ನಮ್ಮ ಸಿಂಧನೂರು, ಜೂನ್ 8
ತುಂಗಭದ್ರಾ ಜಲಾಶಯಕ್ಕೆ ದಿನಾಂಕ: 8-06-2024ರಂದು 1490 ಕ್ಯೂಸೆಕ್ ನೀರು ಹರಿದು ಬಂದಿದೆ. ಹಾಗೆ ನೋಡಿದರೆ ದಿನಾಂಕ: 7-06-2024ರಂದು 2,190 ಕ್ಯೂಸೆಕ್ ಇದ್ದ ಒಳಹರಿವು, ಏಕಾಏಕಿ ಕಡಿಮೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಗಾಜನೂರು ಡ್ಯಾಂ ತುಂಬಲು ಇನ್ನೂ 4 ಅಡಿ ನೀರು ಬಾಕಿ ಇದೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಈ ಡ್ಯಾಂ ತುಂಬಿದರೆ ಹೆಚ್ಚುವರಿ ನೀರು ಹೊರ ಹರಿದು ನದಿಯ ಮೂಲಕ ಒಳ ಹರಿವು ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕಳೆದ ಎರಡ್ಮೂರು ದಿನಗಳಿಂದ ತುಂಗಾ ಮತ್ತು ಭದ್ರಾ ನದಿ ವ್ಯಾಪ್ತಿಯಲ್ಲಿ ಆಗಾಗ ಮಳೆಯಾಗುತ್ತಿರುವ ಬಗ್ಗೆ ವರದಿಗಳಿದ್ದು, ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿಯೂ ಉತ್ತಮ ಮಳೆಯಾದರೆ ಒಳಹರಿವಿನ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.
ಕಳೆದ ವರ್ಷ ಇದೇ ಸಮಯದಲ್ಲಿ ಜಲಾಶಯದಲ್ಲಿ 5.03 ಟಿಎಂಸಿ ನೀರು ಸಂಗ್ರಹವಿದ್ದರೆ, 468 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಈ ಬಾರಿ ಮುಂಗಾರು ಬೇಗನೇ ಆರಂಭವಾಗಿದ್ದರೂ, ದೊಡ್ಡ ಮಳೆಯಾಗುತ್ತಿಲ್ಲ ಎಂಬ ಬಗ್ಗೆ ರೈತರಲ್ಲಿ ಬೇಸರವಿದೆ. ಬರಗಾಲದಿಂದಾಗಿ ರಾಯಚೂರು, ಕೊಪ್ಪಳ, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ನೀರಿನ ಅಭಾವ ಹೆಚ್ಚಿದ್ದು, ದಿನದಿಂದ ದಿನಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ವರದಿಗಳಿವೆ. ಅವಧಿಗೂ ಮುನ್ನ ಡ್ಯಾಂ ತುಂಬಿ ಕುಡಿಯುವ ನೀರಿನ ಉದ್ದೇಶಕ್ಕಾದರೂ ನಾಲೆಗಳಿಗೆ ನೀರು ಹರಿಯಲಿ ಎಂಬುದು ಜನರ ಒತ್ತಾಸೆಯಾಗಿದೆ.