ನಮ್ಮ ಸಿಂಧನೂರು, ಸೆಪ್ಟೆಂಬರ್ 17
ನಗರದ ಎಲ್ಬಿಕೆ ಮತ್ತು ನೊಬೆಲ್ ಕಾಲೇಜಿನಲ್ಲಿ ಮಂಗಳವಾರ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಮಲ್ಲಿಕಾರ್ಜುನ ಕಮತಗಿ ಮಾತನಾಡಿ, ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯಗೊಂಡಿತು. ಆದರೆ ಹೈ.ಕ.ಭಾಗ 1948 ಸೆಪ್ಟೆಂಬರ್ 17ರ ವರೆಗೆ ಅಂದರೆ 13 ತಿಂಗಳು 17 ದಿನಗಳ ಕಾಲ ನಿಜಾಮನ ವಶದಲ್ಲಿತ್ತು. ನಿಜಾಮನ ಹಿಡಿತದಲ್ಲಿದ್ದ ಹೈದರಾಬಾದ್ ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಲು ಈ ಭಾಗದ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನೂ ಲೆಕ್ಕಿಸದೇ ಹೋರಾಟ ನಡೆಸಿದ್ದಾರೆ. ಅಂದು ದೇಶದ ಗೃಹ ಮಂತ್ರಿಗಳಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು ಹಾಗೂ ಕಾನೂನು ಸಚಿವರಾಗಿದ್ದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಶ್ರಮದ ಫಲವಾಗಿ ಹೈದರಾಬಾದ್ ಭಾರತದ ಒಕ್ಕೂಟಕ್ಕೆ 1948 ಸೆಪ್ಟೆಂಬರ್ 17ರಂದು ವಿಲೀನವಾಯಿತು ಎಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಪರಶುರಾಮ ಮಲ್ಲಾಪುರ ವಹಿಸಿದ್ದರು. ಐಶ್ವರ್ಯ ದಳವಾಯಿ ನಿರ್ವಹಿಸಿದರು. ಅಂಬರೀಶ್ ರೌಡಕುಂದಾ ನಿರೂಪಿಸಿದರು. ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.