ಸಿಂಧನೂರು: 15 ವರ್ಷ ಮೇಲ್ಪಟ್ಟ ಶಾಲಾ ಬಸ್ಸುಗಳನ್ನು ಸಂಚಾರಕ್ಕೆ ಬಳಸಿದರೆ ಕಾನೂನು ಕ್ರಮ : ರಾಕೇಶ್.ಎಂ ಖಡಕ್ ಎಚ್ಚರಿಕೆ

Spread the love

ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಡಿಸೆಂಬರ್ 21

ಸಿಂಧನೂರು ನಗರದಲ್ಲಿ 15 ವರ್ಷ ಮೇಲ್ಪಟ್ಟ 55 ಶಾಲಾ ಬಸ್ಸುಗಳಿವೆ. ಈ ಬಸ್ಸುಗಳನ್ನು ಶಾಲಾ ಮಕ್ಕಳನ್ನು ಕರೆತರಲು ಸಂಚಾರಕ್ಕೆ ಬಳಸಿದರೆ, ಅಂತಹ ಶಾಲಾ-ಕಾಲೇಜು ಆಡಳಿತ ಮಂಡಳಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಆರ್‌ಟಿಒ ಅಧಿಕಾರಿ ರಾಕೇಶ್.ಎಂ ಖಡಕ್ ಎಚ್ಚರಿಕೆ ನೀಡಿದ್ದಾರೆ.
5 ಶಾಲಾ ವಾಹನಗಳು ಸೀಜ್
ಆರ್‌ಟಿಒ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ನಗರದ ವಿವಿಧ ಖಾಸಗಿ ಶಾಲೆಗಳ 5 ವಾಹನಗಳನ್ನು ಇಲಾಖೆಯ ಸಿಬ್ಬಂದಿಯವರು ಶನಿವಾರ ಸೀಜ್ ಮಾಡಿದ್ದಾರೆ. ಇನ್ನು 50 ಶಾಲಾ ವಾಹನಗಳನ್ನು ಪತ್ತೆಹಚ್ಚಲಾಗುತ್ತಿದೆ ಎಂದು ತಿಳಿದು ಬಂದಿದೆ.
‘ಶಾಸಕರ ಗಮನಕ್ಕೆ ತರಲಾಗಿದೆ’
“ಮಕ್ಕಳ ಸುರಕ್ಷತೆ ಮತ್ತು ಕರ್ನಾಟಕ ಮೋಟರ್ ಸೈಕಲ್ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದ್ದು, ಶಾಸಕರು ಅಂತಹ ವಾಹನಗಳು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಸಿಂಧನೂರನ್ನು ಹಳೆ ಬಸ್ಸುಗಳಿಂದ ಮುಕ್ತ ಮಾಡುವುದೇ ಇಲಾಖೆಯ ಧ್ಯೇಯ” ಎಂದು ರಾಕೇಶ್ ಎಂ. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 15 ಶಾಲಾ ಬಸ್ಸುಗಳು ಸೀಜ್
“ಜಿಲ್ಲೆಯಲ್ಲಿ 720 ಶಾಲಾ ವಾಹನಗಳಿವೆ. ರಾಯಚೂರು ಜಿಲ್ಲಾ ಕೇಂದ್ರದಲ್ಲಿ 15 ವರ್ಷ ಮೇಲ್ಪಟ್ಟ 121 ವಾಹನಗಳಿವೆ. ಈಗಾಗಲೇ ರಾಯಚೂರು 6, ಮಾನ್ವಿಯಲ್ಲಿ 4 ಹಾಗೂ ಸಿಂಧನೂರಿನಲ್ಲಿ 5 ವಾಹಗಳನ್ನು ಸೀಜ್ ಮಾಡಲಾಗಿದೆ. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕಳೆದ ವಾರದಿಂದ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ನಿಯಮ ಬಾಹಿರವಾಗಿ ವಾಹನಗಳನ್ನು ಓಡಿಸಿದವರ ಮೇಲೆ ಕ್ರಮ ಜರುಗಿಸಲಾಗಿದೆ. 720 ಶಾಲಾ ವಾಹನಗಳಲ್ಲಿ 300 ಶಾಲಾ ವಾಹನಗಳವರಿಗೆ ನೋಟಿಸ್ ನೀಡಲಾಗಿದೆ” ಎಂದು ರಾಕೇಶ್.ಎಂ ಅವರು ಹೇಳುತ್ತಾರೆ.
3000ಕ್ಕೂ ಹೆಚ್ಚು ವಾಹನ ಮಾಲೀಕರಿಗೆ ನೋಟಿಸ್
