ನಮ್ಮ ಸಿಂಧನೂರು, ಮೇ 31
ಜಾಗತಿಕ ತಾಪಮಾನ ಏರಿಕೆ ಇಂದು ಬಹು ಚರ್ಚಿತ ವಿಷಯವಾಗಿದೆ. ದಿನದಿಂದ ದಿನಕ್ಕೆ ಜಗತ್ತಿನಲ್ಲಿ ಪರಿಸರದ ಅಸಮತೋಲನದಿಂದಾಗಿ ಅನೇಕ ಘಟನೆಗಳು ಘಟಿಸುತ್ತಿವೆ. ನೀರು, ಗಾಳಿ ಮತ್ತು ಆಹಾರ ಮನುಷ್ಯನ ಮೂಲಭೂತ ಅಗತ್ಯತೆಗಳಾಗಿದ್ದು, ಇದಕ್ಕೆ ಮರಗಳೇ ಮೂಲಾಧಾರ. ಪರಿಸರ ಉಳಿದರೆ ಮನುಕುಲ ಉಳಿಯಲು ಸಾಧ್ಯ ಎಂದು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬಸವರಾಜ ಹೊಗರನಾಳ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಅರಳಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ ಪ್ರಯುಕ್ತ ಭೂಮಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಉಚಿತ ಸಸಿಗಳ ವಿತರಣಾ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿಯೊಬ್ಬ ಮನುಷ್ಯನಿಗೂ ಗಾಳಿ, ನೀರು, ನೆರಳು ಬೇಕು. ಆದರೆ ಇದನ್ನು ನೀಡುವ ಮರ ಮತ್ತು ಅರಣ್ಯ ಬೇಕಿಲ್ಲ. ಮಳೆ ಮತ್ತು ನೀರು ಬೇಕು, ಪ್ರಕೃತಿ, ನದಿಗಳ ರಕ್ಷಣೆ ಬೇಕಿಲ್ಲ. ತಂಪಾದ ವಾತಾವರಣ ಬೇಕು, ಜಾಗತಿಕ ತಾಪಮಾನದ ಬಗ್ಗೆ ಕಳಕಳಿ ಬೇಡ. ಬರ, ನೆರೆ, ಸಾಂಕ್ರಾಮಿಕ ರೋಗಮುಕ್ತ ಸಮಾಜ ಬೇಕು,ಆದರೆ ಹವಮಾನ ವೈಪರೀತ್ಯಕ್ಕೆ ಕಾರಣವಾಗುತ್ತಿರುವ ಅಧಿಕ ಇಂಗಾಲ ಬಿಡುಗಡೆ, ಅರಣ್ಯ ನಾಶ, ವನ್ಯಜೀವಿಗಳ ನಾಶದ ಬಗ್ಗೆ ಯಾರೂ ಗಟ್ಟಿಯಾಗಿ ಮಾತನಾಡುವುದಿಲ್ಲ. ಸಮಾಜದಲ್ಲಿ ಪ್ರಕೃತಿಯ ಬಗೆಗಿನ ಕಾಳಜಿ ಕೇವಲ ಬಾಯಿಮಾತಿನ ವಿಚಾರವಾಗಿದೆ, ಆದರೆ ಆಚರಣೆ ಇಲ್ಲದಂತಾಗಿದೆ. ಹಾಗಾಗಿ ಭವಿಷ್ಯದ ದೃಷ್ಟಿಯಿಂದ ಮಕ್ಕಳಲ್ಲಿ ಶಾಲಾ ಆರಂಭ ದಿನದಿಂದಲೂ ಶಿಕ್ಷಕರು, ಪಾಲಕರು ಹಾಗೂ ಪ್ರಜ್ಞಾವಂತ ಯುವಕರು ಪರಿಸರದ ಕುರಿತು ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದರು.
ಭೂಮಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಕುಂಬಾರ, ಪ್ರೌಢ ಶಾಲಾ ಮುಖ್ಯಶಿಕ್ಷಕ ಬಸವರಾಜ ಬಿಳೇಕಲ್, ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಲಿಂಗರಾಜ, ಮುಖಂಡ ಶಿವಪುತ್ರಪ್ಪ ವಕೀಲರು ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಗೌಡ ಪಾಟೀಲ್, ಪ್ರೌಢ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಸೂಗಪ್ಪ ಬಳಿಗಾರ್, ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಕಾರಟಗಿ, ಸದಸ್ಯ ತಿಪ್ಪಣ್ಣ ಆನ್ವರಿ, ವಿಎಸ್‌ಎಸ್‌ಎನ್ ಸಂಘದ ಅಧ್ಯಕ್ಷ ಹನುಮರೆಡ್ಡಿ ಪಗಡದಿನ್ನಿ, ಪ್ರಮುಖರಾದ ಶಿವಪುತ್ರಪ್ಪ ವಕೀಲರು, ಶಿವರಾಜ ಅರಿಗಿ, ಹನುಮಂತ ಬಡಿಗೇರ್, ಮಂಜುನಾಥಸ್ವಾಮಿ ಹಿರೇಮಠ ಸೇರಿದಂತೆ ಇನ್ನಿತರರು ಇದ್ದರು.