ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 03
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಮಳೆಯಿಂದಾಗಿ ಅತಿವೃಷ್ಟಿಯುಂಟಾಗಿದ್ದು, ರೈತರ ಶೇ.80ರಷ್ಟು ಬೆಳೆ ಹಾನಿಗೀಡಾಗಿದೆೆ. ಈ ಅತಿವೃಷ್ಟಿಯನ್ನು ರಾಷ್ಟ್ರೀಯ ಅತಿವೃಷ್ಟಿ ಎಂದು ಘೋಷಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು ಮತ್ತು ರಾಷ್ಟ್ರೀಯ ವಿಪತ್ತು ನಿಧಿಯಿಂದ ರೈತರಿಗೆ ಪರಿಹಾರ ದೊರೆಯುವಂತೆ ಮಾಡಬೇಕು ಎಂದು ಕರ್ನಾಟಕ ರೈತ ಸಂಘ ಹಾಗೂ ಸಿಪಿಐ(ಎಂಎಲ್) ಮಾಸ್ ಲೈನ್ ಜಂಟಿಯಾಗಿ ಸರ್ಕಾರವನ್ನು ಆಗ್ರಹಿಸಿವೆ.
ಈ ಕುರಿತು ಶುಕ್ರವಾರ ಹೇಳಿಕೆ ನೀಡಿರುವ ಸಿಪಿಐ(ಎಂಎಲ್) ಮಾಸ್‌ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್ ಅವರು, “ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ ತೀವ್ರ ಮಳೆಯಿಂದ ಹತ್ತಿ, ತೊಗರಿ, ಸಜ್ಜೆ, ಸೂರ್ಯಕಾಂತಿ, ಹೆಸರು, ಅಲಸಂದಿ, ಜೋಳ, ಮೆಣಸಿನಕಾಯಿ ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳು ಶೇ.80ರಷ್ಟು ನಷ್ಟವಾಗಿದೆ. ಭತ್ತ, ಕಬ್ಬು ಬೆಳೆ ಕೂಡ ಬೇರು ಕೊಳೆ ರೋಗಕ್ಕೆ ತುತ್ತಾಗಿದೆ. ಕಟಾವಿಗೆ ಬಂದಿದ್ದ, ಸಜ್ಜೆ, ಸೂರ್ಯಕಾಂತಿ, ಹೆಸರು ಅಲಸಂದಿ ಬೆಳೆ ಸಂಪೂರ್ಣ ಹಾಳಾಗಿದೆ. ಕೆಲವು ರೈತರು ಮಳೆ ಬಿಡುವಿನ ಸಮಯದಲ್ಲಿ ಕಟಾವು ಮಾಡಿ ಗೂಡಾಕಿದ್ದರು. ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಕೊಳೆತು ಹೋಗಿದೆ. ಇದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಈ ಕೂಡಲೇ ಸರ್ಕಾರಗಳು ರೈತರ ನೆರವಿಗೆ ಬರಬೇಕು” ಎಂದು ಆಗ್ರಹಿಸಿದ್ದಾರೆ.
“ಉತ್ಪಾದನ ವೆಚ್ಚ, ಭೂಮಿ ಬಾಡಿಗೆ ಆಧರಿಸಿ ಪರಿಹಾರ ನಿಗದಿಗೊಳಿಸಿ”
“ಕಳೆದ 50 ವರ್ಷಗಳಲ್ಲಿ ಕಂಡರಿಯದಷ್ಟು ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಹೈ.ಕ.ಭಾಗ ಮಲೆನಾಡಿನಂತಾಗಿದೆ. ನಷ್ಟಕ್ಕೀಡಾದ ಬೆಳೆ ಮತ್ತು ಬಿದ್ದಿರುವ ಮನೆಗಳ ಸಮೀಕ್ಷೆಯನ್ನು ನಡೆಸಿ, ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಲು ಯದ್ಧೋಪಾದಿಯಲ್ಲಿ ಕಾರ್ಯಾಚರಣೆ ಇಳಿಯಬೇಕು. ಸಿಂಧನೂರು ಮತ್ತು ಮಸ್ಕಿ ತಾಲೂಕಿನ ಗುಂಡಾ,ಸAಕನಾಳ, ರತ್ನಾಪುರ, ರತ್ನಾಪುರ ಹಟ್ಟಿ, ಬೊಮ್ಮನಾಳ, ಮಾಂಪುರ, ವಿರುಪಾಪುರ, ಗಂಟೇರ ಹಟ್ಟಿ, ಮಂಗಮರ ಹಟ್ಟಿ, ಹೊಗರನಾಳ,ಗುಡಿಹಾಳ, ಹಿರೇಬೇರಗಿ, ಚಿಕ್ಕಬೇರ್ಗಿ, ಬೋಗಾಪುರ ಗ್ರಾಮಗಳ ಸೀಮಾ ವ್ಯಾಪ್ತಿಯಲ್ಲಿ ಸಾವಿರಾರು ರೈತರ ಬೆಳೆ ನಷ್ಟವಾಗಿದ್ದು, ಮಾನವ ಶ್ರಮ ಒಳಗೊಂಡ ಉತ್ಪಾದನಾ ವೆಚ್ಚ ಮತ್ತು ಭೂ ಬಾಡಿಗೆ ಆಧರಿಸಿ ಬೆಳೆ ನಷ್ಟದ ಪರಿಹಾರ ನಿಗದಿ ಮಾಡಬೇಕು, ರೈತರಿಂದ ದೊಡ್ಡ ಪ್ರಮಾಣದಲ್ಲಿ ಲಾಭ ಮಾಡಿಕೊಂಡಿರುವ ಗೊಬ್ಬರ, ಕ್ರಿಮಿನಾಶಕ, ಇತರೆ ಕೃಷಿ ಸಲಕರಣೆಗಳನ್ನು ತಯಾರಿಸುವ ಕಂಪನಿಗಳಿಂದ ದೊಡ್ಡ ಮೊತ್ತದ ದೇಣಿಗೆ ಪಡೆದು, ರೈತರಿಗೆ ತಲುಪಿಸಬೇಕು, ಸ್ಥಳೀಯ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ತಕ್ಷಣವೇ ಖರೀದಿ ಕೇಂದ್ರ ತೆರೆಯಿರಿ”
“ಮಳೆಗೆ ತೋಯ್ದ ಅಲ್ಪಸ್ವಲ್ಪ ಬೆಳೆಯನ್ನು ರೈತರು ಮಾರುಕಟ್ಟೆಗೆ ತಂದರೂ ಕೇಳುವವರೇ ಇಲ್ಲದಂತಾಗಿದೆ. ಹಾಗಾಗಿ ತಕ್ಷಣವೇ ಖರೀದಿ ಕೇಂದ್ರ ತೆರೆಯಬೇಕು. ಸಜ್ಜೆ ಬೆಂಬಲ ಬೆಲೆ ಕ್ವಿಂಟಲ್‌ಗೆ ರೂ.2,775 ಇದ್ದರೆ, ವ್ಯಾಪಾರಿಗಳು ರೂ.2000ಗೆ ಒಂದು ಕ್ವಿಂಟಲ್ ಖರೀದಿ ಮಾಡುತ್ತಿದ್ದಾರೆ, ಸೂರ್ಯಕಾಂತಿ ಬೆಂಬಲ ಬೆಲೆ ಕ್ವಿಂಟಲ್‌ಗೆ ರೂ.7721 ಇದ್ದರೆ, ಖಾಸಗಿ ವ್ಯಾಪಾರಿಗಳು ಒಂದು ಕ್ವಿಂಟಲ್‌ಗೆ ರೂ.6100 ಗೆ ಖರೀದಿಸುತ್ತಿದ್ದಾರೆ. ಹತ್ತಿ ಬೆಂಬಲ ಬೆಲೆ ರೂ.8110 ಇದ್ದರೂ ವ್ಯಾಪಾರಿಗಳು ರೂ.6000ಗೆ ಖರೀದಿಸುತ್ತಿದ್ದಾರೆ. ಇದರಿಂದ ರೈತರು ಆರ್ಥಿಕ ನಷ್ಟಕ್ಕೊಳಗಾಗುತ್ತಿದ್ದಾರೆ. ಹಾಗಾಗಿ ಸರ್ಕಾರ ಕೂಡಲೇ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಬೇಕು” ಎಂದು ಡಿ.ಎಚ್.ಪೂಜಾರ್ ಆಗ್ರಹಿಸಿದ್ದಾರೆ.