“ಜಿಲ್ಲೆಯಲ್ಲಿ ಫಿಟ್ನೆಸ್ಸು, ಪರ್ಮಿಟ್ಟು ಹಾಗೂ ಟ್ಯಾಕ್ಸ್ ಮುಗಿದ ವಾಹನಗಳ ಮಾಲೀಕರಿಗೆ ನೋಟಿಸ್ ನೀಡುತ್ತ ಬರಲಾಗುತ್ತಿದೆ. ಟ್ಯಾಕ್ಸ್ ಅವಧಿ ಮುಗಿದ ವಾಹನಗಳಿಗೆ 3 ಇಲ್ಲವೇ 6 ತಿಂಗಳಿಗೊಮ್ಮೆ ನೋಟಿಸ್ ಕಳುಹಿಸುತ್ತಲೇ ಬರಲಾಗುತ್ತಿದೆ. ಜಿಲ್ಲೆಯಲ್ಲಿ 2500 ವಾಹನಗಳಿಗೆ ಹಾಗೂ 500ಕ್ಕೂ ಹೆಚ್ಚು ಲಾರಿ ಮಾಲೀಕರಿಗೆ ನೋಟಿಸ್ ನೀಡಲಾಗಿದೆ” ಎಂದು ಅಧಿಕಾರಿ ವಿವರಿಸಿದ್ದಾರೆ.
“ಮಕ್ಕಳ ಪ್ರಾಣ ಮತ್ತು ಭವಿಷ್ಯ ಮುಖ್ಯ”
“ಕೆಲ ಶಾಲೆಗಳ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಆರ್‌ಟಿಒ ಇಲಾಖೆಯ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಶಾಲಾ ಆರ್ಥಿಕ ಪರಿಸ್ಥಿತಿ ಮಕ್ಕಳ ಭವಿಷ್ಯವನ್ನು ನಿರ್ಧರಿಸಬಾರದು, ಮಕ್ಕಳ ಸುರಕ್ಷತೆ ಇಲಾಖೆಗೆ ಮುಖ್ಯವಾಗಿದೆ. ಕರ್ನಾಟಕ ಮೋಟರ್ ಸೈಕಲ್ ಕಾಯ್ದೆಯ ಪ್ರಕಾರ ಶಾಲಾ ಆಡಳಿತ ಮಂಡಳಿಗಳು ವಾಹನಗಳನ್ನು ಹೊಂದಬೇಕು ಹಾಗೂ ಕಾರ್ಯಾಚರಿಸಬೇಕು. ಇಲ್ಲದೇ ಹೋದರ ಕಠಿಣ ಕ್ರಮ ಅನಿವಾರ್ಯ. ಕೆಲ ಗ್ರಾಮೀಣ ಪ್ರದೇಶದ ಶಾಲೆಗಳವರು ನಮ್ಮ ಶಾಲೆಗೆ ಯಾರು ಬರುತ್ತಾರೆಂದು ಬೇಜವಾಬ್ದಾರಿ ತೋರಿಸುತ್ತಿರುವುದು ಕಂಡುಬಂದಿದೆ. ಗ್ರಾಮೀಣ ರೂಟ್‌ಗಳಲ್ಲಿ ಹಳೆಯ ಬಸ್ಸುಗಳು ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಇದೆ, ಈ ಕುರಿತು ತಂಡ ರಚಿಸಿ, ಪತ್ತೆಹಚ್ಚಿ ಕ್ರಮ ಜರುಗಿಸಲಾಗುವುದು. ಮಕ್ಕಳ ಸುರಕ್ಷತೆ ವಿಷಯದಲ್ಲಿ ಯಾರೂ ಬೇಜವಾಬ್ದಾರಿ ವಹಿಸಬಾರದು. ಇದನ್ನು ಎಲ್ಲಾ ಶಾಲೆಗಳ ಆಡಳಿತ ಮಂಡಳಿಯವರು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದು ರಾಕೇಶ್.ಎಂ.” ಎಚ್ಚರಿಸುತ್ತಾರೆ.
‘ಶಾಲೆಗಳಲ್ಲಿ ಕ್ಯಾಬ್ ಕಮಿಟಿ ರಚಿಸಬೇಕು’
“ಪ್ರತಿ ಶಾಲಾ-ಕಾಲೇಜುಗಳಲ್ಲಿ ಕ್ಯಾಬ್ ಕಮಿಟಿಗಳನ್ನು ಕಡ್ಡಾಯವಾಗಿ ರಚಿಸಬೇಕು. ಆ ಮೂಲಕ ಶಾಲಾ ವಾಹನಗಳನ್ನು ಸಮರ್ಪಕ ನಿರ್ವಹಣೆ ಮಾಡಬೇಕು. ಕೆಲ ಶಾಲಾ ಆಡಳಿತ ಮಂಡಳಿಯವರು ಮಾಡಿದ್ದಾರೆ, ಕೆಲವರು ಮಾಡಿಲ್ಲ, ಕೆಲವರು ಕಮಿಟಿ ಮಾಡಿದ್ದರೂ ಸರಿಯಾಗಿ ಕೆಲಸ ಮಾಡ್ತಿಲ್ಲ. ಪಾಲಕರು ತಮ್ಮ ಮಕ್ಕಳನ್ನು ನಂಬಿಕೆಯಿಂದ ಶಾಲೆಗೆ ಕಳುಹಿಸಿರುತ್ತಾರೆ, ಪಾಲಕರ ನಂಬಿಕೆ, ವಿಶ್ವಾಸಕ್ಕೆ ಧಕ್ಕೆಯಾಗದಂತೆ ಮಕ್ಕಳನ್ನು ಸುರಕ್ಷತೆಯಿಂದ ಶಾಲೆ ಮುಗಿದನಂತರ ಅವರ ಮನೆಗಳಿಗೆ ತಲುಪಿಸುವುದು ಶಾಲೆ-ಕಾಲೇಜಿನವರ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಶಾಲೆಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು” ಎಂದು ಆರ್‌ಟಿಒ ಅಧಿಕಾರಿ ಸೂಚಿಸಿದ್ದಾರೆ.

