ನಮ್ಮ ಸಿಂಧನೂರು, ಮೇ 13
ಸಿಂಧನೂರು ಹಾಗೂ ಮಸ್ಕಿ ತಾಲೂಕಿನಾದ್ಯಂತ ಭಾನುವಾರ ರಾತ್ರಿ ಮತ್ತು ಬೆಳಿಗ್ಗೆ ಸಾಧಾರಣ ಮಳೆಯಾಗಿದೆ. ಭಾನುವಾರ ಸಂಜೆ ಮೋಡ ಕವಿದ ವಾತಾವರಣ ಕಂಡುಬಂತು; ಬಿರುಗಾಳಿಯ ಜೊತೆಗೆ ಮಿಂಚು ಗುಡುಗಿನ ಸದ್ದು ಕೇಳಿತಾದರೂ ಮಳೆ ಬರಲಿಲ್ಲ. ರಾತ್ರಿ 12 ಗಂಟೆ ಸುಮಾರು ಜಿಟಿ ಜಿಟಿ ಮಳೆ ಸಾಧಾರಣದಿಂದ ಕೆಲಕಾಲ ಸುರಿಯಿತು. ಬೆಳಿಗ್ಗೆ 7 ಗಂಟೆಯಿಂದ 8.30 ರವರೆಗೆ ಸಾಧಾರಣ ಮಳೆಯಾಗಿದೆ. ಬಿರುಗಾಳಿ, ಮಿಂಚು ಹಾಗೂ ಗುಡುಗಿನ ಆರ್ಭಟಕ್ಕೆ ದೊಡ್ಡ ಮಳೆಯಾಗಬಹುದೇನು ಎಂಬ ರೈತರ ನಿರೀಕ್ಷೆ ಹುಸಿಯಾಗಿದೆ. ಕೃಷಿ ಚಟುವಟಿಕೆ ಆರಂಭಿಸಲು ಉಭಯ ತಾಲೂಕುಗಳ ರೈತರು ತುದಿಗಾಲಲ್ಲಿ ನಿಂತಿದ್ದು, ಭೂಮಿ ಹಸಿಯಾಗುಷ್ಟು ಮಳೆ ಬಿದ್ದಿಲ್ಲ. ಹೀಗಾಗಿ ಮೋಡದತ್ತ ಮುಖ ಮಾಡುವಂತಾಗಿದೆ.