ ರೂಪಾಯಿ ವೆಚ್ಚದಲ್ಲಿ ಮೂರು ಮಹಡಿಯಲ್ಲಿ 200 ಮಳಿಗೆಗಳು ನಿರ್ಮಾಣ ಮಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಬಾಡಿಗೆ ಕೊಡುವ ಕ್ರಿಯಾಯೋಜನೆ ತಯಾರಿಸುವ ತೀರ್ಮಾನವಾಗಿದೆ ಎಂದು ವಿವರಿಸಿದ್ದಾರೆ. ಒಂದು ವರ್ಷಗಳು ಕಳೆದರೂ ಇಲ್ಲಿಯವರೆಗೂ ಏನೊಂದು ಸಾಧ್ಯವಾಗಿರುವುದಿಲ್ಲ. ಸರ್ಕಾರಿ ತೋಟಗಾರಿಕೆ ಇಲಾಖೆಯ ಕಾಂಪೌಂಡ್ ಪಕ್ಕದಲ್ಲಿ ಬಾಡಿಗೆ ರೂಪದಲ್ಲಿ ತಾತ್ಕಾಲಿಕ ವ್ಯಾಪಾರ ಮಾಡಲು ಜಾಗ ಕೊಡಬೇಕೆಂದು ಪಟ್ಟು ಹಿಡಿಯಲಾಯಿತು” ಎಂದು ತಿಳಿಸಿದ್ದಾರೆ.
‘ಆದಷ್ಟು ಶೀಘ್ರ ಬೀದಿ ವ್ಯಾಪಾರಸ್ಥರ ಸಮಸ್ಯೆ ಪರಿಹರಿಸಲಾಗುವುದು’
ದಿನಾಂಕ: 02-01-2026ರಂದು ಹೋರಾಟ ಸಮಿತಿಯವರೊಂದಿಗೆ ನಡೆದ ಸಭೆಯಲ್ಲಿ ಶಾಸಕರು ಕೆಲವೊತ್ತು ಚರ್ಚಿಸಿದರು. ಈ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಸ್ಥರು ಕಳೆದ ಒಂದು ವರ್ಷದಿಂದ ಅನುಭವಿಸುತ್ತಿರುವ ಆರ್ಥಿಕ ಸಮಸ್ಯೆ, ಕುಟುಂಬಗಳು ಅನುಭವಿಸುತ್ತಿರುವ ಮಾನಸಿಕ ಯಾತನೆ ಸೇರಿದಂತೆ ಹಲವು ವಿಷಯಗಳನ್ನು ಶಾಸಕರ ಗಮನಕ್ಕೆ ತರಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಹಂಪನಗೌಡ ಬಾದರ್ಲಿ ಅವರು, ಆಹಾರ ಇಲಾಖೆ ಗೋದಾಮು ಜಾಗದಲ್ಲಿ 104 ಕೋಟಿ ರೂ.ವೆಚ್ಚದಲ್ಲಿ 200 ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆದಿದೆ ಎಂದು ತಿಳಿಸಿದರು. ಅಲ್ಲದೇ ತೋಟಗಾರಿಕೆ ಇಲಾಖೆಯ ಜಾಗಕ್ಕೆ ಸಂಬಂಧಿಸಿ, 6-01-2026 ರಂದು ಸಭೆ ನಡೆಸಿ ಅಂತಿಮ ತೀರ್ಮಾನ ಮಾಡಲಾಗುವುದು. ಈ ಸಭೆಯಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರನ್ನು ಇತರೆ ಅಧಿಕಾರಿಗಳನ್ನು ಕರೆಯಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ” ಎಂದು ಪೂಜಾರ್ ಹೇಳಿದ್ದಾರೆ. ಈ ನಡುವೆ ಸಮಿತಿಯ ಸದಸ್ಯರು ತೋಟಗಾರಿಕೆ ಇಲಾಖೆಯ ಭೂಮಿಯ ಪೈಕಿ 2 ಎಕರೆ ಭೂಮಿ ಬೀದಿ ಬದಿ ವ್ಯಾಪಾರಸ್ಥರಿಗೆ ಒದಗಿಸಿಕೊಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ಒತ್ತಾಯಿಸಲಾಯಿತು” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕರು ಹಾಗೂ ಕರ್ನಾಟಕ ರೈತ ಸಂಘ (ಎಐಯುಕೆಎಸ್) ರಾಜ್ಯಾಧ್ಯಕ್ಷರಾದ ಡಿ.ಹೆಚ್.ಪೂಜಾರ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಚಂದ್ರಶೇಖರ ಗೋರೆಬಾಳ, ಜಮಾಅತೆ ಇಸ್ಲಾಂ ಹಿಂದ್ ಸಂಘಟನೆಯ ತಾಲೂಕು ಅಧ್ಯಕ್ಷ ಹುಸೇನ್ಸಾಬ್, ಮನುಜಮತ ಬಳಗದ ಬಸವರಾಜ ಬಾದರ್ಲಿ, ಚಿಟ್ಟಿಬಾಬು, ನಾರಾಯಣ ಬೆಳಗುರ್ಕಿ, ಬೀದಿಬದಿ ವ್ಯಾಪಾರಿಗಳ ಸಂಘದ ಖಾಸಿಂಸಾಬ್, ಶಾಮಿದ್ಸಾಬ್, ರಸೂಲ್ಸಾಬ್, ರಹೀಮ್ ಇನ್ನಿತರರಿದ್ದರು.

