ಸಿಂಧನೂರು: ಹೆಚ್ಚುತ್ತಿರುವ ಸೈಕಲ್ ಮೋಟರ್ ಕಳ್ಳತನ, ಕಳ್ಳರ ಕೈಚಳಕದಿಂದ ಕ್ಷಣಾರ್ಧದಲ್ಲೇ ಗಾಡಿ ಮಾಯ !

Spread the love

(ಲೋಕಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಆಗಸ್ಟ್ 29

ನಗರದಲ್ಲಿ ಕಳೆದ ಹಲವು ದಿನಗಳಿಂದ ಸೈಕಲ್ ಮೋಟರ್ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ರಸ್ತೆ ಬದಿ, ಸಾರ್ವಜನಿಕ ಪ್ರದೇಶ ಹಾಗೂ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಮೋಟರ್ ಸೈಕಲ್‌ಗಳನ್ನು, ಕಳ್ಳರು ಚಾಲಾಕಿತನದಿಂದ ಕ್ಷಣಾರ್ಧದಲ್ಲೇ ಮಂಗಮಾಯಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಕಳವಳ ವ್ಯಕ್ತಪಡಿಸಿದ್ದಾರೆ.
ವಾರದ ಹಿಂದೆ ಬಸ್‌ನಿಲ್ದಾಣದ ಬಳಿಯಿರುವ ಅಂಬಾದೇವಿ ದೇವಸ್ಥಾನದ ಪಕ್ಕದಲ್ಲಿ ಸೈಕಲ್ ಮೋಟರ್ ನಿಲ್ಲಿಸಿ ಟೀ ಕುಡಿಯಲು ಹೋಗಿದ್ದ ಉಪನ್ಯಾಸಕರೊಬ್ಬರು ಹತ್ತದಿನೈದು ನಿಮಿಷದಲ್ಲಿ ವಾಪಸ್ ಬರುವಷ್ಟರಲ್ಲಿ ಯಾರೋ ಅಪರಿಚತರು ಗಾಡಿಯನ್ನು ಎತ್ತಿದ್ದಾರೆ. ಅಮರದೀಪ್ ಬಟ್ಟೆ ಅಂಗಡಿ ಪಕ್ಕದಲ್ಲಿರುವ ಇಂಡಿಯನ್ ಓವರ್‌ಸಿಸ್ ಬ್ಯಾಂಕ್‌ನ ಗೇಟಿನ ಬಳಿ ಗ್ರಾಹಕರೊಬ್ಬರು ನಿಲ್ಲಿಸಿದ್ದ ಸೈಕಲ್ ಮೋಟರ್ ಕಳ್ಳತನವಾಗಿದೆ. ಲಾಕ್ ಮಾಡಿದ್ದರೂ ಯಾರೋ ಅಪರಿಚಿತರು ಉಪಾಯದಿಂದ ಗಾಡಿ ಕಳ್ಳತನ ಮಾಡಿದ್ದಾರೆ.ಆದರ್ಶ ಕಾಲೋನಿಯಲ್ಲಿ ಟ್ಯೂಶನ್ ಕ್ಲಾಸಿಗೆ ತೆರಳಿದ್ದ ವಿದ್ಯಾರ್ಥಿನಿಯೊಬ್ಬರ ಸೈಕಲ್‌ವೊಂದು ಯಾರೋ ಅಪರಿಚಿತರು ಕದ್ದಿದ್ದಾರೆ. ಹೀಗೆ ಸೈಕಲ್ ಮೋಟರ್ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಸವಾರರು ಆತಂಕಿತರಾಗಿದ್ದಾರೆ.

Namma Sindhanuru Click For Breaking & Local News
ಸಿಂಧನೂರು ನಗರದ ಬ್ಯಾಂಕ್‌ ಬಳಿ ಇತ್ತೀಚೆಗೆ ಕಳ್ಳತನವಾದ ಬೈಕ್‌ವೊಂದರ ಚಿತ್ರ

ಲಾಕ್ ಮಾಡಿದರೂ ಗಾಡಿ ಮಾಯ !:
ಸೈಕಲ್ ಮೋಟರ್ ಲಾಕ್ ಮಾಡಿದರೂ ಗಾಡಿ ಕಳ್ಳತನವಾಗಿರುವ ಬಗ್ಗೆ ಸವಾರರೊಬ್ಬರು ಅಳಲು ತೋಡಿಕೊಂಡಿದ್ದಾರೆ. ನಗರದ ರಾಯಚೂರು, ಗಂಗಾವತಿ, ಕುಷ್ಟಗಿ ಮಾರ್ಗದ ರಸ್ತೆ ಬದಿ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಹಾಗೂ ಅಂಗಡಿಗಳ ಮುಂದೆ ಸಾವಿರಾರು ಮೋಟರ್ ಸೈಕಲ್‌ಗಳನ್ನು ಸಾರ್ವಜನಿಕರು ನಿಲ್ಲಿಸುವುದು ವಾಡಿಕೆಯಾಗಿದೆ. ಗ್ರಾಹಕರ ಸೋಗಿನಲ್ಲಿ ಬರುವ ಕಳ್ಳರು ಹಾಗೂ ಅಪರಿಚಿತ ವ್ಯಕ್ತಿಗಳು ಇದನ್ನು ಸೂಕ್ಷ್ಮವಾಗಿ ಗಮನಿಸಿ ದ್ವಿಚಕ್ರ ವಾಹನಗಳನ್ನು ಚಾಲಾಕಿತನದಿಂದ ಕಳ್ಳತನ ಮಾಡುತ್ತಿರುವುದು ಜನಸಾಮಾನ್ಯರ ಆತಂಕಕ್ಕೆ ಕಾರಣವಾಗಿದೆ. ಗಾಡಿ ಲಾಕ್ ಆದರೂ ಸೈಕಲ್ ಮೋಟರ್ ಕಳ್ಳತನವಾಗುತ್ತಿರುವುದನ್ನು ನೋಡಿದರೆ ಯಾರೋ ಪರಿಣಿತ ಕಳ್ಳರ ಜಾಲವೇ ಈ ಕೆಲಸ ಮಾಡುತ್ತಿದೆ ಎಂದು ಸಾರ್ವಜನಿಕರೊಬ್ಬರು ಸಂಶಯ ವ್ಯಕ್ತಪಡಿಸುತ್ತಾರೆ.
“ಬ್ಯಾಂಕಿಗೋಗಿ ಬರುವಷ್ಟರಲ್ಲಿ ಗಾಡಿ ಎಗರಿಸಿದ್ದಾರೆ ನೋಡ್ರಿ”
“ಬ್ಯಾಂಕಿನ ಗೇಟಿನ ಮುಂದೆ ಗಾಡಿ ಇಟ್ಟು, ಹತ್ತದಿನೈದು ನಿಮಿಷದಲ್ಲಿ ಕೆಲಸ ಮುಗಿಸಿಕೊಂಡು ವಾಪಸ್ ಬರುವಷ್ಟರಲ್ಲಿ ಎಗರಿಸಿದ್ದಾರೆ. ಗಾಡಿ ಲಾಕ್ ಮಾಡಿದ್ದರೂ ಅದೇಗೆ ಕಳ್ಳತನ ಮಾಡಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಕಾರ್ಯಗಳಿಗೆ ಸೈಕಲ್ ಮೋಟರ್ ತುಂಬಾ ಅನುಕೂಲವಾಗಿತ್ತು. ಕಳ್ಳತನವಾಗಿರುವುದರಿಂದ ಪುನಃ ಹೊಸ ಗಾಡಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ” ಎಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಹೆಸರೇಳಲಿಚ್ಚಿಸದ ನೌಕರರೊಬ್ಬರು ಅಳಲು ತೋಡಿಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *