ನಮ್ಮ ಸಿಂಧನೂರು, ಮೇ 21
ನಗರಸಭೆ 10 ದಿನಗಳಿಗೊಮ್ಮೆ ಕುಡಿವ ನೀರು ಸರಬರಾಜು ಮಾಡಲು ತೀರ್ಮಾನಿಸಿ ಪ್ರಕಟಣೆ ಹೊರಡಿಸಿದ್ದು, ಇದರಿಂದ ಬಡವರು, ಮಧ್ಯಮ ವರ್ಗದವರು ಹಾಗೂ ಕೂಲಿಕಾರರಿಗೆ ತೊಂದರೆಯಾಗಲಿದೆ. ಹಾಗಾಗಿ ನಗರದ 31 ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು (ಎಐಕೆಕೆಎಸ್) ಮಂಗಳವಾರ ನಗರಸಭೆ ಅಧಿಕಾರಿಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ರವಾನಿಸಿದರು. ನಗರದ ವಿವಿಧ ವಾರ್ಡ್ಗಳಲ್ಲಿ ಅರ್ಧದಷ್ಟು ಮಧ್ಯಮ ವರ್ಗದವರು, ಬಡವರು ಹಾಗೂ ಕೂಲಿಕಾರರ ವಾಸವಾಗಿದ್ದಾರೆ. ಈ ಜನರಿಗೆ 10 ದಿನಗಳವರೆಗೆ ನೀರು ಸಂಗ್ರಹಿಸಿಟ್ಟುಕೊಳ್ಳುವ ತೊಟ್ಟಿಗಳು, ಇತರೆ ವ್ಯವಸ್ಥೆಗಳು ಇರುವುದಿಲ್ಲ. ಹಾಗಾಗಿ ನಗರದ ಸುತ್ತಲಿನ ಪ್ರದೇಶದ ರೈತರ ಬೋರ್ವೆಲ್ ಹಾಗೂ ಖಾಸಗಿ ಕೆರೆಗಳನ್ನು ಬಾಡಿಗೆ ಪಡೆದುಕೊಂಡು ವಾರ್ಡ್ಗಳಿಗೆ ಟ್ಯಾಂಕರ್ ಮೂಲಕ ನೀರು ನೀರು ಪೂರೈಸಬೇಕು ಎಂದು ಒತ್ತಾಯಿಸಿದ್ದಾರೆ.
‘ನೀರಿನ ಅಭಾವಕ್ಕೆ ಜಿಲ್ಲಾ, ತಾಲೂಕು ಆಡಳಿತವೇ ಕಾರಣ’
ನೀರಿನ ಅಭಾವಕ್ಕೆ ಜಿಲ್ಲಾ ಹಾಗೂ ತಾಲೂಕು ಆಡಳಿತವೇ ಕಾರಣವಾಗಿದೆ. ಏಕೆಂದರೆ ನೀರು ಸಂಗ್ರಹಿಸುವ ಮೂರು ಕೆರೆಗಳು ಅವ್ಯವಸ್ಥೆಯಿಂದ ಕೂಡಿದ್ದು, ನಗರದ ದೊಡ್ಡ ಕೆರೆಯ ಗೋಡೆಯು 10 ವರ್ಷಗಳ ಹಿಂದೆಯೇ ಕುಸಿದಿದೆ. ಈ ಕಾರಣದಿಂದ ಕೆರೆಯನ್ನು ಸಂಪೂರ್ಣವಾಗಿ ತುಂಬಿಸಲು ಸಾಧ್ಯವಾಗುತ್ತಿಲ್ಲ. ಆಯಾ ಕಾಲದಲ್ಲಿ ಕೆರೆಯನ್ನು ದುರಸ್ತಿ ಮಾಡಿದ್ದರೆ ನೀರಿನ ಸಮಸ್ಯೆ ಉದ್ಭವಿಸುತ್ತಿರಲಿಲ್ಲ. ಹತ್ತಾರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ತುರ್ವಿಹಾಳ ಕೆರೆಯೂ ಕೂಡ ಅವ್ಯವಸ್ಥೆಯಿಂದ ಕೂಡಿದೆ. ಈ ಕೆರೆಯಲ್ಲಿಯೂ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸಲು ಸಾಧ್ಯವಿಲ್ಲದಂತಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗಿತ್ತು. ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ವಾರ್ಡ್ನ ಸದಸ್ಯರು ನಿರ್ಲಕ್ಷö್ಯದ ಕಾರಣ ಜನರು ನೀರಿಲ್ಲದೇ ಸಂಕಷ್ಟ ಎದುರಿಸುವಂತಾಗಿದೆ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಹಕ್ಕೊತ್ತಾಯಗಳು
