Spread the love

ಲೋಕಲ್‌ ನ್ಯೂಸ್‌ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು,ಅಕ್ಟೋಬರ್ 05
ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಇತ್ತೀಚೆಗೆ ತಾಲೂಕಿನ ರಾಮತ್ನಾಳ ಹಾಗೂ ಗೋನವಾರ ಗ್ರಾಮಗಳಿಗೆ ಮಾತ್ರ ನಾಮ್‌ಕೇವಾಸ್ತೆಗೆ ಭೇಟಿ ನೀಡಿ, ಅತಿವೃಷ್ಟಿಯಿಂದ ಸಂಕಷ್ಟದಲ್ಲಿರುವ ರೈತರನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಕರ್ನಾಟಕ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ರಮೇಶ ಪಾಟೀಲ್ ಭೇರಿಗಿ ಅವರು ಆರೋಪಿಸಿದ್ದಾರೆ.
ಈ ಕುರಿತು ಭಾನುವಾರ ಹೇಳಿಕೆ ನೀಡಿರುವ ಅವರು,“ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿರೇಬೇರಿಗಿ, ವೀರಾಪುರ, ರತ್ನಾಪುರ, ಕಲ್ಮಂಗಿ, ಉಮಲೂಟಿ, ಬುಕ್ಕನಹಟ್ಟಿ, ಗೊರಲೂಟಿ, ಹೊಸೂರು, ಹತ್ತಿಗುಡ್ಡ, ಗುಂಡಾ, ಗಂಟೇರಹಟ್ಟಿ, ಮಂಗನಮ್ಮನ ಹಟ್ಟಿ, ರತ್ನಾಪುರ ಹಟ್ಟಿ, ಬೊಮ್ಮನಾಳ, ಮಾಂಪುರ, ಸಂಕನಾಳ, ಹೊಗರನಾಳ-ಗುಡಿಹಾಳ, ಹೊಕ್ರಾಣಿ, ಬಪ್ಪೂರು ಗ್ರಾಮಗಳ ಸೀಮಾದ ರೈತರ ಹೊಲಗಳಲ್ಲಿ ತೊಗರಿ ಬೆಳೆಯಲ್ಲಿ ನೀರು ನಿಂತಿದೆ. ಇದರಿಂದ ತಂಪು ಹೆಚ್ಚಾಗಿ ಕೆಲವು ಕಡೆ ತೊಗರಿಯ ಕಾಂಡ ಕೊಳೆಯುತ್ತಿದೆ. ಇನ್ನೂ ಹಲವು ಕಡೆ ನೆಟೆ ರೋಗ ಹೆಚ್ಚಿದೆ. ಸುರಿಯುತ್ತಿರುವ ಮಳೆಗೆ ಮೊಗ್ಗುಗಳು ಉದುರುತ್ತಿವೆ. ಇನ್ನೂ ಸಿಂಧನೂರು ತಾಲೂಕು ವ್ಯಾಪ್ತಿಯ ಉದ್ಬಾಳ.ಜೆ, ಗೋಮರ್ಸಿ, ಜೋಳದರಾಶಿ, ಮಾಡಸಿರವಾರ, ಬೆಳಗುರ್ಕಿ, ಕಾತರಕಿ.ಡಿ, ಮಲದಿನ್ನಿ.ಡಿ, ಗೊಣ್ಣಿಗನೂರು, ಅಲಬನೂರು, ಹರಟೇನೂರು, ಬಾದರ್ಲಿ, ವಳಬಳ್ಳಾರಿ, ಗಿಣಿವಾರ, ಗೋನವಾರ, ರಾಮತ್ನಾಳ, ಕಗ್ಗಲ್.ಡಿ ಸೇರಿದಂತೆ ಇನ್ನಿತರೆ ಗ್ರಾಮಗಳ ಸೀಮೆ ವ್ಯಾಪ್ತಿಯಲ್ಲಿ ಸಾವಿರಾರು ಎಕರೆಯಲ್ಲಿ ರೈತರು ಹೈಬ್ರಿಡ್ ಜೋಳ ಬಿತ್ತನೆ ಮಾಡಿದ್ದಾರೆ. ಗೇಣು- ದೀಡು ಗೇಣು ಹಂತದಲ್ಲಿರುವ ಜೋಳದ ಹೊಲದ ತುಂಬೆಲ್ಲಾ ಮಳೆ ನೀರು ನಿಂತಿದ್ದು, ಕೊಳೆಯುವ ಹಂತ ತಲುಪಿವೆ. ಕೆಲವು ರೈತರ ಜಮೀನುಗಳಲ್ಲಿನ ಬಿತ್ತನೆ ಮಾಡಿದ ಜೋಳ ಮೊಳಕೆಯೊಡೆದಿಲ್ಲ. ಈ ಗ್ರಾಮಗಳಿಗೆ ಭೇಟಿ ನೀಡಿ ಜನರ ರೈತರ ಅಹವಾಲು ಕೇಳಬೇಕಾದ ಸಚಿವರು ಕೇವಲ 2 ಗ್ರಾಮಗಳಿಗೆ ಭೇಟಿ ನೀಡಿ ಹೋಗಿರುವುದು. ರೈತರಿಗೆ ಮಾಡಿದ ಅವಮಾನ” ಎಂದು ದೂರಿದ್ದಾರೆ.
‘ರೈತರ ಹೊಲಗಳಿಗೆ ಅಧಿಕಾರಿಗಳು ಭೇಟಿ ಕೊಟ್ಟಿಲ್ಲ’
ಅತಿವೃಷ್ಟಿಯಿಂದ ರೈತರು ಬೆಳೆ ನಷ್ಟಕ್ಕೊಳಗಾಗಿ ಆರ್ಥಿಕ ಸಂಕಷ್ಟದಲ್ಲಿದ್ದು, ಪಾರದರ್ಶಕವಾಗಿ ಬೆಳೆನಷ್ಟ ಸಮೀಕ್ಷೆ ನಡೆಸಬೇಕಾದ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ಕೊಡುತ್ತಿಲ್ಲ. ಈ ಬಗ್ಗೆ ಕೇಳಿದರೆ ನಾನಾ ಸಬೂಬು ಹೇಳಿ ನುಣುಚಿಕೊಳ್ಳುತ್ತಿದ್ದಾರೆ. ಒಂದು ಕಡೆ ಸಚಿವರು ಸರ್ಕಾರದಿಂದ ಬೆಳೆನಷ್ಟ ಪರಿಹಾರ ಕೊಡಿಸುವ ಮಾತನಾಡಿದ್ದಾರೆ. ಇನ್ನೊಂದುಕಡೆ ಸಮರ್ಪಕವಾಗಿ ಸಮೀಕ್ಷೆಯನ್ನೇ ನಡೆಸುತ್ತಿಲ್ಲ ಎಂದು ರಮೇಶ ಪಾಟೀಲ್ ಆಪಾದಿಸಿದ್ದಾರೆ.


Spread the love

Leave a Reply

Your email address will not be published. Required fields are marked *