ಸಿಂಧನೂರು: ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಔಷಧ ಕೊರತೆ, ಬಾಣಂತಿ ಕುಟುಂಬದವರ ಪರದಾಟ !

Spread the love

ಲೋಕಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಫೆಬ್ರವರಿ 18

ನಗರದ ಪಿಡಬ್ಲುö್ಯಡಿ ಕ್ಯಾಂಪಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ Hepatitis B Immunoglobulin I P HEPAREL 100 IU ಔಷಧಿ ಕೊರತೆಯಿಂದ ತಾಯಿ ಮತ್ತು ನವಜಾತ ಶಿಶುಗಳು ಸಮಸ್ಯೆ ಅನುಭವಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹೆರಿಗೆಯ ನಂತರ ಅಗತ್ಯವಿರುವ ನವಜಾತು ಶಿಶುವಿಗೆ ಆರೋಗ್ಯದ ಹಿತದೃಷ್ಟಿಯಿಂದ ಕಡ್ಡಾಯವಾಗಿ ನೀಡಬೇಕಾದ ಔಷಧದ ಅಭಾವದಿಂದ ಬಡ ಕುಟುಂಬಗಳು ಆತಂಕ ಎದುರಿಸುತ್ತಿದ್ದಾರೆ.
ಬಜೆಟ್ ಕೊರತೆ
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ Hepatitis B Immunoglobulin I P HEPAREL 100 IU ಔಷಧಿ ಅಭಾವವಿರುವ ಕಾರಣ ಹೆರಿಗೆಯಾದ ನಂತರ ಅಗತ್ಯವಿರುವ ನವಜಾತ ಶಿಶುಗಳಿಗೆ ಈ ಔಷಧಿ ದೊರೆಯುತ್ತಿಲ್ಲ. 24 ಗಂಟೆಯೊಳಗೆ ಈ ಔಷಧಿಯನ್ನು ನೀಡಬೇಕಿದ್ದು, ಬೇರೆ ದಾರಿಯಿಲ್ಲದೇ ಹೆರಿಗೆಯ ನಂತರ ಕುಟುಂಬದವರು ಖಾಸಗಿ ಔಷಧಿ ಅಂಗಡಿಗಳಲ್ಲಿ ಹಣಕೊಟ್ಟು ಔಷಧಿ ತರುತ್ತಿದ್ದಾರೆ. ಈ ಕುರಿತು ಆಸ್ಪತ್ರೆಯವರನ್ನು ವಿಚಾರಿಸಿದರೆ, ಬಜೆಟ್ ಬಂದಿಲ್ಲ ಹಾಗಾಗಿ ಔಷಧಿ ಲಭ್ಯವಿಲ್ಲ ಎಂಬ ಉತ್ತರ ದೊರೆಯುತ್ತದೆ ಎಂದು ಬಾಣಂತಿಯರ ಕುಟುಂಬಸ್ಥರು ತಿಳಿಸಿದ್ದಾರೆ. ಈ ನಡುವೆ ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಇರುವ ಬಗ್ಗೆ ಇತ್ತೀಚಿಗೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದ್ದು, ಅದರಲ್ಲೂ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳು ಔಷಧಿ ಕೊರತೆಯಿಂದ ಯಾತನೆ ಅನುಭವಿಸುವಂತಾಗಿದೆ.
ಔಷಧಕ್ಕಾಗಿ ಪರದಾಡಿದ ಕುಟುಂಬ
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರಿಗೆ ಹೆರಿಗೆಯಾಗಿದೆ. ವೈದ್ಯರು ಸೂಕ್ತ ಚಿಕಿತ್ಸೆ ಕೊಟ್ಟು ಹೆರಿಗೆ ಮಾಡಿಸಿದ್ದಾರೆ. ನವಜಾತ ಶಿಶುವಿಗೆ 24 ಗಂಟೆಯೊಳಗೆ ಔಷಧವನ್ನು ನೀಡಬೇಕಿದೆ. ಆದರೆ ಔಷಧ ಕೊರತೆಯಿಂದಾಗಿ ಹೊರಗಡೆ ತರಲು ವೈದ್ಯರು ಬಿಳಿ ಹಾಳೆಯಲ್ಲಿ ಬರೆದುಕೊಟ್ಟಿದ್ದಾರೆಂದು ಹೇಳಲಾಗಿದೆ. ಆದರೆ ಬಿಳಿ ಹಾಳೆಯಲ್ಲಿ ಬರೆದು ಕೊಟ್ಟ ಔಷಧವನ್ನು ಖಾಸಗಿ ಔಷಧ ಅಂಗಡಿಯವರು ನೀಡಲು ಹಿಂದೇಟು ಹಾಕಿದ್ದಾರೆ. ಇದರಿಂದ ಬಾಣಂತಿಯ ಕುಟುಂಬ ಕೆಲವೊತ್ತು ಸಮಸ್ಯೆಗೆ ಸಿಲುಕಿ ಪರದಾಡಿದೆ. ಇತ್ತ 5 ಸಾವಿರ ರೂಪಾಯಿ ಹೊಂದಿಸಲು ಆಗದೇ, ಅತ್ತ ಔಷಧಿ ಪಡೆಯಲು ಕುಟುಂಬದವರು ದಯನೀಯ ಸ್ಥಿತಿ ಅನುಭವಿಸಿದ್ದಾರೆ. ಈ ಘಟನೆ ಸಾಮಾಜಿಕ ಕಾರ್ಯಕರ್ತರೊಬ್ಬರ ಗಮನಕ್ಕೆ ಬಂದಿದ್ದು, ಕೊನೆಗೆ ಔಷಧ ಅಂಗಡಿಯವರ ಬಳಿ ವಾಸ್ತವ ಪರಿಸ್ಥಿತಿ ತಿಳಿಸಿದಾಗ ಆನಂತರ ಆ ಮಗುವಿಗೆ ಔಷಧ ನೀಡಿದ್ದರಿಂದ ಕುಟುಂಬ ನಿರುಮ್ಮಳವಾಗಿದೆ ಎಂದು ತಿಳಿದುಬಂದಿದೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *