ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 31
ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಡಿಎಪಿ-ಎನ್‌ಪಿಕೆ-18-46-0 ಹಾಗೂ ಕಾಂಪ್ಲೆಕ್ಸ್ 20-20-13 ರಸಗೊಬ್ಬರದ ತೀವ್ರ ಕೊರತೆಯಾಗಿದ್ದು, ಇದರಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ. ರೈತರ ಬೇಡಿಕೆಗೆ ತಕ್ಕಂತೆ ಪೂರೈಕೆಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಕರ್ನಾಟಕ ರೈತ ಸಂಘ ತಾಲೂಕು ಸಮಿತಿ ನೇತೃತ್ವದಲ್ಲಿ ತಹಸೀಲ್ದಾರ್ ಅರುಣ್‌ಕುಮಾರ ದೇಸಾಯಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿಪತ್ರ ರವಾನಿಸಲಾಯಿತು. ಉಭಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಹಿಂಗಾರು, ಜೋಳ, ಕಡಲೆ, ಕುಸುಬೆ, ಸೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಇತರೆ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಈ ಬೆಳೆಗಳಿಗೆ ಡಿಎಪಿ-ಎನ್‌ಪಿಕೆ-18-46-0 ಹಾಗೂ ಕಾಂಪ್ಲೆಕ್ಸ್ 20-20-13 ರಸಗೊಬ್ಬರ ಅವಶ್ಯವಾಗಿದೆ. ಆದರೆ ಸಿಂಧನೂರು ನಗರ ಸೇರಿದಂತೆ ಅವಳಿ ಜಿಲ್ಲೆಯ ತಾಲೂಕುಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವುದಿಲ್ಲ. ರೈತರು ಗೊಬ್ಬರಕ್ಕಾಗಿ ಅಲೆದಾಡಿ ರಾಜ್ಯ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೆ, ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಟ್ಟದಲ್ಲಿ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಹೇಳುತ್ತಿದ್ದಾರೆ ಎಂದು ಮನವಿಪತ್ರದಲ್ಲಿ ಗಮನ ಸೆಳೆದಿದ್ದಾರೆ.
“ಗೊಂದಲ ನಿವಾರಿಸಿ ಗೊಬ್ಬರ ಪೂರೈಸಿ”
“ಗೊಬ್ಬರ ಕಂಪನಿಗಳು ವ್ಯಾಪಾರಿಗಳಿಗೆ ಸರಿಯಾಗಿ ಸರಬರಾಜು ಮಾಡದೆ ಕೃತಕ ಅಭಾವ ಸೃಷ್ಠಿಸಿ ದೊಡ್ಡ ಮಟ್ಟದ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ. ಇನ್ನೊಂದು ಕಡೆ, ಕೇಂದ್ರ ಸರ್ಕಾರ ಸಬ್ಸಿಡಿ ಬಾಕಿ ಹಣ ಉಳಿಸಿಕೊಂಡಿರುವುದರಿAದ ಗೊಬ್ಬರ ಸರಬರಾಜು ಮಾಡಲು ತೊಂದರೆ ಆಗಿದೆ ಎಂದು ಕಂಪನಿಗಳು ಹೇಳುತ್ತಿವೆ. ಮತ್ತೊಂದು ಕಡೆ ಇಸ್ರೇಲ್, ಪ್ಯಾಲಿಸ್ತೇನ್, ಇರಾಕ್ ಮತ್ತು ರಷಿಯಾ, ಉಕ್ರೇನ್ ದೇಶಗಳ ನಡುವೆ ನಡೆದಿರುವ ಯುದ್ಧಗಳ ಕಾರಣದಿಂದ ಹೊರ ದೇಶಗಳಿಂದ ಗೊಬ್ಬರ ಆಮದು ಆಗುತ್ತಿಲ್ಲಾ ಎಂದು ಹೇಳಲಾಗುತ್ತದೆ. ಕೂಡಲೇ ರೈತರ ಸಂಕಷ್ಟವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮತ್ತು ಕೇಂದ್ರ ಕೃಷಿಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಅವರ ಗಮನ ಸೆಳೆದು ರೈತರ ಜಮೀನಿನ ಬೆಳೆಗಳ ಅಗತ್ಯಕ್ಕೆ ತಕ್ಕಂತೆ ಗೊಬ್ಬರ ಪೂರೈಕೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.
“ಬಿತ್ತನೆ ಮಾಡಿ ತಿಂಗಳಾದರೂ ಗೊಬ್ಬರ ಕಾಣದ ಬೆಳೆಗಳು”
“ರೈತರ ಸಮಸ್ಯೆ ಪರಿಹರಿಸಲು ರಾಜ್ಯ ಸರ್ಕಾರ ಮತ್ತು ರಾಜ್ಯದ ಶಾಸಕರು ಕೂಡ ರಾಜ್ಯದ ಅನ್ನದಾತ ರೈತರ ನೆರವಿಗೆ ಬಾರದೆ ಇರುವುದು ಖೇದಕರ ಸಂಗತಿಯಾಗಿದೆ. ಕೃಷಿಯೆಂದರೆ, ನಷ್ಟದ ಕ್ಷೇತ್ರವೆಂದು, ಹಿಂದೆ ಸರಿಯುತ್ತಿರುವ ರೈತರು ಸರ್ಕಾರದ ಈ ಬೇಜವಾಬ್ದಾರಿ ನೀತಿಯಿಂದ ಕೃಷಿಯಿಂದ ವಿಮುಖವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂಗಾರು ಬೆಳೆ ಬಿತ್ತನೆ ಮಾಡಿ ಒಂದು ತಿಂಗಳು ಕಳೆದರು ಗೊಬ್ಬರ ಹಾಕದ ಕಾರಣ ಬೆಳೆಯ ಫಸಲು ಕುಂಠಿತವಾಗುತ್ತಿದೆ. ಈ ಬಾರಿ ತುಂಗಾಭದ್ರಾ ಜಲಾಶಯವು ಈಗಲು ತುಂಬಿ ತುಳುಕುತ್ತಿದೆ. 2ನೇ ಅವಧಿಯ ಭತ್ತದ ಬೆಳೆಗೆ ನೀರು ದೊರೆಯುವ ಭರವಸೆ ಪಕ್ಕಾ ಆಗಿದೆ. ತುಂಗಾಭದ್ರ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಮಯಕ್ಕೆ ಸರಿಯಾಗಿ ಅಗತ್ಯವಾದ ರಸಗೊಬ್ಬರ ದೊರೆಯದೇ ಇದ್ದರೆ ಕೃಷಿ ಉತ್ಪನ್ನ ಕುಂಠಿತವಾಗುತ್ತದೆ” ಎಂದು ಸಂಘಟನೆಯ ಪದಾಧಿಕಾರಿಗಳು ಅಸಮಾಧಾನ ಹೊರಹಾಕಿದರು.
ಹಕ್ಕೊತ್ತಾಯಗಳು: ಅತ್ಯಂತ ಶೀಘ್ರಗತಿಯಲ್ಲಿ ಡಿಎಪಿ-ಎನ್‌ಪಿಕೆ-18-46-0 ಹಾಗೂ ಕಾಂಪ್ಲೆಕ್ಸ್ 20-20-13 ರಸಗೊಬ್ಬರವನ್ನು ಸರಬರಾಜು ಮಾಡಿ ಅನ್ನದಾತ ರೈತರ ನೆರವಿಗೆ ಬರಬೇಕು, ಬೆಳೆ ಕಟಾವಿಗೆ ಮುಂಚಿತವಾಗಿ ಹೋಬಳಿಗೊಂದು ಭತ್ತ, ತೊಗರಿ ಸರ್ಕಾರಿ ಖರೀದಿ ಕೇಂದ್ರ ಶೀಘ್ರಗತಿಯಲ್ಲಿ ತೆರೆಯಬೇಕು, ಅತಿ ಹೆಚ್ಚು ಮಳೆಯಿಂದ ಭತ್ತ, ತೊಗರಿ ಹಾಗೂ ತೋಟಗಾರಿಕೆ ಬೆಳೆಗಳು ನಷ್ಟವಾಗಿದ್ದು ಪ್ರತಿ ಎಕರೆಗೆ 30 ಸಾವಿರ ರೂಪಾಯಿ ಪರಿಹಾರವನ್ನು ಒದಗಿಸಬೇಕು, ಅಕಾಲಿಕ ಮಳೆಗೆ ದವಸ ದಾನ್ಯಗಳನ್ನು ರಕ್ಷಿಸಿಕೊಳ್ಳಲು ರೈತರಿಗೆ ತಾಡಪಾಲುಗಳು ಉಚಿತವಾಗಿ ವಿತರಿಸಬೇಕು, ಕಳೆದ ವರ್ಷ ಸರ್ಕಾರ ಖರೀದಿಸಿದ ಜೋಳದ ಬಾಕಿ ಹಣವನ್ನು ಮಂಜೂರು ಮಾಡಬೇಕು ಎಂದು ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳ ಕ್ಯಾಂಪ್, ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರ್ಗಿ, ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ, ಯಲ್ಲಪ್ಪ ಭಜಂತ್ರಿ, ವೆಂಕಟೇಶ ಉದ್ಬಾಳ, ಅಮೀನಸಾಬ್ ನದಾಫ್ ಸೇರಿದಂತೆ ಇನ್ನಿತರರಿದ್ದರು.