ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 25
ರಾಯಚೂರು ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಸಿಂಧನೂರು, ಲಿಂಗಸುಗೂರು, ಮಾನ್ವಿ, ದೇವದುರ್ಗ ಹಾಗೂ ರಾಯಚೂರು ತಾಲೂಕು ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಅಪಘಾತಗಳು ವರದಿಯಾಗುತ್ತಿದ್ದು, ರಸ್ತೆಗಿಳಿಯಲು ಸವಾರರಿಗೆ ನಡುಕ ಶುರುವಾಗಿದೆ.
ಈ ಮೊದಲು ಖಾಸಗಿ ವಾಹನಗಳ ಅಪಘಾತಗಳು ಬಹಳಷ್ಟು ವರದಿಯಾಗುತ್ತಿದ್ದವು, ಆದರೆ ಇತ್ತೀಚಿಗೆ ಸಾರಿಗೆ ಸಂಸ್ಥೆಯ ಬಸ್ ಅಪಘಾತಗಳು ಘಟಿಸುತ್ತಿರುವುದು ಆತಂಕದ ಬೆಳವಣಿಯಾಗಿದೆ. ಕಳೆದ 2021ರಿಂದ 2024 ಈವರೆಗೆ 1184 ಜನರು ಮೃತಪಟ್ಟು, 3365 ಜನರು ಗಾಯಗೊಂಡಿರುವ ಬಗ್ಗೆ ಇಲಾಖೆಯ ವರದಿಗಳಿದ್ದು, ಜನಸಾಮಾನ್ಯರನ್ನು ಬೆಚ್ಚಿಬೀಳಿಸಿದೆ.
ಹಿಟ್ ಆಂಡ್ ರನ್, ನಿಲುಗಡೆಯಲ್ಲಿದ್ದ ವಾಹನಕ್ಕೆ ಡಿಕ್ಕಿ ಹೊಡೆದದ್ದು, ಬೇರೊಂದು ವಾಹನ ಹಿಂಬದಿ ಡಿಕ್ಕಿ ಹೊಡೆದಿದ್ದು, ಬೇರೊಂದು ವಾಹನಕ್ಕೆ ಪಕ್ಕದಿಂದ ಡಿಕ್ಕಿ ಹೊಡೆದದ್ದು, ಉರುಳಿ ಬಿದ್ದ ವಾಹನ, ಎದುರು-ಬದುರು ಡಿಕ್ಕಿ, ರಸ್ತೆ ಬದಿಗೆ ಸರಿದು ಅಪಘಾತ, ರಸ್ತೆ ಡಿವೈಡರ್ / ತಡೆಗೋಡೆಗಳಿಗೆ ಡಿಕ್ಕಿ ಹೊಡೆದದ್ದು, ಇತರೆ ಸ್ವರೂಪದ ಅಪಘಾತಗಳು ಹೀಗೆ ಜಿಲ್ಲೆಯಲ್ಲಿ ಹಲವು ರೀತಿಯ ಅಪಘಾತಗಳು ವರದಿಯಾಗುತ್ತಿದ್ದು, ಅಪಘಾತ ಪ್ರಮಾಣವನ್ನು ತಡೆಯಲು ಸಾರ್ವಜನಿಕ ವಲಯದಿಂದ ವ್ಯಾಪಕ ಕೂಗು ಕೇಳಿಬರುತ್ತಿದೆ.
ಜಿಲ್ಲೆಯಲ್ಲಿ ಅಪಘಾತಗಳು ಹೆಚ್ಚುತ್ತಿರುವ ಬಗ್ಗೆ ಪ್ರಜ್ಞಾವಂತರು ಹಾಗೂ ತಜ್ಞರೊಬ್ಬರು ಹಲವು ಕಾರಣಗಳನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆಗಳು ಗಮನಹರಿಸಬೇಕೆನ್ನುವುದು ಜನರ ಅಭಿಪ್ರಾಯವಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪಘಾತಗಳಿಗೆ ಕಾರಣ ಏನಿರಬಹುದು ?
1) ಅತಿವೇಗ, ಅಜಾಗರೂಕತನ ಹಾಗೂ ಅವಸರದ ಚಾಲನೆ
2) ಚಾಲನೆಯ ಸಂದರ್ಭದಲ್ಲಿ ಮೊಬೈಲ್ ಬಳಕೆ
3) ಮದ್ಯ ಕುಡಿದು ವಾಹನ ಚಾಲನೆ ಮಾಡುವುದು
4) ರಸ್ತೆ ನಿಯಮಗಳ ಅರಿವಿಲ್ಲದವರು ಲೇನ್ ಶಿಸ್ತು (ಪಥ ಶಿಸ್ತು ಇಲ್ಲದಿರುವಿಕೆ ಹಾಗೂ ವಿರುದ್ಧ ದಿಕ್ಕಿನಲ್ಲಿ ಚಲಾಯಿಸುವುದು) ಇಲ್ಲದೆ ಮನಬಂದಂತೆ ಚಾಲನೆ ಮಾಡುವುದು.
5) ರಸ್ತೆ ಸುರಕ್ಷತಾ ನಿಯಮಗಳ ಜಾಗೃತಿ ಕೊರತೆ ಹಾಗೂ ಈ ಬಗ್ಗೆ ಇಲಾಖೆಗಳು ಗಂಭೀರವಾಗಿ ಪರಿಗಣಿಸದೇ ಇರುವುದು.
6) ಗುಂಡಿಗಳು ಬಿದ್ದು ಹಾಳಾಗಿ ಅಧ್ವಾನ ಸ್ಥಿತಿಗೆ ತಲುಪಿದ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳು. ಕಳಪೆ ಕಾಮಗಾರಿ, ಅವೈಜ್ಞಾನಿಕ ನಿರ್ಮಾಣ, ಮುನ್ನೆಚ್ಚರಿಕೆ ಫಲಕಗಳ ಅಳವಡಿಕೆ ಕೊರತೆ
7) ಗ್ರಾಮೀಣ ರಸ್ತೆಗಳು ಸಂಪೂರ್ಣ ದುಃಸ್ಥಿತಿಗೆ ತಲುಪಿರುವುದು, ರಿಪೇರಿ ವಿಳಂಬ, ವ್ಯಾಪಕ ಭ್ರಷ್ಟಾಚಾರ
8) ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ), ಪಿಡಬ್ಲುö್ಯಡಿ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಇಲಾಖೆಗಳ ಸಮನ್ವಯತೆ ಕೊರತೆ, ಬೇಜವಾಬ್ದಾರಿತನ
9) ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿದು ವಾಹನ ಸವಾರರು ರಸ್ತೆ ನಿಯಮ ಉಲ್ಲಂಘಿಸಿದರೂ ವಿನಾಯಿತಿ ನೀಡುವುದು.
10) ಸಾರಿಗೆ ಸಂಸ್ಥೆ ಚಾಲಕರಿಗೆ ಹೆಚ್ಚಿದ ವೃತ್ತಿ ಒತ್ತಡ, ರಜೆ ಕೊರತೆ, ಅನಾರೋಗ್ಯ ಸಂದರ್ಭದಲ್ಲೂ ಕರ್ತವ್ಯಕ್ಕೆ ಹಾಜರಾಗುವ ಅನಿವಾರ್ಯತೆ.
11) ಲೈಸೆನ್ಸ್ ಪಡೆಯದವರು, ತರಬೇತಿ ಇಲ್ಲದವರು ವಾಹನ ಚಾಲನೆ ಮಾಡುವುದು.
12) ರಾತ್ರಿ ವೇಳೆ ಇಲ್ಲವೇ ಬೆಳಗಿನ ಜಾವ ಹೆಚ್ಚು ಅಪಘಾತಗಳು ಸಂಭವಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ಇರುವುದು.
13) ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಾಹನಗಳ ಸುರಕ್ಷತಾ ಮಟ್ಟದ ಕೊರತೆ