ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 18
ಸಿಂಧನೂರು ಹಾಗೂ ಮಸ್ಕಿ ತಾಲೂಕಿನ ಒಣ ಬೇಸಾಯ ಆಶ್ರಿತ ಗ್ರಾಮಗಳ ರೈತರ ಜಮೀನುಗಳಲ್ಲಿ ಈ ಬಾರಿ ತೊಗರಿ ಬೆಳೆ ಕಣ್ಣು ಕೋರೈಸುತ್ತಿದೆ. ಆರಂಭದಲ್ಲಿ ಮಳೆ ಕೊರತೆ ಎದುರಾಗಿತ್ತು, ತದನಂತರ ಬಿಟ್ಟೂ ಬಿಡದೇ ಸುರಿದ ಪರಿಣಾಮ ಬೆಳೆ ಹೂ ಮುಡಿದು ನಿಂತಿದ್ದು, ಅರ್ಧದಷ್ಟು ಜಮೀನುಗಳಲ್ಲಿ ಈಗಾಗಲೇ ಕಾಯಿಗಳು ಆಗಿವೆ.
ಕಳೆದ ವರ್ಷ ಆರಂಭದಲ್ಲಿ ತೊಗರಿಗೆ 7,500ರಿಂದ 8000 ಸಾವಿರದವರೆಗೂ ದರ ಇತ್ತು. ಬರು ಬರುತ್ತಾ ಕೊನೆಯಲ್ಲಿ ಕ್ವಿಂಟಲ್‌ಗೆ 12 ಸಾವಿರ ರೂಪಾಯಿವರೆಗೂ ತೊಗರಿ ಮಾರಾಟವಾಗಿತ್ತು. ಉತ್ತಮ ದರವಿದ್ದ ಕಾರಣ ಮಳೆಯಾಶ್ರಿತ ರೈತರು ಒಳ್ಳೆಯ ಆದಾಯ ಪಡೆದುಕೊಂಡಿದ್ದರು. ಈ ಬಾರಿಯೂ ತೊಗರಿ ಬೆಳೆ ಬಂಪರ್ ಆಗಿರುವುದರಿಂದ ಉತ್ತಮ ಫಸಲು ಬಂದು ಒಳ್ಳೆಯ ಲಾಭ ದೊರೆಯಲಿದೆ ಎಂಬ ಆಶಾಭಾವನೆಯಲ್ಲಿದ್ದಾರೆ.
ಕೀಟ ಕಾಟ ಕಡಿಮೆ
ಕಳೆದ ವರ್ಷಕ್ಕಿಂತ ಈ ಬಾರಿ ಕೀಟಗಳ ಕಾಟ ಕಡಿಮೆ ಇದೆ. ಆದರೂ ಎರಡರಿಂದ ಮೂರು ಬಾರಿ ಕ್ರಿಮಿನಾಶಕ ಸಿಂಪಡಿಸಿದ್ದೇವೆ ಎಂದು ರೈತರು ಹೇಳುತ್ತಾರೆ. ಸತತ ಮಳೆಯಿಂದಾಗಿ ಅಷ್ಟೊಂದು ಪ್ರಮಾಣದಲ್ಲಿ ತೊಗರಿಗೆ ಉಳುಬಾಧೆ ಕಾಡಿಲ್ಲ, ಇನ್ನು ಒಡಲು ಪ್ರದೇಶದಲ್ಲಿ ನೀರು ನಿಂತು ಅಲ್ಲಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದು ಬಿಟ್ಟರೆ ಉಳಿದಂತೆ ಬೆಳೆ ಕಣ್ಣು ಬಿಡುವಂತೆ ಬಂದಿದೆ. ಹೊಲಗಳಲ್ಲಿ ತೊಗರಿ ಬೆಳೆ ನೋಡುವುದೇ ಒಂದು ಆನಂದ ಎನ್ನುತ್ತಾರೆ ರೈತರೊಬ್ಬರು.
‘ಬೆಳೆ ಏನೋ ಚೆನ್ನಾಗಿದೆ ಮಾರ್ಕೆಟ್ಟಿನಲ್ಲಿ ರೇಟು ಸಿಗಬೇಕು’
“ಹೊಲ್ದಾಗ ಬೆಳಿ ಏನೋ ಚೆನ್ನಾಗಿದೆ. ಆದ್ರೆ ಮಾರ್ಕೆಟ್ಟಿನ್ಯಾಗ ಒಳ್ಳೆ ರೇಟು ಸಿಗೇಬೇಕ್ರಿ. ಹೋದ ಸಲ ಏಳುವರಿಯಿಂದ ಎಂಟು ಸಾವ್ರದವರೆಗೆ ಮೊದ್ಲ ರೇಟು ಇತ್ತು. ಆಮ್ಯಾಲೆ ಹನ್ನಂದಿಂದ ಹನ್ನೆರಡು ಸಾವ್ರದವರೆಗೆ ರೇಟು ಬಂತು. ಕಷ್ಟಪಟ್ಟು ಬೆಳಿದರ‍್ತೀವಿ. ಚಲೋ ರೇಟು ಸಿಕ್ರ ಮಾಡಿದ ಖರ್ಚು ಹೋಗಿ ಒಂದೀಟು ರೊಕ್ಕ ಉಳಿತಾವ” ಎಂದು ಕಲಮಂಗಿಯ ರೈತರೊಬ್ಬರು ಹೇಳುತ್ತಾರೆ.
ಡಬಲ್ ಖುಷಿ
ಮಳೆಯಾಶ್ರಿತ ಪ್ರದೇಶದ ಜಮೀನುಗಳಲ್ಲಿನ ಬೆಳೆಗಳು ಉತ್ತಮವಾಗಿದ್ದರೆ, ಇತ್ತ ನೀರಾವರಿ ಅವಲಂಬಿತ ಗ್ರಾಮಗಳಲ್ಲಿಯೂ ಭತ್ತ ಉತ್ತಮವಾಗಿ ಬೆಳೆದಿರುವುದು ರೈತರಿಗೆ ಡಬಲ್ ಖುಷಿ ತಂದಿದೆ. ಇನ್ನು ಕೆಲ ಗ್ರಾಮಗಳಲ್ಲಿ ಮಳೆಯಾಶ್ರಿತ ಭೂಮಿ ಮತ್ತು ನೀರಾವರಿಯೂ ಇದ್ದು, ಕೆಲಸ ಕಾರ್ಯಗಳಲ್ಲಿ ಹೆಚ್ಚು ಬ್ಯುಸಿಯಾಗಿರುವುದು ಕಂಡುಬರುತ್ತಿದೆ.