ಸಿಂಧನೂರು/ಮಸ್ಕಿ: ಬಳಗಾನೂರು ಬಸವೇಶ್ವರನಗರ ಸ.ಕಿ.ಪ್ರಾ ಶಾಲೆಯಲ್ಲಿ ವಿದ್ಯಾರ್ಥಿಗಳು 50, ಶಿಕ್ಷಕರು ಶೂನ್ಯ !!

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 6

ಮಸ್ಕಿ ವಿಧಾನಸಭಾ ಕ್ಷೇತ್ರದ, ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವ್ಯಾಪ್ತಿಗೆ ಬರುವ ಬಳಗಾನೂರು ವಾರ್ಡ್ ನಂ.7ರಲ್ಲಿರುವ ಬಸವೇಶ್ವರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 50 ವಿದ್ಯಾರ್ಥಿಗಳಿದ್ದರೂ, ಒಬ್ಬೇ ಒಬ್ಬ ಶಿಕ್ಷಕರು ಇಲ್ಲದೇ ಶೂನ್ಯ ಶಿಕ್ಷಕರ ಶಾಲೆಯಾಗಿ ಮಾರ್ಪಟ್ಟಿದೆ.
ದಿನವೂ ಶಾಲಾ ಅವಧಿಗೆ ಬರುವ 1ರಿಂದ 5ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರಿಲ್ಲದ ಕಾರಣ ಅಭ್ಯಾಸವಿಲ್ಲದೇ ಖಾಲಿ ಸಮಯ ಕಳೆದು ಮನೆಗೆ ಹೋಗುತ್ತಾರೆ. ರಜೆ ಮುಗಿದು ಹಲವು ದಿನಗಳು ಕಳೆದು ಶಾಲೆ ಆರಂಭವಾಗಿದ್ದರೂ, ವಾರ್ಡ್ನ ಈ ಶಾಲೆಗೆ ಅಘೋಷಿತ ರಜೆ ಘೋಷಿಸಿದಂತಾಗಿದೆ. ಈ ಶಾಲೆಯಲ್ಲಿ ಬಡ ಮತ್ತು ಕೃಷಿಕೂಲಿಕಾರರ ಮಕ್ಕಳೇ ಕಲಿಯುತ್ತಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಅಷ್ಟೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.
ಹೀಗೆ ಬಂದು ಹಾಗೇ ಹೋದ ಶಿಕ್ಷಕ !
ಶಾಲೆಯಲ್ಲಿ ಈ ಹಿಂದೆ ಇದ್ದ ಶಿಕ್ಷಕರು ವರ್ಗಾವಣೆಗೊಂಡಿರುವುದರಿಂದ ಯಾರೊಬ್ಬರೂ ಶಿಕ್ಷಕರಿಲ್ಲದೇ ‘ಶೂನ್ಯ ಶಿಕ್ಷಕರ ಶಾಲೆ’ಯಾಗಿದೆ. ಇತ್ತೀಚೆಗೆ ನಿಯೋಜನೆಗೊಂಡಿದ್ದ ಶಿಕ್ಷಕ ರಮೇಶ.ಎಸ್.ಎಂಬುವವರು, ಯಾಕೋ ಏನೋ ಈ ಶಾಲೆಯ ಉಸಾಬರಿ ಬೇಡ ಎಂದು ಬಳಗಾನೂರು ಪಟ್ಟಣದ ಇನ್ನೊಂದು ಶಾಲೆಗೆ ಡೆಪ್ಟೇಶನ್ ಪಡೆದುಕೊಂಡು ಹೋಗಿದ್ದು, ಹೀಗಾಗಿ ಶಾಲೆ ಆರಂಭವಾಗಿ 15 ದಿನಗಳಾದರೂ ಇಲ್ಲಿಯವರೆಗೂ ಒಬ್ಬೇ ಒಬ್ಬ ಶಿಕ್ಷಕರು ಇಲ್ಲದಂತಾಗಿದೆ.
ಶಿಕ್ಷಕರನ್ನು ನೇಮಿಸದಿದ್ದರೆ ಬಿಇಒ ಕಾರ್ಯಾಲಯದ ಮುಂದೆ ಧರಣಿ
“ಕಳೆದ 15ಕ್ಕೂ ಹೆಚ್ಚು ದಿನಗಳಿಂದ ಶಾಲೆಯಲ್ಲಿ ಶಿಕ್ಷಕರು ಇಲ್ಲದೇ ಮಕ್ಕಳು ಅಭ್ಯಾಸಕ್ಕೆ ಅಡಚಣೆ ಅನುಭವಿಸುತ್ತಿರುವ ಕುರಿತು ಸಂಬAಧಿಸಿದ ಅಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳ ಗಮನಕ್ಕೆ ಹಲವುಬಾರಿ ಮೌಖಿಕವಾಗಿ ತರಲಾಗಿದೆ. ಆದರೆ ಇಲ್ಲಿಯವರೆಗೂ ಶಿಕ್ಷಕರ ನೇಮಕ ನಡೆದಿಲ್ಲ. ಕೂಡಲೇ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಾಲೆಗೆ ಶಿಕ್ಷಕರನ್ನು ನೇಮಿಸದೇ ಹೋದರೆ, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳೊಂದಿಗೆ ಸಿಂಧನೂರಿನ ಬಿಇಒ ಕಾರ್ಯಾಲಯದ ಮುಂದೆ ಧರಣಿ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ವಾರ್ಡ್ನ ನಿವಾಸಿಗಳು, ವಿದ್ಯಾರ್ಥಿಗಳ ಪಾಲಕರು ಎಚ್ಚರಿಸಿದ್ದಾರೆ.


Spread the love

Leave a Reply

Your email address will not be published. Required fields are marked *