ವಿಶೇಷ ವರದಿ: ಬಸವರಾಜ ಹಸಮಕಲ್
ನಮ್ಮ ಸಿಂಧನೂರು, ಮಾರ್ಚ್ 16
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘ ಬೆಂಗಳೂರು ಇವರ ಕರೆಯ ಮೇರೆಗೆ, ತಾಲೂಕು ಸಮಿತಿಯಿಂದ ಪರವಾನಗಿ ಭೂಮಾಪಕರು ಫೆ.25, 2026ರಿಂದ ಅನಿರ್ದಿಷ್ಟ ಮುಷ್ಕರ ಹೂಡಿದ್ದು, ಸರ್ವೆ, ಹದ್ದುಬಸ್ತ್ ಸೇರಿ ಇನ್ನಿತರೆ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಇದರಿಂದ ರೈತರು ಸರ್ವೆ ಇಲಾಖೆಗೆ ಅಲೆದಾಡುತ್ತಿದ್ದಾರೆ.
ತಾಲೂಕಿನಲ್ಲಿ ಸರ್ಕಾರಿ ಭೂಮಾಪಕರಲ್ಲದೇ, 34 ಪರವಾನಗಿ ಭೂಮಾಪಕರು ಇದ್ದಾರೆ. ಸರ್ಕಾರಿ ಭೂಮಾಪಕರು ಕೊರತೆಯಿರುವುದರಿಂದ, ಕೆಲಸದ ಹೊರೆಯನ್ನು ಪರವಾನಗಿ ಭೂಮಾಪಕರೇ ನಿಭಾಯಿಸುತ್ತಿದ್ದಾರೆ. ಪರವಾನಗಿ ಭೂಮಾಪಕರು ತಮ್ಮನ್ನು ಒಂದು ಬಾರಿ ವಿಶೇಷ ನೇಮಕಾತಿಯಡಿಯಲ್ಲಿ ಸರ್ಕಾರಿ ಭೂಮಾಪಕರೆಂದು ನೇಮಿಸಬೇಕು ಹಾಗೂ ತಮಗೆ ಶಾಸನಬದ್ಧ ಮತ್ತು ಸಂವಿಧಾನಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಫೆ.25ರಿಂದ ರಾಜ್ಯದಾದ್ಯಂತ ಅನಿರ್ದಿಷ್ಟ ಮುಷ್ಕರ ಹೂಡಿದ್ದರಿಂದ ಸರ್ವೆ ಇಲಾಖೆಯಲ್ಲಿ ಬಹಳಷ್ಟು ಕಡತಗಳು ಧೂಳು ಹಿಡಿಯುತ್ತಿವೆ.
ಸರ್ವೆ, ಹದ್ದಬಸ್ತ್ ಇತರೆ ಕಡತಗಳು ಪೆಂಡಿಂಗ್
ಪರವಾನಗಿ ಭೂಮಾಪಕರು ಮುಷ್ಕರ ಹೂಡಿದ್ದರಿಂದ, ಸರ್ವೆ, ಹದ್ದುಬಸ್ತು, ಪೋಡಿ ಮುಕ್ತ ಅಭಿಯಾನ, ಕೋರ್ಟ್ ಪ್ರಕರಣಗಳು, ತಕರಾರು ಪ್ರಕರಣಗಳು ಹೀಗೆ ಹತ್ತು ಹಲವು ಪ್ರಕರಣಗಳ ವಿಲೇವಾರಿಗೆ ಅಡಚಣೆಯಾಗಿದೆ. ದಿನದಿಂದ ದಿನಕ್ಕೆ ಕಡತಗಳ ಸಂಖ್ಯೆ ಏರುತ್ತಿದೆ. ತಾಲೂಕು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಅಷ್ಟೇ ಅಲ್ಲದೇ ನೀರಾವರಿ ಪ್ರದೇಶವಾಗಿರುವುದರಿಂದ ಸರ್ವೆ ಇಲಾಖೆಗೆ ಒತ್ತಡ ಹಾಗೂ ಕಡತಗಳೂ ಜಾಸ್ತಿ. ಹಾಗಾಗಿ ತಿಂಗಳಾನುಗಟ್ಟಲೇ ಕಡತಗಳು ಬಾಕಿ ಉಳಿದುಕೊಂಡಿರುವುದರಿಂದ ದಿನದಿಂದ ದಿನಕ್ಕೆ ಸಮಸ್ಯೆ ಬಿಗಡಾಯಿಸುತ್ತಿದೆ. “ಫೆೆಬ್ರವರಿ ಎರಡನೇ ವಾರದಲ್ಲಿ ಅರ್ಜಿ ಹಾಕಿದ್ದೇವೆ ಸರ್, ಇಲ್ಲಿಯವರೆಗೂ ಹದ್ದುಬಸ್ತು ಅಲಾಟ್‌ಮೆಂಟ್ ಆಗಿಲ್ಲ, ಸರ್ವೆ ಇಲಾಖೆಗೆ ಬಂದು ಕೇಳಿದರೆ, ಮಾಡುತ್ತೇವೆ ಎಂದು ಹೇಳುತ್ತಾರೆ. ಇದರಿಂದ ನಮಗೆ ತೊಂದರೆಯಾಗಿದೆ. ಸರ್ಕಾರಿ ಶುಲ್ಕ ಕಟ್ಟಿಯೂ ಕಿರಿಕಿರಿ ಅನುಭವಿಸುತ್ತಿದ್ದೇವೆ. ನಮ್ಮದೇನೋ ಹೀಗೆ ಆಯಿತು. ಕೋರ್ಟ್ ಪ್ರಕರಣ ಇದ್ದವರು ಏನು ಮಾಡಬೇಕು” ಎಂದು ರೈತರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಇಲಾಖೆ ನೋಟಿಸ್
ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂ ಮಾಪಕರ ಸಂಘ ತಾಲೂಕು ಸಮಿತಿಯಿಂದ ಫೆ.25ರಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಸಿಂಧನೂರು ಇವರಿಗೆ ಮನವಿಪತ್ರ ನೀಡಿ, ಪರವಾನಗಿ ಭೂಮಾಪಕರು ಮುಷ್ಕರ ಹೂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಕಚೇರಿಯ ಸೂಚನಾ ಫಲಕದಲ್ಲಿ “ಎಲ್ಲಾ ಪರವಾನಗಿ ಭೂ ಮಾಪಕರು ದಿನಾಂಕ:01-03-2026ರಿಂದ ಅನಿರ್ದಿಷ್ಟ ಅವಧಿಯ ಮುಷ್ಕರದಲ್ಲಿ ಭಾಗಿಯಾಗಿರುವುದರಿಂದ ವಿಳಂಬಕ್ಕೆ ಸಾರ್ವಜನಿಕರು ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ” ನೋಟಿಸ್ ಅಂಟಿಸಿದ್ದಾರೆ.
ಸರ್ಕಾರದ ಬೇಜವಾವ್ದಾರಿಯಿಂದ ರೈತರಿಗೆ ಹೊರೆ
ಸರ್ವೆ ಇಲಾಖೆಯಲ್ಲಿ ಬೇಗ ಕೆಲಸ ಆಗುವುದಿಲ್ಲ ಎಂಬುದು ಸಾರ್ವಜನಿಕರ ನಡುವೆ ಈಗಾಗಲೇ ಇರುವ ಆಪಾದನೆ. ಇದಕ್ಕೆ ಇಂಬು ಕೊಟ್ಟಂತೆ ಕಳೆದ 20 ದಿನಗಳಿಂದ ಪರವಾನಗಿ ಭೂಮಾಪಕರ ಮುಷ್ಕರದಿಂದ ಬಹುತೇಕ ಸರ್ವೆ, ಹದ್ದುಬಸ್ತ್ ಸೇರಿದಂತೆ ಇತರೆ ಕೆಲಸ ಕಾರ್ಯಗಳು ಸ್ಥಗಿತಗೊಂಡಿರುವುದರಿಂದ ಸಾರ್ವಜನಿಕರು ಇನ್ನಿಲ್ಲದ ಆರ್ಥಿಕ ಹೊರೆ ಹಾಗೂ ಕಿರಿಕಿರಿ ಅನುಭವಿಸುವಂತಾಗಿದೆ.
ಮಳೆಗಾಲ ಶುರುವಾದರೆ ಸರ್ವೆ, ಹದ್ದುಬಸ್ತ್‌ಗೆ ಅಡಚಣೆ
ಬೇಸಿಗೆ ಕಾಲ ಸರ್ವೆ ಮತ್ತು ಹದ್ದುಬಸ್ತ್‌ಗೆ ಸೂಕ್ತ ಕಾಲವಾಗಿದ್ದು, ಇಂತಹ ಸಮಯದಲ್ಲಿ ಕೆಲಸ, ಕಾರ್ಯಗಳು ಸ್ಥಗಿತಗೊಂಡರೆ ರೈತರಿಗೆ ಸಮಸ್ಯೆಯಾಗಲಿದೆ. ಮಳೆಗಾಲದ ಮುನ್ನ ಸಮಸ್ಯೆ ಪರಿಹರಿಸದೇ ಹೋದರೆ ಇನ್ನಷ್ಟು ತೊಂದರೆಯಾಗಲಿದೆ. ಹೆಚ್ಚು ಕಡತಗಳು ಸಲ್ಲಿಕೆಯಾಗುತ್ತ ಹೋದರೆ, ಕೆಲಸದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ಸಮಸ್ಯೆಯಾಗಲಿದೆ. ಕೂಡಲೇ ರಾಜ್ಯ ಸರ್ಕಾರ ಹಾಗೂ ಸರ್ವೆ ಇಲಾಖೆ ಆದಷ್ಟು ಬೇಗ ಸರ್ವೆ ಹಾಗೂ ಹದ್ದುಬಸ್ತ್ ಅರ್ಜಿಗಳನ್ನು ವಿಲೇವಾರಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕೆಂಬುದು ಕರ್ನಾಟಕ ರೈತ ಸಂಘ ರಾಜ್ಯ ಸಮಿತಿ ಸದಸ್ಯ ರಮೇಶ ಪಾಟೀಲ್ ಭೇರಿಗಿ ಅವರು ಒತ್ತಾಯವಾಗಿದೆ.