Namma Sindhanuru Click For Breaking & Local News

ಮಾನ್ವಿಯ ಕಪಗಲ್ ಬಳಿ ನಡೆದ ಅಪಘಾತ ಘಟನೆ ಹೃದಯ ವಿದ್ರಾವಕ
“ಕಳೆದ ವರ್ಷ ಮಾನ್ವಿಯ ಲೋಯಲಾ ಶಾಲಾ ಮಕ್ಕಳಿದ್ದ ವಾಹನ ಅಪಘಾತಕ್ಕೀಡಾದ ಘಟನೆ ಹೃದಯವಿದ್ರಾವಕ ಅಂತಹ ಘಟನೆ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಲಾಖೆಯಿಂದ ಶಾಲೆಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಜನವರಿಯಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಹಾಗೂ ನವೆಂಬರ್‌ನಲ್ಲಿ ವಾಯುಮಾಲಿನ್ಯ ಜಾಗೃತಿ ಮಾಸಿಕ ಆಚರಿಸುತ್ತಾ ಬರಲಾಗುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು” ಎಂದು ಅವರು ಮನವಿ ಮಾಡಿದರು.
‘ರಾಯಲ್ಟಿ ಇಲ್ಲದೇ ಟಿಪ್ಪರ್‌ನಲ್ಲಿ ಮರಂ ಸಾಗಿಸಿದರೆ ಫೈನ್’
ಕೆಲವು ಕಡೆ ಟಿಪ್ಪರ್‌ಗಳಲ್ಲಿ ರಾಯಲ್ಟಿ ಇಲ್ಲದೇ ಮೊರಂ ಸಾಗಿಸುತ್ತಿರುವುದು ಕಂಡುಬಂದಿದೆ. ಈಗಾಗಲೇ 5 ಗಾಡಿಗಳ ಮೇಲೆ ಪ್ರಮಾಣದ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಗಣಿ ಮತ್ತು ಭೂವಿಜ್ಞಾನ ಇಲಾಖೆಯವರಿಗೂ ಗಮನಕ್ಕೆ ತರಲಾಗಿದೆ. ಕರ್ನಾಟಕ ಮೋಟರ್ ಸೈಕಲ್ ಕಾಯ್ದೆಯ ಪ್ರಕಾರ ಟಿಪ್ಪರ್‌ಗಳ ಮಾಲೀಕರು ಕಾರ್ಯಾಚರಿಸಬೇಕು. ಇಲ್ಲದೇ ಹೋದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದ” ಆರ್‌ಟಿಒ ಅಧಿಕಾರಿ ರಾಕೇಶ.ಎಂ. ಎಚ್ಚರಿಕೆ ನೀಡಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *