ಸಿಂಧನೂರು: ಜೋಳ ಖರೀದಿ ಪ್ರಕ್ರಿಯೆ ವಿಳಂಬ, ರೈತ ಸಂಘಟನೆಗಳ ಒಕ್ಕೂಟದಿಂದ ಹೋರಾಟಕ್ಕೆ ಸಿದ್ಧತೆ !?

Spread the love

ವಿಶೇಷ ವರದಿ: ಬಸವರಾಜ ಹಸಮಕಲ್‌
ನಮ್ಮ ಸಿಂಧನೂರು, ಮಾರ್ಚ್ 16

ಬೆಂಬಲ ಬೆಲೆ ಯೋಜನೆಯಡಿ ಹೈಬ್ರಿಡ್ ಜೋಳ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ, ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಜೋಳ ಬೆಳೆಗಾರು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಹೋರಾಟಕ್ಕೆ ನಿರ್ಧರಿಸಲಾಗಿದೆ ಎಂದು ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
2025-26ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ಬಿಳಿಜೋಳವನ್ನು ಖರೀದಿಸುವ ಪ್ರಕ್ರಿಯೆ ಹಿನ್ನೆಲೆಯಲ್ಲಿ ನೋಂದಣಿ ಕಾರ್ಯ ಪೂರ್ಣಗೊಂಡಿದೆ. ಆದರೆ ಖರೀದಿ ಪ್ರಕ್ರಿಯೆ ಮಾತ್ರ ದಿನದಿಂದ ದಿನಕ್ಕೆ ವಿಳಂಬವಾಗುತ್ತಿದೆ. ಖರೀದಿ ಪ್ರಕ್ರಿಯೆ ವಿಳಂಬವಾದಂತೆ ರೈತರು ಜೋಳ ಸಂಗ್ರಹಣೆ ಮಾಡಿಟ್ಟುಕೊಳ್ಳಲು ಸಮಸ್ಯೆಯಾಗುತ್ತಿದೆ. ಹುಳು, ಕೀಟ ಸೇರಿ ನುಸಿಭಾದೆಯಿಂದ ಜೋಳ ಹಾಳಾಗುವ ಸಾಧ್ಯತೆ ಇದ್ದು, ವಿಳಂಬ ಮಾಡದೇ ಖರೀದಿ ಪ್ರಕ್ರಿಯೆ ಆರಂಭಿಸಬೇಕೆನ್ನುವ ಎಂಬ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಹಕ್ಕೊತ್ತಾಯಿಸಲಾಗುತ್ತದೆ ಎಂದು ತಿಳಿದುಬಂದಿದೆ.
‘ಜೋಳ ಪಾರದರ್ಶಕ ಖರೀದಿಗೆ ಆದ್ಯತೆ ನೀಡಿ’
ಸಣ್ಣ, ಅತಿಸಣ್ಣ ರೈತರು ಹಾಗೂ ಸರ್ಕಾರದ ಮಾನದಂಡಗಳ ಪಾರದರ್ಶಕ ನಿಯಮಗಳ ಅನ್ವಯ ಯಾವೊಬ್ಬ ರೈತರಿಗೂ ಅನ್ಯಾಯವಾಗದಂತೆ ಖರೀದಿ ಪ್ರಕ್ರಿಯೆ ನಡೆಸಬೇಕು. ಎಂಎಸ್‌ಪಿ ಲಾಭ ಪಡೆಯಲು ಗದ್ದೆಗಳ ಪಹಣಿಯನ್ನು ನೀಡಲಾಗಿದೆ, ಕೆಲವರು ಗದ್ದೆಗಳ ಪಹಣಿಗಳನ್ನು ಹೊಂದಿಸಿಕೊಂಡು ರೈತರಿಂದ ಬಹಳಷ್ಟು ಪ್ರಮಾಣದ ಜೋಳ ಖರೀದಿಸಿಟ್ಟುಕೊಂಡಿದ್ದಾರೆ, ಮಾನ್ವಿ, ದೇವದುರ್ಗ ತಾಲೂಕಿನ ಕೆಲವರೂ ಸಹ ಸಿಂಧನೂರು ತಾಲೂಕಿನ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿದ್ದಾರೆ ಹೀಗೆ ಹಲವು ವಿಷಯಗಳು ರೈತ ಸಮೂಹದಲ್ಲಿ ಚರ್ಚಿತವಾಗುತ್ತಿದ್ದು, ಈಗಾಗಲೇ ಸಂಬಂಧಿಸಿದ ಇಲಾಖೆಯವರು ತನಿಖೆ ಮುಂದಾಗಿದ್ದಾರೆ. ಈ ಕುರಿತು ಇಲಾಖೆಯವರು ಹಾಗೂ ಸರ್ಕಾರ ಸ್ಪಷ್ಟ ತೀರ್ಮಾನಕ್ಕೆ ಬಂದು ರೈತರ ಹಿತ ಕಾಯಬೇಕು. ನಾನಾ ಕಾರಣಗಳ ನೆಪವೊಡ್ಡಿ ಅರ್ಹ ಫಲಾನುಭವಿಗಳಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮೊದಲ ಹಂತದಲ್ಲಿ ಮನವಿ ಸಲ್ಲಿಕೆ
ಮಾರ್ಚ್ 20, 2026ರಂದು ಮೊದಲ ಹಂತದ ಭಾಗವಾಗಿ, ಜೋಳ ಖರೀದಿ ಪ್ರಕ್ರಿಯೆ ಕುರಿತಂತೆ ರೈತರ ವಿವಿಧ ಹಕ್ಕೊತ್ತಾಯವುಳ್ಳ ಮನವಿಪತ್ರವನ್ನು ತಹಸೀಲ್ದಾರ್ ಇವರ ಮುಖಾಂತರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು. ಸರ್ಕಾರದ ಸ್ಪಂದನೆಯನ್ನು ಗಮನಿಸಿ ಮುಂದಿನ ಹೋರಾಟಕ್ಕೆ ನಿರ್ಧರಿಸಲಾಗುವುದು ಎಂಬ ಮಾಹಿತಿ ಗೊತ್ತಾಗಿದೆ.


Spread the love

Leave a Reply

Your email address will not be published. Required fields are marked *