(ಜನದನಿ : ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಮೇ 12
ಅರೇ ಇದೇನು ! ಹೆದ್ದಾರಿಯಲ್ಲೇ ತೆಂಗಿನ ಗಿಡ ಬೆಳೆಯಿತೇ ? ಎಂದು ಅಚ್ಚರಿಯಾಗಬೇಡಿ !! ಎನ್ನೆಚ್ 150ಎ ಸಿಂಧನೂರು-ಮಸ್ಕಿ ಮಾರ್ಗದ ಬೂತಲದಿನ್ನಿ-ಕಲ್ಲೂರು ಮಧ್ಯದ ಪೆಟ್ರೋಲ್ ಬಂಕ್ ಬಳಿಯಿರುವ ಬ್ರಿಡ್ಜ್ಗೆ ಬೋಂಗಾ ಬಿದ್ದಿದ್ದು, ಅಪಘಾತ ಭೀತಿಯಿಂದ ಯಾರೋ ತೆಂಗಿನ ಪೊರಕೆಯನ್ನು ಅಡ್ಡಲಾಗಿ ಇಟ್ಟಿದ್ದಾರಷ್ಟೆ. ದಿನವೂ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ ಬ್ರಿಡ್ಜ್ ಅಧೋಗತಿಗೆ ತಲುಪಿದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸದೇ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಕೆಲ ದಿನಗಳ ಹಿಂದೆ ಚಿಕ್ಕದಿದ್ದ ಬೋಂಗಾ ಅತಿಭಾರದ ವಾಹನಗಳ ಓಡಾಟ ಹಾಗೂ ದಟ್ಟಣೆಯಿಂದ ದೊಡ್ಡದಾಗಿದ್ದು, ಬ್ರಿಡ್ಜ್ ಕುಸಿಯುವ ಭೀತಿ ಎದುರಾಗಿದೆ. ಪ್ರಯಾಣಿಕರು ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ, ಈ ಕುರಿತು ‘ನಮ್ಮ ಸಿಂಧನೂರು ವೆಬ್ ನ್ಯೂಸ್’ ತಾಣ ಕೆಲ ದಿನಗಳ ಹಿಂದೆ ಈ ಕುರಿತು ಸಾಕ್ಷಾತ್ ವರದಿ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆದರೂ ಇಲ್ಲಿಯವರೆಗೂ ದುರಸ್ತಿಗೆ ಮುಂದಾಗಿಲ್ಲ.
ಕಳೆದ ಎರಡ್ಮೂರು ದಿನಗಳಿಂದ ಈ ಮಾರ್ಗದಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಂಡ ಬೆನ್ನಲ್ಲೇ ಸಾರ್ವಜನಿಕರೊಬ್ಬರು ತೆಂಗಿನ ಪೊರಕೆಯನ್ನು ಇಟ್ಟಿದ್ದು, ವಾಹನ ಸವಾರರು ಬ್ರಿಡ್ಜ್ ಬಳಿ ತೆಂಗಿನ ಪೊರಕೆ ನೋಡಿಕೊಂಡು ಮುಂದೆ ಸಾಗುತ್ತಿದ್ದಾರೆ. ಸಿಂಧನೂರು-ಮಸ್ಕಿ ಮಾರ್ಗದಲ್ಲಿ ದ್ವಿಚಕ್ರ ವಾಹನಗಳು ಸೇರಿದಂತೆ ಲಾರಿ, ಸಾರಿಗೆ ಬಸ್ಸು ಹಾಗೂ ಟ್ಯಾಂಕರ್ಗಳ ಸಂಚರಿಸುತ್ತವೆ. ಆಕಸ್ಮಾತ್ ಸ್ವಲ್ಪ ಹೆಚ್ಚು ಕಡಿಮೆಯಾದರೆ ಅಪಘಾತ ಗ್ಯಾರಂಟಿ ಎಂದು ವಾಹನ ಚಾಲಕರು ಹೇಳುತ್ತಾರೆ.
ಎನ್ಎಚ್ಎಐ, ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ಆರೋಪ
ಎನ್ನೆಚ್ 150ಎ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿದೆ. ಅಲ್ಲದೇ ಈ ಮಾರ್ಗದಲ್ಲಿ ವಾಹನ ಸವಾರರು ಹಾಗೂ ಚಾಲಕರು ವಾಹನ ಚಾಲನೆಗೆ ಎದುರಾಗಿರುವ ಸಮಸ್ಯೆ ಕುರಿತು ಗಮನಹರಿಸಿ ಕ್ರಮಕ್ಕೆ ಮುಂದಾಗಬೇಕಾದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಬ್ರಿಡ್ಜ್ಗೆ ಬೋಂಗಾ ಬಿದ್ದ ಕಾರಣ ತೆಂಗಿನ ಪೊರಕೆ ಇಡುವ ದುಃಸ್ಥಿತಿ ಒದಗಿದೆ. ಕೇಂದ್ರ ಮತ್ತು ರಾಜ್ಯದ ಇಲಾಖೆಗಳ ಸಮನ್ವಯದ ಕೊರತೆಯಿಂದಾಗಿ ಈ ಮಾರ್ಗದಲ್ಲಿ ವಾಹನ ಚಲಾಯಿಸುವವರು ಪ್ರಾಣಭೀತಿ ಎದುರಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಅಪಘಾತ ಸಂಭವಿಸಿದರೆ ಹೊಣೆ ಯಾರು ?
ಎನ್ನೆಚ್ 150ಎ ರಾಷ್ಟ್ರೀಯ ಹೆದ್ದಾರಿಯ ಬ್ರಿಡ್ಜ್ ಗೆ ಬೋಂಗಾ ಬಿದ್ದು ಕುಸಿಯುವ ಹಂತಕ್ಕೆ ತಲುಪಿದೆ, ಒಂದು ವೇಳೆ ಅಪಘಾತ ಸಂಭವಿಸಿ ವಾಹನ ಚಾಲಕರ, ಸವಾರರ ಹಾಗೂ ಸಾರಿಗೆ ಪ್ರಯಾಣಿಕರ ಪ್ರಾಣಕ್ಕೆ ಧಕ್ಕೆಯಾದರೆ ಹೊಣೆ ಯಾರು ? ಕಳೆದ ಮರ್ನಾಲ್ಕು ತಿಂಗಳಿಂದ ಬ್ರಿಡ್ಜ್ ಸೇರಿದಂತೆ ಈ ಮಾರ್ಗದಲ್ಲಿ ಹಲವೆಡೆ ಸಂಪರ್ಕ ಸೇತುವೆಗಳು ದುಃಸ್ಥಿತಿಗೆ ತಲುಪಿದ್ದು, ತಡೆಗೋಡೆಗಳು ಕುಸಿದು ಹೋಗಿವೆ. ಆದರೆ ಯಾವೊಬ್ಬ ಇಲಾಖೆಯ ಅಧಿಕಾರಿಗಳು ಈ ಕಡೆ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.