ಸಿಂಧನೂರು ಜಿಲ್ಲಾ ಕೇಂದ್ರವಾಗಲು ಸೂಕ್ತ; ಸಿಎಂ ಅವರ ಮುಂದೆ ಒಕ್ಕೊರಲಿನ ಪ್ರಸ್ತಾಪವಾಗಲಿ : ಹನುಮನಗೌಡ ಬೆಳಗುರ್ಕಿ ಅಭಿಮತ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜನವರಿ 18

ಸಿಂಧನೂರು ಜಿಲ್ಲಾ ಕೇಂದ್ರವಾಗಲು ಆಡಳಿತಾತ್ಮಕ ದೃಷ್ಟಿಯಿಂದ ಸೂಕ್ತ ಮತ್ತು ಯೋಗ್ಯವಾಗಿದೆ. ಈ ನಿಟ್ಟಿನಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಮಾಜಿ ಸಚಿವರು, ಸಂಸದರು ಪಕ್ಷಾತೀತವಾಗಿ ಎಲ್ಲರೂ ಒಕ್ಕೊರಲಿನಿಂದ ಸಿಎಂ ಅವರ ಮುಂದೆ ಪ್ರಸ್ತಾಪಿಸಿ ಗಮನ ಸೆಳೆಯಬೇಕು ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಹನುಮನಗೌಡ ಬೆಳಗುರ್ಕಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಟೌನ್‌ಹಾಲ್‌ನಲ್ಲಿ ಭಾನುವಾರ ‘ಸಿಂಧನೂರು ಜಿಲ್ಲಾ ಹೋರಾಟ ಸಮಿತಿ’ ಸಾರ್ವಜನಿಕರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. “2018-19ರಿಂದ ಸಿಂಧನೂರು ಜಿಲ್ಲೆ ರಚನೆಗೆ ಕುರಿತಂತೆ ವಿಷಯ ಮುನ್ನೆಲೆಗೆ ಬಂದಿದೆ. ಅಂದಿನಿಂದ ನಿರಂತರ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಸಿಂಧನೂರು ಜಿಲ್ಲೆ ರಚನೆ ಕುರಿತ ವಿಷಯ ಸಾರ್ವತ್ರೀಕರಣಗೊಳ್ಳಬೇಕು. ಹಳೆಬೇರು-ಹೊಸ ಚಿಗುರು ಸೇರಿದರೆ ಮರಸೊಬಗು ಎನ್ನುವಂತೆ ಎಲ್ಲರೂ ಕೂಡಿಕೊಂಡು ಒಮ್ಮತಾಭಿಪ್ರಾಯದೊಂದಿಗೆ ಮುನ್ನಡೆಯಬೇಕಿದೆ. ಶಿಕ್ಷಣ, ಆರೋಗ್ಯ, ಪರಿಸರ, ಕೃಷಿ ಹಾಗೂ ಆಡಳಿತ ಒಗ್ಗೂಡಿ ಕೆಲಸ ಮಾಡಬೇಕು. ಅಭಿವೃದ್ಧಿ ಸಾಧಿಸಬೇಕಾದರೆ, ಆಡಳಿತ ಹತ್ತಿರವಿರಬೇಕು. ಇಲ್ಲದಿದ್ದರೆ ನಾನಾ ತೊಡಕುಗಳು” ಎದುರಾಗುತ್ತವೆ ಎಂದರು.

Namma Sindhanuru Click For Breaking & Local News

‘ಸಿಂಧನೂರು ಜಿಲ್ಲೆಯಾದರೆ ಆಡಳಿತಕ್ಕೆ ಅನುಕೂಲ’
ದಕ್ಷಿಣ ಕರ್ನಾಟಕದ ಭಾಗಗಳಲ್ಲಿ ಪ್ರತಿ 50 ಕಿ.ಮೀ ಅಂತರದೊಳಗೆ ಹಲವು ಜಿಲ್ಲೆಗಳನ್ನು ಸಂಪರ್ಕಿಸಬಹುದು. ಉದಾಹರಣೆ ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳನ್ನು ಗಮನಿಸಬಹುದಾಗಿದೆ. ಆದರೆ ಈ ಭಾಗದಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳು 150ರಿಂದ 200 ಕಿ.ಮೀ ಅಂತರದಲ್ಲಿವೆ. 1996ರಲ್ಲಿ ರಚನೆಯಾದ ಗದ್ದಿಗೌಡರ್ ಸಮಿತಿಯಲ್ಲಿ ಜಿಲ್ಲಾ ಕೇಂದ್ರವಾಗಲು ಇರಬೇಕಾದ ಅರ್ಹತೆಗಳು, ಜಿಲ್ಲಾಧಿಕಾರಿಗಳ ಕಾರ್ಯನಿರ್ವಹಣೆಯ ಮಾನದಂಡ ಹಾಗೂ ಕ್ಷೇತ್ರದ ಕೊನೆಯ ಹಳ್ಳಿಗಳಿಗೆ ಪ್ರಯಾಣದ ಮೂಲಕ ತಲುಪುವ ಅಂತರ ಹೀಗೆ ಹಲವು ವಿಶೇಷ ಅಂಶಗಳನ್ನು ಪರಿಗಣಿಸಲಾಗಿದೆ. ರಾಯಚೂರಿನಿಂದ ಜಿಲ್ಲಾಧಿಕಾರಿಗಳು ಮುಕ್ಕುಂದಾಕ್ಕೆ ತಲುಪಬೇಕೆಂದರೆ 140 ಕಿ.ಮೀ ಕ್ರಮಿಸಬೇಕಾಗುತ್ತದೆ. ಅಷ್ಟೇ ಅಲ್ಲದೇ ಮಸ್ಕಿ ಪಟ್ಟಣವೂ 140 ಕಿ.ಮೀ ಅಂತರದಲ್ಲಿದೆ. ಇದರಿಂದ ಜಿಲ್ಲಾಧಿಕಾರಿಗಳು 100 ತಾಸಿನ ಕಾರ್ಯನಿರ್ವಹಣೆಯ ಅವಧಿಯಲ್ಲಿ ಶೇ.50ರಷ್ಟು ಪ್ರಯಾಣಕ್ಕೆ ಬಳಕೆಯಾದರೆ ಅಭಿವೃದ್ಧಿ ಹೇಗೆ ಸಾಧ್ಯ ? ಹಾಗಾಗಿ ಸಿಂಧನೂರು ಜಿಲ್ಲೆಯಾಗಲು ಅರ್ಹತೆಯನ್ನು ಹೊಂದಿದ್ದು, ಆಡಳಿತ ದೃಷ್ಟಿಯಿಂದಲೂ ಅತ್ಯಂತ ಸೂಕ್ತವಾಗಿದೆ” ಎಂದು ಬೆಳಗುರ್ಕಿ ವಿವರಿಸಿದರು.

Namma Sindhanuru Click For Breaking & Local News

‘ಪಕ್ಷಾತೀತ ಹೋರಾಟ ನಡೆಯಲಿ’
“ಸಿಂಧನೂರು ಜಿಲ್ಲಾ ರಚನೆ ಕುರಿತಂತೆ ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತ ಹಾಗೂ ಲಿಂಗಾತೀತ ಹೋರಾಟ ನಡೆಯಬೇಕಿದೆ. ಈ ನಿಟ್ಟಿನಲ್ಲಿ ರಾಜಕೀಯ ಇಚ್ಛಾಸಕ್ತಿ ಅತ್ಯಂತ ಪ್ರಮುಖವಾಗಿದ್ದು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಸಂಸದರು ಹಾಗೂ ಸಂಘ-ಸಂಸ್ಥೆಗಳವರು, ಸಾರ್ವಜನಿಕರು ಸೇರಿದಂತೆ ಎಲ್ಲರೂ ಒಗ್ಗೂಡಿ ಸಿಂಧನೂರು ಜಿಲ್ಲಾ ರಚನೆಗೆ ಒಕ್ಕೊರಲಿನಿಂದ ಸರ್ಕಾರದ ಗಮನ ಸೆಳೆದು ಒತ್ತಡ ಹೇರಬೇಕಿದೆ” ಎಂದು ಹನುಮನಗೌಡ ಬೆಳಗುರ್ಕಿ ಹೇಳಿದರು.

Namma Sindhanuru Click For Breaking & Local News

ಸಿಂಧನೂರು ಜಿಲ್ಲೆ ರಚನೆಗೆ ಸಿಎಂ, ಡಿಸಿಎಂ ಅವರ ಗಮನ ಸೆಳೆಯುವೆ: ಬಸನಗೌಡ ಬಾದರ್ಲಿ
“ಈಗಾಗಲೇ ತಾವು ಅಧಿವೇಶನದಲ್ಲಿ ಸಿಂಧನೂರು ಜಿಲ್ಲೆ ರಚನೆ ಕುರಿತಂತೆ ಸರ್ಕಾರದ ಗಮನ ಸೆಳೆದಿರುವೆ. ಇದಕ್ಕೆ ಸಿಎಂ, ಡಿಸಿಎಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಂದಾಯ ಸಚಿವರು ಅಧಿವೇಶನದಲ್ಲಿ ಪ್ರಾದೇಶಿಕ ಆಯುಕ್ತರಿಂದ ವರದಿ ಕೇಳಿರುವುದಾಗಿ ತಿಳಿಸಿದ್ದರು. ಈಗ ಪ್ರಾದೇಶಿಕ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ವರದಿ ಕೇಳಿದ್ದಾರೆ. ಜ.3ರಂದು ಅಂಬಾಮಠದ ಅಂಬಾದೇವಿ ಜಾತ್ರಾ ಮಹೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿದ ಸಂದರ್ಭದಲ್ಲಿ ಸಿಂಧನೂರು ಜಿಲ್ಲೆ ರಚನೆಗೆ ಕುರಿತಂತೆ ಪ್ರಸ್ತಾಪಿಸಿದ್ದೇನೆ. ಬರುವ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯರವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ ಅವರನ್ನು ಗಮನ ಸೆಳೆಯುವೆ. ಪೂರ್ವಭಾವಿ ಸಭೆಯಲ್ಲಿ ಹರ-ಗುರು-ಚರಮೂರ್ತಿಗಳು, ಸಾರ್ವಜನಿಕರು, ಗಣ್ಯರು, ವಿವಿಧ ಸಂಘ-ಸಂಸ್ಥೆಗಳವರು, ಪ್ರಮುಖರು ಭಾಗವಹಿಸಿರುವುದು ಖುಷಿ ತಂದಿದೆ. ಜಿಲ್ಲಾ ರಚನೆ ಕುರಿತಂತೆ ತಮ್ಮೊಂದಿಗೆ ತಾವು ತನು-ಮನ-ಧನದೊಂದಿಗೆ ಸದಾ ನಿಲ್ಲುವುದಾಗಿ” ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಹೇಳಿದರು.
‘ಅಧಿಕಾರ ಶಾಶ್ವತವಲ್ಲ, ಕೆಲಸ ಶಾಶ್ವತ’
“ಅಧಿಕಾರ ಬರುತ್ತದೆ ಹೋಗುತ್ತದೆ. ಆದರೆ ಮಾಡಿದ ಕೆಲಸ ಮಾತ್ರ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಈ ನಿಟ್ಟಿನಲ್ಲಿ ತಾಲೂಕಿನ ಅಭಿವೃದ್ಧಿಗೆ ಹಲವು ಕೆಲಸ ಕಾರ್ಯಗಳಿಗೆ ನಿರಂತರ ಶ್ರಮಿಸುತ್ತಿದ್ದೇನೆ. ಸಿಂಧನೂರು ಭಾಗದಲ್ಲಿ ಅಪಘಾತಗಳು ಹೆಚ್ಚುತ್ತಿರುವ ದೃಷ್ಟಿಯಿಂದ ಅತ್ಯಂತ ಅವಶ್ಯವಾದ ಟ್ರಾಮಾಕೇರ್ ಸೆಂಟರ್ ನಿರ್ಮಾಣಕ್ಕೆ ನನ್ನ ಅನುದಾನದಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ 3 ಕೋಟಿ ರೂಪಾಯಿಯನ್ನು ನೀಡಿರುವೆ. ಕೋವಿಡ್ ಸಂದರ್ಭದಲ್ಲಿ ತಾವು ಕೈಗೊಂಡ ಸೇವಾ ಕಾರ್ಯದ ಬಗ್ಗೆ ಇಂದಿಗೂ ಜನ ಸ್ಮರಿಸುತ್ತಾರೆ. ನಾನು ಅಭಿವೃದ್ಧಿ ದೃಷ್ಟಿಯಿಂದ ಮನೆಯ ಮಗನಾಗಿ ಕೆಲಸ ಮಾಡುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ರಾಜಕೀಯ ಇಚ್ಛಾಸಕ್ತಿ ಮತ್ತು ಜನರ ಬಗೆಗಿನ ಕಾಳಜಿ ಮುಖ್ಯ” ಎಂದು ಅವರು ಹೇಳಿದರು.

Namma Sindhanuru Click For Breaking & Local News

‘ಹಲವು ಕಾಲೇಜುಗಳ ಅವಶ್ಯಕತೆ ಇದೆ’
“ಅಭಿವೃದ್ಧಿ ದೃಷ್ಟಿಯಿಂದ ತಾಲೂಕಿನಲ್ಲಿ ಮೆಡಿಕಲ್, ಇಂಜಿನಿಯರಿಂಗ್, ಪ್ಯಾರಾಮೆಡಿಕಲ್, ಡಿಪ್ಲೊಮಾ, ಕಾನೂನು ಕಾಲೇಜುಗಳ ಅವಶ್ಯಕತೆ ಇದೆ. ಅಷ್ಟೇ ಅಲ್ಲದೇ ಇನ್ನೂ ವಿನೂತನ ಕೋರ್ಸ್‌ಗಳನ್ನು ತರುವ ಮೂಲಕ ಈ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲದೇ ನಿರುದ್ಯೋಗ ಸಮಸ್ಯೆಯಿಂದ ಈ ಭಾಗದ ಯುವಕರು ಉದ್ಯೋಗ ಅರಸಿಕೊಂಡು ಬೆಂಗಳೂರು, ಹೈದ್ರಾಬಾದ್‌ಗೆ ಹೋಗುವಂತಾಗಿದೆ. ಈ ಭಾಗದಲ್ಲೇ ಯುವಕರಿಗೆ ಕೆಲಸ ದೊರಕಿಸಿಕೊಡುವ ಉದ್ದೇಶದಿಂದ ಸರ್ಕಾರದ ಗಮನ ಸೆಳೆದು ಔದ್ಯಮಿಕ ದೃಷ್ಟಿಯಿಂದ ಈ ಭಾಗದ ಪ್ರಗತಿಗೆ ಶ್ರಮಿಸುವುದಾಗಿ ಬಸನಗೌಡ ಬಾದರ್ಲಿ ಭರವಸೆ ನೀಡಿದರು.
‘ಸಿಎಸ್‌ಎಫ್‌ನಲ್ಲಿ 500 ಎಕರೆಯಲ್ಲಿ ಕೆರೆ ನಿರ್ಮಾಣ’
“ಜವಳಗೇರಾ ಬಳಿ ಇರುವ ಸಿಎಸ್‌ಎಫ್‌ನಲ್ಲಿ ಸಾರ್ವಜನಿಕ ಉದ್ದೇಶಕ್ಕೆ 500 ಎಕರೆಯಲ್ಲಿ ಕೆರೆ ನಿರ್ಮಾಣಕ್ಕೆ ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ ಅವರ ಗಮನ ಸೆಳೆಯಲಾಗಿದ್ದು, 491 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದೆ” ಎಂದು ಬಸನಗೌಡ ಬಾದರ್ಲಿ ತಿಳಿಸಿದರು.

Namma Sindhanuru Click For Breaking & Local News

ಜಿಲ್ಲೆ ರಚನೆಗೆ ಕುರಿತು ಪ್ರಮುಖರ ಅನಿಸಿಕೆ
ಪ್ರಮುಖರಾದ ಡಾ.ಶಿವರಾಜ ಪಾಟೀಲ್, ಭೀಮಣ್ಣ ವಕೀಲ, ಬಸವರಾಜ ನಾಡಗೌಡ, ಬಿ.ಹರ್ಷ, ರಾಜಶೇಖರ ಪಾಟೀಲ್, ಎಚ್.ಎನ್.ಬಡಿಗೇರ್, ಎಂ.ದೊಡ್ಡಬಸವರಾಜ, ನಿರುಪಾದೆಪ್ಪ ವಕೀಲ, ಶರಣೇಗೌಡ, ವೆಂಕಟೇಶ್ ರಾಗಲಪರ್ವಿ, ಸತ್ಯನಾರಾಯಣ, ವೆಂಕಣ್ಣ ಜೋಶಿ ದೋಟಿಹಾಳ ಇನ್ನಿತರರು ಜಿಲ್ಲೆ ರಚನೆ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ವಿವಿಧ ಮಠಗಳ ಮಠಾಧೀಶರು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯ ಪರಿಕಲ್ಪನೆಗಳು
ಸಿಂಧನೂರು, ಮಸ್ಕಿ, ತುರವಿಹಾಳ, ಕಾರಟಗಿ, ಸಿರುಗುಪ್ಪಗಳನ್ನು ಒಳಗೊಂಡು ಸಿಂಧನೂರು ಜಿಲ್ಲೆ ರಚನೆ ಹಾಗೂ ಸಿಂಧನೂರು, ಮಸ್ಕಿ, ಲಿಂಗಸುಗೂರು, ಸಿರವಾರ ಒಳಗೊಂಡು ಸಿಂಧನೂರು ಜಿಲ್ಲೆ ರಚನೆ ಹೀಗೆ ಎರಡು ರೀತಿಯ ಪರಿಕಲ್ಪನೆಗಳನ್ನಿಟ್ಟುಕೊಂಡು ಪೂರ್ವಭಾವಿ ಸಭೆಯಲ್ಲಿ ಚರ್ಚಿಸಲಾಯಿತು.

Namma Sindhanuru Click For Breaking & Local News

ಸಭೆಯಲ್ಲಿ ಚರ್ಚೆಗೊಂಡ ವಿಷಯಗಳು
ಜಿಲ್ಲಾ ಹೋರಾಟ ಸಮಿತಿ ರಚಿಸುವ ಬಗ್ಗೆ, ಜಿಲ್ಲಾ ಹೋರಾಟದ ರೂಪುರೇಷೆಗಳು, ಸಿಂಧನೂರು ಜಿಲ್ಲೆ ರಚನೆಗೆ ಯಾವ್ಯಾವ ತಾಲೂಕುಗಳನ್ನು ಆಯ್ಕೆಮಾಡಿಕೊಂಡರೆ ಸೂಕ್ತ ಹಾಗೂ ಇನ್ನಿತರೆ ವಿಷಯಗಳ ಕುರಿತು ಪೂರ್ವಭಾವಿ ಸಭೆಯಲ್ಲಿದ್ದ ಹಲವು ಗಣ್ಯರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದರು.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *