ಸಿಂಧನೂರು: ಶಾಸಕ ಮುನಿರತ್ನ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಕೆಆರ್‌ಎಸ್ ಆಗ್ರಹ

Spread the love

ನಮ್ಮ ಸಿಂಧನೂರು, ಸೆಪ್ಟೆಂಬರ್ 16
ದಲಿತ ಸಮುದಾಯದವರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿ, ಅಸ್ಪೃಶ್ಯತೆ ಆಚರಣೆ ಕುಮ್ಮಕ್ಕು ನೀಡಿರುವ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಹಾಗೂ ಅವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರೈತ ಸಂಘದ ತಾಲೂಕು ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳಕ್ಯಾಂಪ್ ಹಾಗೂ ಟಿಯುಸಿಐ ಜಿಲ್ಲಾಧ್ಯಕ್ಷ ಬಿ.ಎನ್.ಯರದಿಹಾಳ ಅವರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ತಾನೊಬ್ಬ ಶಾಸಕ ಅನ್ನುವುದನ್ನು ಮರೆತು ದಲಿತ ಸಮುದಾಯದವರನ್ನು ಅತ್ಯಂತ ಕೀಳಾಗಿ ಅವಹೇಳನ ಮಾಡಿದ್ದಲ್ಲದೇ ಹೀನಾಯಮಾನವಾಗಿ ಬೈಯ್ಯುವ ಮೂಲಕ ಮುನಿರತ್ನ ನಾಯ್ಡು ಗೂಂಡಾವರ್ತನೆ ಪ್ರದರ್ಶಿಸಿದ್ದಾನೆ. ದಲಿತ ಸಮುದಾಯದ ಗುತ್ತಿಗೆದಾರ ಚೆಲುವರಾಜು ಅವರಿಗೆ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೇ, ಆತನಿಗೆ ಜೀವ ಬೆದರಿಕೆ ಹಾಕಿ, ಅವರ ಮನೆಯ ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿರುವ ಬಿಜೆಪಿ ಶಾಸಕನನ್ನು ವಿಧಾನಸಭೆಯ ಸ್ಪೀಕರ್ ಅವರು ಅನರ್ಹಗೊಳಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ. ಸಂವಿಧಾನದ ಕಲಂ 15 “ಧರ್ಮ, ಮೂಲವಂಶ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯದ ನಿಷೇಧಿಸಿದೆ.” ಆದರೆ, ಜನರಿಂದ ಆಯ್ಕೆಯಾದ ಜನಪ್ರತಿನಿಧಿಯೇ ಬಹಿರಂಗವಾಗಿ ಅಸ್ಪೃಶ್ಯತೆ ಆಚರಣೆಗೆ ಕುಮ್ಮಕ್ಕು ನೀಡಿರುವುದು ಸಂವಿಧಾನಬಾಹಿರವಾಗಿದೆ. ಮುನಿರತ್ನ ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯವಹಿಸಿದರೆ, ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಬಿ.ಎನ್.ಯರದಿಹಾಳ ಎಚ್ಚರಿಸಿದ್ದಾರೆ.


Spread the love

Leave a Reply

Your email address will not be published. Required fields are marked *