ನಮ್ಮ ಸಿಂಧನೂರು, ಅಕ್ಟೋಬರ್ 02
ನಗರದ ಗಂಗಾವತಿ ಮಾರ್ಗದಲ್ಲಿರುವ ಮುಖ್ಯರಸ್ತೆಯ ಬದಿ (ಹಳ್ಳ ಬಳಿ) ಯಾರೋ ಅಪರಿಚಿತರು, ರಾಷ್ಟ್ರಧ್ವಜಗಳನ್ನು ತ್ಯಾಜ್ಯದಲ್ಲಿ ಬಿಸಾಕಿರುವುದು ಬುಧವಾರ ಪತ್ತೆಯಾಗಿದ್ದು, ಗಾಳಿಗೆ ಧ್ವಜಗಳು ರಸ್ತೆ ಬದಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಗಮನಿಸಿದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಧ್ವಜಗಳನ್ನು ಯಾರೋ ಚೀಲದಲ್ಲಿ ತುಂಬಿ ಮನಬಂದಂತೆ ತ್ಯಾಜ್ಯದ ರಾಶಿಯಲ್ಲಿ ಬಿಸಾಕಿರುವ ಕುರಿತಂತೆ ಸಾರ್ವಜನಿಕರೊಬ್ಬರು ಬುಧವಾರ ಬೆಳಿಗ್ಗೆ ‘ನಮ್ಮ ಕರ್ನಾಟಕ ಸೇನೆ’ಯ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ ಅವರ ಗಮನಕ್ಕೆ ತಂದಿದ್ದಾರೆ. ಘಟನಾ ಸ್ಥಳಕ್ಕೆ ಸಂಘಟನೆಯ ಮುಖಂಡರು, ಕಾರ್ಯಕರ್ತರು ಭೇಟಿ ನೀಡಿದಾಗ ರಾಷ್ಟçಧ್ವಜಗಳು ತ್ಯಾಜ್ಯದ ರಾಶಿಯಲ್ಲಿ ಬಿದ್ದಿದ್ದಲ್ಲದೇ ಗಾಳಿಗೆ ರಸ್ತೆ ಬದಿ ಅಲ್ಲಲ್ಲಿ ಚದುರಿದ್ದು ಕಂಡುಬಂದಿದೆ.
ತದನಂತರ ನಮ್ಮ ಕರ್ನಾಟಕ ಸೇನೆಯ ಮುಖಂಡರು, ಧ್ವಜಗಳು ಕಸದ ರಾಶಿಯಲ್ಲಿ ಬಿದ್ದಿರುವುದು ಕುರಿತಂತೆ ದೂರವಾಣಿಯ ಮೂಲಕ ಗ್ರಾಮೀಣ ಠಾಣೆ ಪಿಎಸ್ಐ ಇಸಾಕ್ ಅಹ್ಮದ್ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಅವರು, ಸ್ಥಳ ಪರಿಶೀಲನೆ ನಡೆಸಿ, ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಕಸದ ರಾಶಿಯಲ್ಲಿ ಬಿದ್ದಿದ್ದ ಧ್ವಜಗಳನ್ನು ಸಂಘಟನೆಯ ಕಾರ್ಯಕರ್ತರು ಆಯ್ದು, ಚೀಲದಲ್ಲಿ ಜೋಡಿಸಿಟ್ಟು ಪೊಲೀಸರ ಸುಪರ್ದಿಗೆ ವಹಿಸಿದರು.
ಕ್ರಮಕ್ಕೆ ಒತ್ತಾಯ
“ರಾಷ್ಟ್ರಧ್ವಜಗಳನ್ನು ಮನಬಂದಂತೆ ಎಲ್ಲೆಂದರಲ್ಲಿ ಬಿಸಾಕುವುದು ಸರಿಯಲ್ಲ. ರಾಷ್ಟçಧ್ವಜದ ಗೌರವ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಧ್ವಜ ಕಾಯ್ದೆಯ ನಿಯಮಗಳಂತೆ ಎಲ್ಲರೂ ನಡೆದುಕೊಳ್ಳಬೇಕು. ಎಲ್ಲೆಂದರಲ್ಲಿ ಧ್ವಜಗಳನ್ನು ಬಿಸಾಕುವುದನ್ನು ತಡೆಯಬೇಕು ಮತ್ತು ತ್ಯಾಜ್ಯದಲ್ಲಿ ರಾಷ್ಟçಧ್ವಜಗಳನ್ನು ಎಸೆದಿರುವವರನ್ನು ಪತ್ತೆಹಚ್ಚಬೇಕು, ಇಂತಹ ಪ್ರಕರಣ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷ ಮಂಜುನಾಥ ಗಾಣಗೇರ ಸಂಬಂಧಿಸಿದ ಇಲಾಖೆಯವರಿಗೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಬೊಮ್ಮಣ್ಣ ಸುಕಾಲಪೇಟೆ, ಚಿರಂಜೀವಿ ಗೊರಬಾಳ್, ಮಹೆಬೂಬ್ ಎಂಎಲ್ಎ ಇನ್ನಿತರರಿದ್ದರು.