ಸಿಂಧನೂರು: ಹಳೆ ಬಜಾರ್ ರಸ್ತೆ ಅತಿಕ್ರಮಿಸಿದ ಕಟ್ಟಡಗಳನ್ನು ತೆರವುಗೊಳಿಸಲು ಆಗ್ರಹಿಸಿ ಕೆಆರ್‌ಎಸ್‌ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ರವಾನೆ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಮಾರ್ಚ್ 3

ನಗರದ ಚನ್ನಮ್ಮ ಸರ್ಕಲ್ (ಹಳೆ ಬಜಾರ್)ನಿಂದ ಟಿಪ್ಪು ಸುಲ್ತಾನ್ ಸರ್ಕಲ್‌ವರೆಗೆ ಎಡ ಮತ್ತು ಬಲ ಭಾಗದ ರಸ್ತೆ ಅತಿಕ್ರಮಿಸಿದ ಕಟ್ಟಡಗಳನ್ನು (ಬಿಲ್ಡಿಂಗ್) ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ (ಎಐಯುಕೆಎಸ್) ವತಿಯಿಂದ ತಹಸೀಲ್ದಾರ ಅರುಣ್ ದೇಸಾಯಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮಂಗಳವಾರ ಮನವಿಪತ್ರ ರವಾನಿಸಲಾಯಿತು.
ನಗರ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಇದರಿಂದಾಗಿ ನಗರದ ಪ್ರಮುಖ ಏರಿಯಾಗಳಲ್ಲಿ ಜನಸಂದಣಿ ಜಾಸ್ತಿಯಾಗುತ್ತಿದ್ದು, ಹೆಚ್ಚು ಜನನಿಬಿಡತೆ ಇರುವ ಪ್ರದೇಶಗಳಲ್ಲಿ ಹಳೆಬಜಾರ್ ಪ್ರದೇಶವೂ ಒಂದಾಗಿದೆ. ಈ ಪ್ರದೇಶದ ರಸ್ತೆಯಲ್ಲಿ ಜನಸಾಮಾನ್ಯರು ಸಂಚರಿಸುವುದಕ್ಕೆ ದಿನವೂ ಹರಸಾಹಸಪಡುತ್ತಿದ್ದಾರೆ. ಹಾಗಾಗಿ ರಸ್ತೆ ಅಗಲೀಕರಣ ಅತ್ಯಂತ ಅವಶ್ಯಕತೆ ಇರುತ್ತದೆ ಎಂದು ಮನವಿಪತ್ರದಲ್ಲಿ ಸಂಘಟಕರು ಪ್ರಸ್ತಾಪಿಸಿದ್ದಾರೆ.
40 ಫೀಟ್ ಇದ್ದ ರಸ್ತೆ 20 ಫೀಟ್‌ಗೆ ಬಂದಿದೆ !
ಕಳೆದ 2004ರಲ್ಲಿ ಸರ್ಕಾರ ಚನ್ನಮ್ಮ ಸರ್ಕಲ್‌ನಿಂದ-ಟಿಪ್ಪು ಸುಲ್ತಾನ್ ಸರ್ಕಲ್‌ವರೆಗೆ ಇರುವ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿದ ಕಟ್ಟಡಗಳನ್ನು ತೆರವುಗೊಳಿಸಲು ಆದೇಶವಿದ್ದರೂ ಸಹ ಮತ್ತು ಎರಡೂ ಬದಿಯಲ್ಲಿ ಮಾರ್ಕ್ಔಟ್ ಮಾಡಿದ್ದೂ ಹಾಗೆಯೇ ಉಳಿದಿರುತ್ತದೆ. ಆದರೆ 22 ವರ್ಷಗಳು ಕಳೆದರೂ ಇಲ್ಲಿಯವರೆಗೂ ರಸ್ತೆ ಅಗಲೀಕರಣ ಮಾಡುವ ಕೆಲಸ ಮಾತ್ರ ನಡೆದಿರುವುದಿಲ್ಲ. ಎರಡೂ ಬದಿಗಳಲ್ಲಿ 40 ಫೀಟ್ ಇರಬೇಕಾದ ರಸ್ತೆಯನ್ನು, ಅತಿಕ್ರಮಿಸಿದ್ದ 20 ಫೀಟ್‌ಗೆ ತಂದಿಳಿಸಿದ್ದಾರೆ. ಅಂದರೆ 40 ಫೀಟ್ ಇದ್ದ ಸಾರ್ವಜನಿಕ ರಸ್ತೆ ಅತಿಕ್ರಮಣಕಾರದಿಂದ 20 ಫೀಟ್ ಆಗಿದ್ದು, ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗಿರುತ್ತದೆ. ಹಾಗಾಗಿ ಕೂಡಲೇ ಎರಡೂ ಬದಿಯ ಕಟ್ಟಡಗಳನ್ನು ತೆರವುಗೊಳಿಸಿ ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಬೀದಿ ವ್ಯಾಪಾರಸ್ಥರಿಗೆ ಒಂದು ನ್ಯಾಯ, ಬಿಲ್ಡಿಂಗ್ ಧಣಿಗಳಿಗೆ ಒಂದು ನ್ಯಾಯವೇ ?
ಕಳೆದ ವರ್ಷ 25-12-2024ರಂದು ಹೈಕೋರ್ಟ್ ಆದೇಶವಿದೆಯೆಂದು ಬೀದಿ ಬದಿಯ ವ್ಯಾಪಾರಸ್ಥರನ್ನು ಬೀದಿಗೆ ತಳ್ಳಿದ ನಗರಸಭೆ ಪೌರಾಯುಕ್ತರು, ತಹಸೀಲ್ದಾರ್ ಸಿಂಧನೂರು, ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳು, ತೋಟಗಾರಿಕೆ ಇಲಾಖೆಯವರು ಸೇರಿಕೊಂಡು ಸಣ್ಣ ಪುಟ್ಟ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಿ, ರಸ್ತೆ ಅತಿಕ್ರಮಣ ಮಾಡಿದ ಬಿಲ್ಡಿಂಗ್ ಧಣಿಗಳಿಗೆ ದಯೆ ತೋರಿಸಿ ಬಚಾವ್ ಮಾಡಿದ್ದಾರೆ. ಬೀದಿ ವ್ಯಾಪಾರಸ್ಥರನ್ನು ಹಟಾವ್ ಮಾಡಿ ಸರ್ಕಾರಕ್ಕೆ ಸೈ ಎನಿಸಿಕೊಂಡಿದ್ದಾರೆ. ಹೈಕೋರ್ಟ್ ಆದೇಶವಿರುವುದು ರೋಡಿನ ಮಧ್ಯ ಭಾಗದಿಂದ 21 ಮೀಟರ್ ಅತಿಕ್ರಮಿಸಿದ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಇದೆ. ಅಲ್ಲಿ ಪ್ರಯೋಗ ಮಾಡಲಾಗದೇ ದುಡಿದುಕೊಂಡು ತಿನ್ನುವವರ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿರುವುದು ಯಾವ ನ್ಯಾಯ, ಇದಕ್ಕೆ ನಾವು ಸಿಂಧನೂರು ಅಭಿವೃದ್ಧಿ ಎನ್ನಬಹುದೇ ? ಎಂದು ಮನವಿಪತ್ರದಲ್ಲಿ ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕೆಆರ್‌ಎಸ್ ಜಿಲ್ಲಾ ಕಾರ್ಯದರ್ಶಿ ಚಿಟ್ಟಿಬಾಬು, ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ, ಕೆ.ಆರ್.ಎಸ್.ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ ಸೇರಿದಂತೆ ಇನ್ನಿತರರಿದ್ದಾರೆ.
ಹೋರಾಟದ ಎಚ್ಚರಿಕೆ
ನಗರದ ಹಳೆ ಬಜಾರ್‌ನಲ್ಲಿ ಎಡ ಮತ್ತು ಬಲ ಭಾಗದ ಎರಡೂ ಬದಿಗಳಲ್ಲಿ ಮಾರ್ಕ್ಔಟ್ ಮಾಡಿದರೂ ತೆರವುಗೊಳಿಸದೇ ಪಟ್ಟಭದ್ರ ಹಿತಾಸಕ್ತಿಗಳ ಪರ ಕೆಲಸ ಮಾಡಿದ್ದು ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ. ಕಾನೂನು ದೃಷ್ಟಿಯಲ್ಲಿ ಎಲ್ಲರಿಗೂ ಒಂದೇ ನ್ಯಾಯ. ಆದರೆ, ಈ ರಸ್ತೆಯಲ್ಲಿ ಅಗಲೀಕರಣದ ವಿಷಯದಲ್ಲಿ ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಮಾಡಲಾಗಿದೆ. ಸಿಂಧನೂರಿನಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ತಾರತಮ್ಯ ಧೋರಣೆಯನ್ನು ನಮ್ಮ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಮತ್ತು ಕೂಡಲೇ ಹಳೆ ಬಜಾರ್‌ನಲ್ಲಿ ತೆರವು ಕಾರ್ಯಾಚರಣೆಯನ್ನು ನಡೆಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ. ಒಂದು ವೇಳೆ ವಿಳಂಬ ಧೋರಣೆ ಅನುಸರಿಸಿದ್ದಲ್ಲಿ ನಮ್ಮ ಸಂಘಟನೆಯಿAದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮನವಿಪತ್ರದಲ್ಲಿ ತಿಳಿಸಿದ್ದಾರೆ.
ಹಕ್ಕೊತ್ತಾಯಗಳು:
1) ಸಿಂಧನೂರಿನ ಹಳೆಬಜಾರ್‌ನ ಎರಡೂ ಬದಿಯ ರಸ್ತೆಗಳನ್ನು ಅತಿಕ್ರಮಿಸಿದ ಕಟ್ಟಡಗಳನ್ನು ಕೂಡಲೇ ತೆರವುಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು, 2) ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ರಸ್ತೆ ಅತಿಕ್ರಮಿಸಿದ ಮಾಲೀಕರಣ ಕಟ್ಟಡಗಳನ್ನು ತೆರವುಗೊಳಿಸಿ, ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು, 3) ರಸ್ತೆ ಅತಿಕ್ರಮಿಸಿದ ಕಟ್ಟಡ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು, 4)ಹಳೆ ಬಜಾರ್ ರಸ್ತೆ ಚಿಕ್ಕದಾಗಿರುವುದರಿಂದ ಆಂಬ್ಯುಲೆನ್ಸ್ ಓಡಾಟ, ಸಾರ್ವಜನಿಕ ವಾಹನಗಳ ಸಂಚಾರ, ಜನಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದ್ದು, ಕೂಡಲೇ ತೆರವು ಕಾರ್ಯಾಚರಣೆ ನಡೆಸಿ, ರಸ್ತೆ ಅಗಲೀಕರಣ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ರವಾನಿಸಿದ ಮನವಿಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.



Spread the love

Leave a Reply

Your email address will not be published. Required fields are marked *