ಸಾಲಗುಂದಾ ಪಿಎಸಿಎಸ್‌ಗೆ ನಿಯಮಬಾಹಿರವಾಗಿ ಸಿಬ್ಬಂದಿ ನೇಮಕ, ನಿಬಂಧಕರಿಗೆ ದೂರು

Spread the love

ಸಿಂಧನೂರು, ಅಕ್ಟೋಬರ್ 07
ತಾಲೂಕಿನ ಸಾಲಗುಂದಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ (ಪಿಎಸಿಎಸ್)ದ ಕಾರ್ಯನಿರ್ವಹಣಾಧಿಕಾರಿಯು ನಮ್ಮ ಗಮನಕ್ಕೆ ತರದೇ ನಿಯಮಬಾಹಿರವಾಗಿ ಮತ್ತು ಅನಧಿಕೃತವಾಗಿ ಸಿಬ್ಬಂದಿಯೊಬ್ಬರನ್ನು ನೇಮಕ ಮಾಡಿಕೊಂಡಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಹಕಾರಿಯ ಉಪಾಧ್ಯಕ್ಷರು ಹಾಗೂ ಸದಸ್ಯರು ತಾಲ್ಲೂಕು ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ದೂರು ಸಲ್ಲಿಸಿ ಒತ್ತಾಯಿಸಿದ್ದಾರೆ.
“ಸಾಲಗುಂದಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದ ಸಿಇಒ ವಿರೂಪಾಕ್ಷಪ್ಪ ಕೆಂಗಲ್ ಅವರು ಸಂಘದ ಠರಾವಿನಲ್ಲಿ ಮುಂಚಿತವಾಗಿ ಉಪಾಧ್ಯಕ್ಷರು, ಸದಸ್ಯರ ಸಹಿ ಮಾಡಿಸಿಕೊಂಡು, ಠರಾವಿನಲ್ಲಿ ಮನಸೋಇಚ್ಛೆ ಬರೆದುಕೊಂಡು, ಕಾರ್ಯಕ್ಷೇತ್ರವಲ್ಲದ ಹಾರಾಪುರ ಪಿಎಸಿಎಸ್‌ನ ಸಿಬ್ಬಂದಿ ನಬಿಸಾಬ್ ಹಾರಾಪುರ ಅವರನ್ನು ನಿಯಮಬಾಹಿರವಾಗಿ ಮತ್ತು ಅನಧಿಕೃತವಾಗಿ ನೇಮಕ ಮಾಡಿಕೊಂಡಿದ್ದಾರೆ. ನಮ್ಮ ಅನುಮತಿ ಇಲ್ಲದೇ ನಬಿಸಾಬ ಬಂದು ನಮ್ಮ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಘದ ಸಿಇಒ ಮತ್ತು ಅಧ್ಯಕ್ಷರು ಅಧಿಕಾರ ದುರುಪಯೋಗಪಡಿಸಿಕೊಂಡು ತಮ್ಮ ಮನಬಂದಂತೆ ಕಾರ್ಯನಿರ್ವಹಿಸುತ್ತಿದ್ದು, ಸಂಘದ ಸದಸ್ಯರು, ಉಪಾಧ್ಯಕ್ಷರ ಗಮನಕ್ಕೆ ತರದೇ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ಸಂಘ ಹಣಕಾಸು ಸಂಸ್ಥೆಯಾಗಿರುವುದರಿಂದ ರೈತರ, ಷೇರುದಾರರ, ಠೇವಣಿದಾರರ ಹಿತದೃಷ್ಟಿಯಿಂದ, ಸಂಸ್ಥೆಗೆ ಆಂತರಿಕವಾಗಿ, ಬಾಹ್ಯವಾಗಿ ಯಾವುದೇ ಧಕ್ಕೆಯಾಗದಂತೆ ಗಮನಹರಿಸಬೇಕಿದೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ. ಖಾಲಿ ಇರುವ ಸಿಬ್ಬಂದಿ ಸ್ಥಾನಕ್ಕೆ ನಮ್ಮ ಸಂಘದ ಸದಸ್ಯರ ಒಮ್ಮತದ ತೀರ್ಮಾನ ಕೈಗೊಂಡು ಸಹಕಾರಿ ಸಂಘದ ಕಾಯ್ದೆಯ ಅಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಭರ್ತಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಪಿಎಸಿಎಸ್ ಸಿಇಒ ಅಮಾನತುಗೊಳಿಸಲು ಆಗ್ರಹ
ಕಾರ್ಯಕ್ಷೇತ್ರವಲ್ಲದ ಪಿಎಸಿಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ನಬಿಸಾಬ್ ಅವರನ್ನು ಪುನಃ ಹಾರಾಪುರ ಪಿಎಸಿಎಸ್‌ಗೆ ಕಳುಹಿಸಬೇಕು ಹಾಗೂ ಅಧಿಕಾರ ದುರುಪಯೋಗಪಡಿಸಿಕೊಂಡು ಮನಬಂದಂತೆ ನಿರ್ಧಾರ ಕೈಗೊಂಡು ರೈತರ, ಷೇರುದಾರರ ಹಾಗೂ ಠೇವಣಿದಾರರ ಹಿತವನ್ನು ಕಡೆಗಣಿಸಿರುವ ಸಿಇಒ ವಿರೂಪಾಕ್ಷಪ್ಪ ಕೆಂಗಲ್ ಅವರನ್ನು ಅಮಾನತುಗೊಳಿಸಬೇಕು ಎಂದು ಉಪಾಧ್ಯಕ್ಷ ಅಂಬರೇಶ ಗೋವಿಂದರಾಜ ಅಬಕಾರಿ, ಸದಸ್ಯರಾದ ಗೋವಿಂದಪ್ಪ ಹನುಮಂತಪ್ಪ ಬನ್ನಿಗಡ್ಡಿ, ಲಕ್ಷ್ಮಿ ನಿಂಗಪ್ಪ ದಳಪತಿ, ಜಯಮ್ಮ ಮಲ್ಲಿಕಾರ್ಜುನ ಹೂಗಾರ, ತಿಪ್ಪೇಶ ತಂದೆ ದ್ಯಾವಣ್ಣ ನಾಯಕ ಹಾಗೂ ಬಸವರಾಜ ಮಾರೆಮ್ಮ ಕೊನ್ನಾಪುರ ದೂರು ಸಲ್ಲಿಸಿ ನಿಬಂಧಕರನ್ನು ಆಗ್ರಹಿಸಿದ್ದಾರೆ.

Namma Sindhanuru Click For Breaking & Local News

Spread the love

Leave a Reply

Your email address will not be published. Required fields are marked *