ನಮ್ಮ ಸಿಂಧನೂರು, ಜೂನ್ 2
ತುರ್ವಿಹಾಳ ಹೋಬಳಿಯ ಚಿಕ್ಕಬೇರಿಗಿ ಸೀಮಾದ ಸರ್ವೆ ನಂ.10ರ ಪರಂಪೂಕ ಹಾಗೂ ಸರ್ವೆ ನಂ.96 ರ ಖಾರಿಜ ಖಾತಾ ಜಮೀನಿಗೆ ಸಂಬಂಧಿಸಿದಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ನಿರುಪಾದಿ ಗೋಮರ್ಸಿ ಅವರು ನೀಡಿರುವ ಹೇಳಿಕೆ ಹಾಗೂ ಸಲ್ಲಿಸಿರುವ ಮನವಿಪತ್ರ ಸತ್ಯಕ್ಕೆ ದೂರವಾದದ್ದು ಎಂದು ಕರ್ನಾಟಕ ರೈತ ಸಂಘ (ಎಐಕೆಕೆಎಸ್) ತಾಲೂಕು ಸಮಿತಿ ಸ್ಪಷ್ಟಪಡಿಸಿದೆ.
ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ, ಕಾರ್ಯದರ್ಶಿ ಚಿಟ್ಟಿಬಾಬು ಹಾಗೂ ರೈತ ಮುಖಂಡ ಬಿ.ಎನ್.ಯರದಿಹಾಳ ಅವರು, ಸರ್ವೆ ನಂ.96 ರಲ್ಲಿ 28 ಎಕರೆ ಖಾರಿಜಖಾತಾ ಭೂಮಿ ಇದ್ದು, ಈ ಭೂಮಿಯಲ್ಲಿ ಶೇ.80 ರಷ್ಟು ಉಳುಮೆಗೆ ಯೋಗ್ಯವಾಗಿಲ್ಲ, ಉಳಿದ್ದ ಶೇ.20 ರಷ್ಟು ಭೂಮಿಯಲ್ಲಿ ಬಡ ದಲಿತ ಸಮುದಾಯದ ಭೂರಹಿತರು 1 ರಿಂದ 2 ಎಕರೆ ಜಮೀನಿನಲ್ಲಿ ಕಳೆದ 20-30 ವರ್ಷಗಳಿಂದ ಉಳುಮೆ ಮಾಡುತ್ತ, ಸಜ್ಜೆ, ಜೋಳ, ತೊಗರಿ ಬೆಳೆದುಕೊಂಡು ಉಪಜೀವನ ನಡೆಸುತ್ತ ಬಂದಿದ್ದಾರೆ. ಆದರೆ ರಾಷ್ಟ್ರ ಸಮಿತಿ ಪಕ್ಷದ ಮುಖಂಡರು ಪಟ್ಟಭದ್ರಹಿತಾಸಕ್ತಿಗಳ ಮಾತುಗಳನ್ನು ಕೇಳಿ, ಬಡ ದಲಿತ ಭೂರಹಿತ ಕುಟುಂಬದವರನ್ನು ಪಟ್ಟಭದ್ರಹಿತಾಸಕ್ತಿಗಳು ಎಂದು ಕರೆದಿರುವುದು ಮತ್ತು ಅಧಿಕಾರಿಗಳು ಸಾಗುವಳಿದಾರರ ಜೊತೆಗೆ ಶಾಮೀಲಾಗಿದ್ದಾರೆಂದು ಹೇಳಿರುವುದು ಸರಿಯಲ್ಲ ಎಂದು ಹೇಳಿದರು.