ನಗರದ ಸುತ್ತಲಿನ ರೈತರ ಬೋರ್ವೆಲ್ ಹಾಗೂ ಖಾಸಗಿ ಕೆರೆಗಳನ್ನು ಬಾಡಿಗೆ ಪಡೆದುಕೊಂಡು ೩೧ ವಾರ್ಡ್ಗಳಿಗೆ ಪ್ರತಿನಿತ್ಯ ಟ್ಯಾಂಕರ್ಗಳ ಮೂಲಕ ನೀರು ಪೂರೈಸಬೇಕು, ಜಿಲ್ಲಾಡಳಿತ ಕುಡಿಯುವ ನೀರಿಗಾಗಿ ಮೀಸಲಿಟ್ಟ ಎಲ್ಲಾ ಹಣವನ್ನು ನೀರು ಪೂರೈಕೆಗಾಗಿ ಬಳಕೆ ಮಾಡಬೇಕು, ಸಿಂಧನೂರು ನಗರದಲ್ಲಿ ದುರಸ್ತಿಯಲ್ಲಿರುವ ನಗರಸಭೆಯ ಶುದ್ಧೀಕರಣ ಘಟಕಗಳನ್ನು ತಕ್ಷಣ ದುರಸ್ತಿ ಮಾಡಿಸಿ ಜನರಿಗೆ ನೀರಿನ ಅನುಕೂಲ ಕಲ್ಪಿಸಬೇಕು, ಶುದ್ದೀಕರಣ ಘಟಕಗಳ ನಿರ್ಮಾಣ ಹಾಗೂ ಯಂತ್ರಗಳ ಖರೀದಿಯಲ್ಲಿ ನಡೆದ ಅವ್ಯವಹಾರದ ಕುರಿತು ತನಿಖೆ ನಡೆಸಬೇಕು, ನೀರಿನ ಸಮಸ್ಯೆಯನ್ನು ಪರಿಹರಿಸುವ ನೆಪದಲ್ಲಿ ಮಳೆಯ ನೀರು ಮತ್ತು ಹಳ್ಳಕ್ಕೆ ಬರುವ ನೀರನ್ನು ಕಲಬೆರೆಕೆ ಮಾಡಿ ಸರಬರಾಜು ಮಾಡಲು ಸಾಧ್ಯತೆ ಇದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮ ವಹಿಸಬೇಕು, ತುರ್ವಿಹಾಳ ಮತ್ತು ನಗರದ ಕೆರೆಯ ದುರಸ್ತಿಗೆ ಕ್ರಿಯಾ ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಹಣಕಾಸಿನ ಮಂಜೂರಾತಿ ಪಡೆಯಬೇಕು ಎಂಬ ಹಕ್ಕೊತ್ತಾಯದ ಮನವಿಪತ್ರವನ್ನು ರವಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ್, ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ, ಕೆಆರ್ಎಸ್ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರಿಗಿ, ತಾಲೂಕು ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳಕ್ಯಾಂಪ್ ಹಾಗೂ ಮಹ್ಮದ್ ಅಸೀಫ್, ಬಸವರಾಜ ಕೋಟೆ, ಮಹ್ಮದ್ ಯಾಸೀನ್, ಮಹ್ಮದ್ ಆಸೀಫ್ ಖಾನ್, ಮೇಘರಾಜ್ ನಾಯಕ, ಬಾನುಬೇಗಂ, ಪಾಮಯ್ಯ ನಾಯಕ, ಬಸವರಾಜ ನಾಯಕ, ಯಂಕಪ್ಪ ಸೇರಿದಂತೆ ಇನ್ನಿತರರಿದ್ದರು.