ಸ್ಪೆಷಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 10
ತುಂಗಭದ್ರಾ ಜಲಾಶಯಕ್ಕೆ ಹೊಸ ಕ್ರಸ್ಟ್ಗೇಟ್ಗಳನ್ನು ಅಳವಡಿಸಿರುತ್ತಿರುವ ಹಿನ್ನೆಲೆಯಲ್ಲಿ, ಎರಡನೇ ಬೆಳೆಗೆ ನೀರು ಹರಿಸುವುದನ್ನು ಕೈಬಿಡಲಾಗಿದೆ. ಜನವರಿ 10, 2026ರವರೆಗೆ ಮಾತ್ರ ಎಡದಂಡೆ ಮುಖ್ಯ ನಾಲೆಗೆ ನೀರು ಹರಿಸಲು 125ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನೀರು ಸ್ಥಗಿತಗೊಳ್ಳಲು 31 ದಿನ ಬಾಕಿ ಉಳಿದಿದ್ದು, ನೀರಿನ ಪ್ರಮಾಣ ಕುಸಿದ ಕೆರೆಗಳನ್ನು ಭರ್ತಿ ಮಾಡಲು ಸಂಬAಧಿಸಿದ ಇಲಾಖೆಯವರು ಆಸಕ್ತಿ ತಳೆದಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಸಿಂಧನೂರು ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಕುಡಿಯುವ ನೀರಿನ ಕೆರೆಗಳಲ್ಲಿ, ನೀರಿನ ಪ್ರಮಾಣ ಕುಸಿತ ಕಂಡಿದ್ದು, ಕೆಲ ಕೆರೆಗಳು ಡಿಸೆಂಬರ್ನಲ್ಲೇ ತಳಮಟ್ಟಕ್ಕೆ ಸರಿದಿವೆ. ಆದರೆ ತಾಲೂಕು ಪಂಚಾಯಿತಿ ಆಡಳಿತವಾಗಲಿ, ಜಿಲ್ಲಾಮಟ್ಟದ ಅಧಿಕಾರಿಗಳಾಗಲೀ ಈ ಕುರಿತು ಗಂಭೀರವಾಗಿ ಪರಿಗಣಿಸದಿರುವುದರಿಂದ ಮಾರ್ಚ್ ಮುನ್ನವೇ ನೀರಿನ ಸಮಸ್ಯೆ ಎದುರಾದರೂ ಅಚ್ಚರಿಯಿಲ್ಲ ಎನ್ನುವುದು ಗ್ರಾಮಸ್ಥರೊಬ್ಬರ ಅಭಿಪ್ರಾಯವಾಗಿದೆ.
125ನೇ ನೀರಾವರಿ ಸಲಹಾ ಸಮಿತಿಯಲ್ಲಿ ತೆಗೆದುಕೊಂಡ ತೀರ್ಮಾನ ಏನು ?
ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದು ನಿಂತ ಬೆಳೆಗಳಿಗೆ ಡಿ. 1ರಿಂದ 2026ರ ಜನವರಿ 10ರ ವರೆಗೆ 3000 ಕ್ಯೂಸೆಕ್, ಎಡದಂಡೆ ವಿಜಯನಗರ ಕಾಲುವೆಗೆ ಜನವರಿ 1ರಿಂದ ಮೇ 10ರ ತನಕ 150 ಕ್ಯೂಸೆಕ್ನಂತೆ 1ರಿಂದ 11ಎ ಕಾಲುವೆ ತನಕ, ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಡಿಸೆಂಬರ್ 1ರಿಂದ ಜನವರಿ 10ರ ತನಕ 1300 ಕ್ಯೂಸೆಕ್, ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿಸೆಂಬರ್ 1ರಿಂದ ಜನವರಿ 10ರ ತನಕ 750 ಕ್ಯೂಸೆಕ್ನಂತೆ, ರಾಯ ಬಸವಣ್ಣ ಕಾಲುವೆಗೆ ಜ.1ರಿಂದ ಮೇ 31ರ ತನಕ ಸರಾಸರಿ 250 ಕ್ಯೂಸೆಕ್ ಅಥವಾ ಕಾಲುವೆಯಡಿ ನೀರು ಲಭ್ಯತೆ ಇರುವ ತನಕ ಇದರಲ್ಲಿ ಯಾವುದು ಮೊದಲು ಅನ್ವಯವಾಗುತ್ತದೆಯೊ ? ಅದರಂತೆ ನೀರು ಹರಿಸಲಾಗುತ್ತದೆ. ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಡಿಸೆಂಬರ್ 1ರಿಂದ 25 ಕ್ಯೂಸೆಕ್ನಂತೆ ಅಥವಾ ಜಲಾಶಯದ ನೀರಿನ ಮಟ್ಟ 1585 ಅಡಿಗಳತನಕ ಇದರಲ್ಲಿ ಯಾವುದು ಮೊದಲೋ ಅದಕ್ಕೆ ಅನುಗುಣವಾಗಿ ನೀರು ಮತ್ತು 150 ಕ್ಯೂಸೆಕ್ನಂತೆ ನದಿ ಪೂರಕ ಕಾರ್ಖಾನೆಗಳಿಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿರುತ್ತದೆ.
“ಕಾಲುವೆಗೆ ನೀರು ಸ್ಥಗಿತವಾಗುವುದರೊಳಗೆ ಕೆರೆಗಳಿಗೆ ನೀರು ತುಂಬಿಸಿ”
ಎಡದAಡೆ ಮುಖ್ಯ ನಾಲೆಗೆ ನೀರು ಸ್ಥಗಿತಗೊಳ್ಳಲು ಇನ್ನೂ ತಿಂಗಳು ಕಾಲ ಕಾಲಾವಕಾಶ ಇದ್ದು, ತಾಲೂಕು ಮತ್ತು ಜಿಲ್ಲಾಡಳಿತಗಳು ಈಗಲೇ ಎಚ್ಚೆತ್ತುಕೊಂಡು ನೀರು ಕುಸಿದಿರುವ ಕೆರೆಗಳನ್ನು ಈಗಿನಿಂದಲೇ ಭರ್ತಿ ಮಾಡಲು ಮುಂದಾದರೆ, ಮುಂಬರುವ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನೀರಿನ ಸಮಸ್ಯೆ ಉದ್ಭವವಾಗದಂತೆ ತಡೆಯಬಹುದು. ಇಲ್ಲದೇ ಹೋದಲ್ಲಿ ಜನ-ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಂಘಟನೆಯ ಮುಖಂಡರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