ಈ ಸರ್ವೆ ನಂಬರಿನಲ್ಲಿ ಉಳುಮೆ ಮಾಡುತ್ತಿರುವ ಸಾಗುವಳಿದಾರರು, ಪಾರಂ ನಂ.57 ಅರ್ಜಿಯನ್ನು ಕಂದಾಯ ಇಲಾಖೆಗೆ ಸಲ್ಲಿಸಿದ್ದಾರೆ. ತಹಸೀಲ್ದಾರರು, ಜಿಲ್ಲಾಧಿಕಾರಿಗಳು ಸರ್ಕಾರ ಮಟ್ಟದ ಕಂದಾಯ ಸಚಿವರಿಗೂ ಭೂಮಿಯ ಪಟ್ಟಕ್ಕಾಗಿ ಮನವಿಯನ್ನೂ ಕೊಟ್ಟಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ, ಕಂದಾಯ ನಿರೀಕ್ಷಕರು, ಅರ್ಜಿ ಸಲ್ಲಿಸಿದ ಫಲಾನುಭವಿಗಳೊಂದಿಗೆ ಜಿಪಿಎಸ್ ಫೋಟೋ ತೆಗೆದುಕೊಂಡು, ಪಂಚನಾಮೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ಎಲ್ಲಾ ಸತ್ಯಾಂಶಗಳನ್ನು ಕೂಲಂಕಷವಾಗಿ ತಿಳಿದುಕೊಳ್ಳದೇ ಬಡ ದಲಿತ ಭೂರಹಿತ ಕುಟುಂಬಗಳ ಬಗ್ಗೆ ಇಲ್ಲಸಲ್ಲದ ಮಾತನಾಡಿರುವುದು ತಮ್ಮ ಪಕ್ಷಕ್ಕೆ ತಕ್ಕುದಾದುದಲ್ಲ. ಕರ್ನಾಟಕ ರಾಷ್ಟç ಸಮಿತಿ ಪಕ್ಷ, ದೊಡ್ಡ ದೊಡ್ಡ ಭೂಮಾಲೀಕರ ವಿರುದ್ಧ ಹೋರಾಟ ನಡೆಸಬೇಕೇ ಹೊರತು, ಭೂರಹಿತ ಬಡ ದಲಿತ ಕುಟುಂಬಗಳ ವಿರುದ್ಧ ಅಲ್ಲ ಎಂದು ಕಿವಿಮಾತು ಹೇಳಿದರು.
20-30 ವರ್ಷಗಳಿಂದ ಜಮೀನು ಸಾಗುವಳಿ ಮಾಡಿದ ದಲಿತ ಕುಟುಂಬಗಳಿಗೆ ಪಟ್ಟಾ ನೀಡಬೇಕು, ಸಾಗುವಳಿ ಮಾಡುವ ಜಮೀನು ಹೊರತುಪಡಿಸಿ ಸರ್ವೆ ನಂ.10 ಹಾಗೂ ಸರ್ವೆ ನಂ.96 ರ ವ್ಯಾಪ್ತಿಯ ಭೂಮಿಯನ್ನು ಸರ್ವೆ ಮಾಡಿಸಿ ತಂತಿಬೇಲಿ ಹಾಕಿ ರಕ್ಷಣೆ ಮಾಡಬೇಕು, ತಪ್ಪು ಅಂಶಗಳುಳ್ಳ ಮನವಿಪತ್ರವನ್ನು ಸರ್ಕಾರ ಮಾನ್ಯ ಮಾಡಬಾರದು, ಸಾಗುವಳಿ ಮಾಡುವ ಎಲ್ಲಾ ಭೂಹೀನರಿಗೆ ಪಟ್ಟಾ ಕೊಡಲೇಬೇಕು, ಭೂಮಿ ಸಾಗುವಳಿ ಮಾಡುವ ಸಾಗುವಳಿದಾರರ ಮೇಲೆ ಅಧಿಕಾರಿಗಳ ಕಿರುಕುಳ ನಿಲ್ಲಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಗುಡದೇಶ ಬೇರಿಗಿ, ಯಲ್ಲಪ್ಪ ಭಜಂತ್ರಿ ಚಿಕ್ಕಬೇರಿಗಿ, ಮಹಿಳಾ ಘಟಕದ ಅಧ್ಯಕ್ಷ ರೇಣುಕಮ್ಮ ಬೂದಿಹಾಳಕ್ಯಾಂಪ್, ಬಸವರಾಜ ಚಿಕ್ಕಬೇರಿಗಿ, ಪಾಮಣ್ಣ ಚಿಕ್ಕಬೇರಿಗಿ, ಸಂಜೀವಪ್ಪ ಚಿಕ್ಕಬೇರಿಗಿ, ಹನುಮಂತ ಪೂಜಾರಿ ಇದ್ದರು.