ಸಿಂಧನೂರು: ಹೊಳೆ-ಹಳ್ಳದ ಮರಳು ಲೂಟಿ !

Spread the love

ಸ್ಪೆಷಲ್ ನ್ಯೂಸ್ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು ಸೆಪ್ಟೆಂಬರ್ 28

ಸಿಂಧನೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ನದಿ ಹಾಗೂ ಕೆಲ ಹಳ್ಳಗಳಲ್ಲಿ ಮರಳಿಗಾಗಿ ಹಿಟಾಚಿಗಳಿಂದ ಬಗೆಯಲಾಗುತ್ತಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಿ ರಾಜಾರೋಷವಾಗಿ ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದು, ನೈಸರ್ಗಿಕ ಸಂಪತ್ತನ್ನು ಹಾಡಹಗಲೇ ಲೂಟಿ ಹೊಡೆಯಲಾಗುತ್ತಿದೆ.
ಕೆಲ ರಾಜಕೀಯ ಪ್ರಭಾವಿಗಳ ಕೃಪಾಕಟಾಕ್ಷದಿಂದ ಮರಳು ಅಕ್ರಮ ಸಾಗಣೆ ನಿರಾತಂಕವಾಗಿ ನಡೆಯುತ್ತಿದೆ. ನೈಸರ್ಗಿಕ ಸಂಪತ್ತನ್ನು ರಕ್ಷಿಸಬೇಕಾದವರೇ ಪರೋಕ್ಷವಾಗಿ ಮರಳು ಮಾಫಿಯಾದ ವರೊಂದಿಗೆ ಶಾಮೀಲಾಗಿರುವುದರಿಂದ ಮೌಖಿಕವಾಗಿ ಹಾಗೂ ಮನವಿ ಮೂಲಕ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.
ನದಿ-ಹಳ್ಳಗಳ ಮರಳು ಸಾಗಣೆ
ತಾಲೂಕಿನ ಜಾಲವಾಡಗಿ, ಯಾಪಲಪರ್ವಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಪೋತ್ನಾಳ್ ಹಳ್ಳ ಹಾಗೂ ಆಯನೂರು, ಹೆಡಗಿನಾಳ ಬಳಿಯಿರುವ ತುಂಗಭದ್ರಾ ನದಿಪಾತ್ರದಿಂದ ಮರಳು ದಂಧೆಕೋರರು ಹಗಲು-ರಾತ್ರಿಯೆನ್ನದೇ ಮರಳು ಸಾಗಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಗೋನವಾರ, ದಡೆಸುಗೂರು, ಕೆಂಗಲ್ ಭಾಗದಿಂದಲೂ ಮರಳು ಅವ್ಯಾಹತ ಅಕ್ರಮ ಸಾಗಣೆ ನಡೆಯುತ್ತಿದೆ. ಟಿಪ್ಪರ್, ಟ್ರಾö್ಯಕ್ಟರ್ ಹಾಗೂ ಲಾರಿಗಳಲ್ಲಿ ಯಥೇಚ್ಛವಾಗಿ ಮರಳನ್ನು ಸಾಗಿಸಲಾಗುತ್ತಿದೆ. ಮರಳು ಸಾಗಿಸುವ ಭರದಲ್ಲಿ ಹಳ್ಳಿಗಳಲ್ಲಿ ಟಿಪ್ಪರ್ ಹಾಗೂ ಲಾರಿಗಳನ್ನು ಅತಿವೇಗದಿಂದ ಓಡಿಸುತ್ತಿರುವುದರಿಂದ ಈ ಮಾರ್ಗದಲ್ಲಿನ ಹಳ್ಳಿಗಳ ಗ್ರಾಮಸ್ಥರು ಆತಂಕಿತರಾಗಿದ್ದಾರೆ. ಅಕ್ರಮ ಮರಳು ಸಾಗಣೆ ಅವ್ಯವಹಾರಕ್ಕೆ ಕಡಿವಾಣ ಹಾಕಲು ಸರ್ಕಾರದ ಕಟ್ಟುನಿಟ್ಟಿನ ಆದೇಶಗಳಿದ್ದರೂ ಇವುಗಳನ್ನು ಅನುಷ್ಠಾನಗೊಳಿಸಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೇರಿದಂತೆ ಇನ್ನಿತರೆ ಇಲಾಖೆ ಅಧಿಕಾರಿಗಳು ಆಸೆ, ಆಮಿಷಗಳಿಗೆ ಬಲಿಯಾಗಿ, ಏನೂ ಗೊತ್ತಿಲ್ಲದವರಂತೆ ನಡೆದುಕೊಳ್ಳುತ್ತಿದ್ದಾರೆ ಎಂಬುದು ಹಳ್ಳಗಳ ವ್ಯಾಪ್ತಿಯ ಗ್ರಾಮಗಳ ಜನರ ದೂರಾಗಿದೆ.
ಸ್ಟಾಕ್‌ಯಾರ್ಡ್ ಇಲ್ಲ, ರಾಯಲ್ಟಿಯೂ ಇಲ್ಲ !!
ತಾಲೂಕು ವ್ಯಾಪ್ತಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಾನೂನುಬದ್ಧವಾಗಿ ಮರಳು ಸ್ಟಾಕ್‌ಯಾರ್ಡ್ ಮಾಡದಿರುವುದು ದಂಧೆಕೋರರಿಗೆ ಸ್ವರ್ಗವೇ ಬಾಯ್ದೆರೆದಂತಾಗಿದೆ. ನಯಾಪೈಸೆ ರಾಯಲ್ಟಿ ಕಟ್ಟದೇ ಅಡ್ಡಮಾರ್ಗದಲ್ಲಿ ದಿನವೂ ಆರೇಳು ಟಿಪ್ಪರ್ ಮರಳು ಸಾಗಣೆ ಮಾಡುವ ಮೂಲಕ ಸರ್ಕಾರಕ್ಕೆ ತೆರಿಗೆ ಕಟ್ಟದೇ ವಂಚಿಸುತ್ತಿದ್ದಾರೆ. ಇಷ್ಟೆಲ್ಲ ಭಾನಗಡಿಗಳು ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಇದಕ್ಕೂ ತಮಗೂ ಸಂಬAಧ ಇಲ್ಲದಂತೆ ಇರುವುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಜಿಲ್ಲೆಯಲ್ಲಿ ಜಿಲ್ಲಾ ಮರಳು ಸಮಿತಿ, ತಾಲೂಕು ಮರಳು ಸಮಿತಿಗಳು ಅಸ್ತಿತ್ವದಲ್ಲಿ ಇವೆಯಾ ? ಅಥವಾ ಇದ್ದರೂ ಅಕ್ರಮಕ್ಕೆ ಪರೋಕ್ಷ ಒಪ್ಪಿಗೆ ನೀಡಿವೆಯೇ ? ಎಂದು ಪರಿಸರವಾದಿಗಳು, ಸಾರ್ವಜನಿಕರು ಹಾಗೂ ಹಳ್ಳಗಳ ಸುತ್ತಮುತ್ತಲಿನ ಗ್ರಾಮಗಳ ಜನರು ಪ್ರಶ್ನಿಸುತ್ತಿದ್ದಾರೆ.
ಇಲಾಖೆ ಮೌನ ?
ಕಳೆದ ಹಲವು ದಿನಗಳಿಂದ ತಾಲೂಕಿನ ಹಳ್ಳಗಳಲ್ಲಿ ಹಾಗೂ ತುಂಗಭದ್ರಾ ನದಿ ಹಾಗೂ ಆಸುಪಾಸಿನ ಸ್ಥಗಳಿಂದ ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮೌನಕ್ಕೆ ಶರಣಾಗಿದೆ ಎನ್ನುವುದು ಜನಸಾಮಾನ್ಯರ ದೂರಾಗಿದೆ. ಸಿಆರ್‌ಜೆಡ್ ಮತ್ತು ನಾನ್ ಸಿಆರ್‌ಜೆಡ್ ಪ್ರದೇಶದಲ್ಲಿ ಗುರುತಿಸಲಾದ ಮರಳು ಗಣಿ ಬ್ಲಾಕ್‌ಗಳು ಯಾವುವು ? ಅವುಗಳಲ್ಲಿ ಸಂಗ್ರಹಿಸಿದ ರಾಜಧನವೆಷ್ಟು ? ಆಯಾ ಗ್ರಾಮ ಪಂಚಾಯಿತಿಗೆ ಹಂಚಿಕೆ ಮಾಡಬೇಕಾದ ಮೊತ್ತವೆಷ್ಟು ? ಎರಡ್ಮೂರು ವರ್ಷಗಳಲ್ಲಿ ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಸಂಬAಧ ದಾಖಲಿಸಿದ ವಿವಿಧ ಪ್ರಕರಣಗಳ ಸಂಖ್ಯೆಯೆಷ್ಟು ? ವಸೂಲಾತಿ ಮಾಡಿದ ದಂಡ ಎಷ್ಟು ? ಅಕ್ರಮ ಮರಳು ಗಣಿಗಾರಿಕೆ ಸಂಬAಧ ವಶಪಡಿಸಿಕೊಂಡ ವಾಹನಗಳ ಸಂಖ್ಯೆ ಎಷ್ಟು ? ಎಂಬುವ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಾರ್ವಜನಿಕವಾಗಿ ಬಹಿರಂಗಪಡಿಸುವ ಮೂಲಕ ಮರಳು ಅಕ್ರಮ ಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.


Spread the love

Leave a Reply

Your email address will not be published. Required fields are marked *