ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಸೆಪ್ಟೆಂಬರ್ 12
ಸಿಂಧನೂರು-ಮಸ್ಕಿ (150ಎ ಎನ್ನೆಚ್) ಹೆದ್ದಾರಿಯ ಕಲ್ಲೂರು ಪೆಟ್ರೋಲ್ ಬಂಕ್ ಬಳಿ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆ ಮಳೆಯಿಂದಾಗಿ ಕೊಚ್ಚಿ ಹೋಗುವ ಭೀತಿ ಎದುರಾಗಿದೆ. ಸೆಪ್ಟೆಂಬರ್ 11 ಗುರುವಾರ ರಾತ್ರಿ ಜೋರು ಮಳೆ ಸುರಿದ ಪರಿಣಾಮ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ಶುಕ್ರವಾರ ಬೆಳಿಗ್ಗೆ 8.30 ಗಂಟೆ ಸುಮಾರು ತಾತ್ಕಾಲಿಕ ಸೇತುವೆ ಅಂಚಿಗೆ ನೀರು ಬಂದಿದ್ದು ಕಂಡುಬಂತು. ಆತಂಕದ ನಡುವೆಯೇ ವಾಹನ ಚಾಲಕರು ವಾಹನ ಚಲಾಯಿಸಿದರು.

ಚೆಕ್ ಡ್ಯಾಂ ತುಂಬಿ ಭೋರ್ಗರಿಯುತ್ತಿರುವ ನೀರು
ಈ ಸೇತುವೆ ಮೇಲ್ಭಾಗದಲ್ಲಿ ಚೆಕ್ ಡ್ಯಾಂ ಇದ್ದು, ಗುರುವಾರ ರಾತ್ರಿ ವೇಳೆ ಸುರಿದ ತುಂಬಿ ನೀರು ಹರಿಯುತ್ತಿದೆ. ಹೀಗಾಗಿ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಅಗೆದ ಕಂದಕ ಸಂಪೂರ್ಣ ನೀರಿನಿಂದ ಆವೃತವಾಗಿ ಅಂಚಿಗೆ ತಲುಪಿದೆ. ಹಿಟಾಚಿ ಮೂಲಕ ನೀರು ಸೇತುವೆ ಮೇಲೆ ಹರಿಯದಂತೆ ಮಣ್ಣನ್ನು ಹಾಕಿ ತಡೆಗಟ್ಟಿದ್ದು, ಪೈಪ್‌ಗಳ ಮೂಲಕ ನೀರು ಮುಂದೆ ಹರಿಯುತ್ತಿದೆ. ಒಂದು ವೇಳೆ ಬೆಳಿಗ್ಗೆಯೂ ಜೋರು ಮಳೆಯಾದರೆ ಪರಿಸ್ಥಿತಿ ವಿಕೋಪ ಹೋಗಲಿದೆ ಎಂಬುದು ಸ್ಥಳೀಯರ ಮಾತಾಗಿದೆ.
ತಾತ್ಕಾಲಿಕ ಸೇತುವೆ ಅವೈಜ್ಞಾನಿಕ ?
ಹೆದ್ದಾರಿಯಲ್ಲಿ ಮಳೆಗಾಲದ ವೇಳೆ ಸೇತುವೆ ನಿರ್ಮಾಣಕ್ಕೆ ಕೈಹಾಕಿರುವ ಇಲಾಖೆ ಮತ್ತು ಇದರ ಜವಾಬ್ದಾರಿ ಹೊತ್ತಿರುವ ಗುತ್ತಿಗೆದಾರರು ತಾತ್ಕಾಲಿಕ ಸೇತುವೆಯನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದಾರೆ. ಸೇತುವೆ ಕೆಳಭಾಗದಲ್ಲಿ ನೀರು ಹರಿಯಲು ದೊಡ್ಡ ಸಿಮೆಂಟ್ ಪೈಪ್‌ಗಳನ್ನು ಹಾಕದೇ ಸಣ್ಣ ಸಣ್ಣ ಪೈಪ್‌ಗಳನ್ನು ಅಳವಡಿಸಿದ್ದರಿಂದ ನೀರು ಬೇಗನೆ ಪಾಸ್ ಆಗುತ್ತಿಲ್ಲ. ಇದರಿಂದ ಕಂದಕದಲ್ಲಿ ನೀರು ನಿಂತು ಸೇತುವೆ ಕೊಚ್ಚಿ ಹೋಗುವ ಭೀತಿ ಉಂಟಾಗಿದೆ. ಈ ಮಾರ್ಗದಲ್ಲಿ ದಿನವೂ ಸಾವಿರಾರು ವಾಹನಗಳು, ಸರಕು ಗಾಡಿಗಳು ಸಂಚರಿಸುವುದನ್ನು ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷಿಸಲಾಗಿದೆ. ಈಗಾಗಲೇ ಈ ತಾತ್ಕಾಲಿಕ ಸೇತುವೆ ಬಳಿ ವಾಹನಗಳು ಬಿದ್ದು, ಕೆಸರಿನಲ್ಲಿ ಸಿಲುಕಿ ಸಮಸ್ಯೆ ಅನುಭವಿಸಿದ್ದೇವೆ ಎಂದು ಚಾಲಕರೊಬ್ಬರು ದೂರುತ್ತಾರೆ.
