ಸಿಂಧನೂರು: ತಾಲೂಕು ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ, ಶಾಸಕರ ನೇತೃತ್ವದಲ್ಲಿ ಸಭೆ ಕರೆಯಲು ನಗರಾಭಿವೃದ್ಧಿ ಹೋರಾಟ ಸಮಿತಿ ತಹಸೀಲ್ದಾರ್‌ಗೆ ಆಗ್ರಹ

Spread the love

ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ನವೆಂಬರ್ 29

ನಗರದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಮೇಲಿಂದ ಮೇಲೆ ಸಾರ್ವಜನಿಕರಿಂದ ವ್ಯಾಪಕ ಆರೋಪಗಳು ಕೇಳಿಬರುತ್ತಿದ್ದು, ಕಳೆದ ಅಕ್ಟೋಬರ್‌ನಲ್ಲಿ ಸರಣಿ ಸಾವು-ನೋವುಗಳಾದರೂ ಜಿಲ್ಲಾ, ತಾಲೂಕು ಆಡಳಿತ ಎಚ್ಚೆತ್ತುಕೊಂಡಿಲ್ಲ. ಕೂಡಲೇ ಶಾಸಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಭೆ ಕರೆದು ಸಮಸ್ಯೆ ಪರಿಹರಿಸಿ ಗುಣಮಟ್ಟದ ಚಿಕಿತ್ಸೆ ಸೌಲಭ್ಯ ಒದಗಿಸಲು ಮುಂದಾಗಬೇಕು ಎಂದು ಆಗ್ರಹಿಸಿ ನಗರಾಭಿವೃದ್ಧಿ ಹೋರಾಟ ಸಮಿತಿಯಿಂದ ತಹಸೀಲ್ದಾರ್ ಅರುಣ ದೇಸಾಯಿ ಅವರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಲಾಯಿತು.
ಆಸ್ಪತ್ರೆ ಕಳೆದ ಎರಡು ತಿಂಗಳಿನಿಂದ ವಿವಾದದ ಕೇಂದ್ರಬಿಂದುವಾಗಿದ್ದು, ವೈದ್ಯರು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಚಿಕಿತ್ಸೆ ಪಡೆಯಲು ರೋಗಿಗಳು ವೈದ್ಯರಿಗಾಗಿ ಗಂಟೆಗಟ್ಟಲೇ ಕಾಯಬೇಕಿದೆ, ಅದರಲ್ಲೂ ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ಬರುವ ಮಹಿಳೆಯರಿಗೆ ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ, ಔಷಧಿಗಳ ಕೊರತೆ, ಆಸ್ಪತ್ರೆ ಪ್ರಸೂತಿ ವಿಭಾಗದ ತಜ್ಞ ವೈದ್ಯರು ಸೇರಿದಂತೆ ಕೆಲ ವೈದ್ಯರು ದಿಢೀರ್ ರಜೆ ಹಾಕಿರುವುದು, 100 ಹಾಸಿಗೆಯ ಆಸ್ಪತ್ರೆಯ ಅಗತ್ಯಕ್ಕೆ ತಕ್ಕಂತೆ ಸುಸಜ್ಜಿತವಾಗಿ ಇರಬೇಕಾದ ಕ್ಯಾಸುವಲ್ಟಿ (ಅಪಘಾತ), ಎಮೆರ್ಜೆನ್ಸಿ (ತುರ್ತುಚಿಕಿತ್ಸೆ), ಸಪರೇಟ್ ಜನರಲ್ ವಾರ್ಡ್, ಪೋಸ್ಟ್ ಆಪರೇಟಿವ್ ವಾರ್ಡ್, ಜನರಲ್ ಸರ್ಜರಿ ವಾರ್ಡ್, ಐಸಿಯು, ಮಕ್ಕಳ ವಾರ್ಡ್ (ಜನರಲ್), ಎನ್‌ಐಸಿಯು ವಾರ್ಡ್ಗಳನ್ನು ಸಪರೇಟ್ ಆಗಿ ನಿರ್ವಹಣೆ ಮಾಡದೇ ಇರುವುದು ಸೇರಿ ಹಲವು ಲೋಪದೋಷಗಳ ಕುರಿತು ಪದಾಧಿಕಾರಿಗಳು ತಹಸೀಲ್ದಾರ್ ಅವರ ಗಮನಕ್ಕೆ ತಂದರು.
ಶಾಸಕರ ನೇತೃತ್ವದಲ್ಲಿ ಅಭಿವೃದ್ಧಿ ಸಮಿತಿ ಸಭೆ ಕರೆಯಲಾಗುವುದು: ತಹಸೀಲ್ದಾರ್
ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್, ಅರುಣ ದೇಸಾಯಿ, “ಆಸ್ಪತ್ರೆಯ ಬಗ್ಗೆ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಭೇಟಿ ಕೊಡಲಾಗಿದೆ. ಈ ಸಂದರ್ಭದಲ್ಲಿ ಹಲವು ನ್ಯೂನ್ಯತೆಗಳು ಕಂಡುಬಂದಿವೆ. 2 ವಾರ್ಡ್ಗಳ ರಿಪೇರಿ ಕೆಲಸ ನಡೆಯುತ್ತಿದೆ. ಆನಂತರ ಜನರಲ್ ಸರ್ಜರಿ ವಾರ್ಡ್, ಪೋಸ್ಟ್ ಆಪರೇಟಿವ್ ವಾರ್ಡ್ ವ್ಯವಸ್ಥೆ ಮಾಡಲಾಗುವುದು. ಶೇ.70ರಷ್ಟು ಹೆರಿಗೆ ವಿಭಾಗದ ಒತ್ತಡ ಇರುವುದರಿಂದ ಸಮಸ್ಯೆಯಾಗಿದೆ. ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯನ್ನು ಗುತ್ತಿಗೆದಾರರು ಇನ್ನು 2 ತಿಂಗಳಲ್ಲಿ ಪೂರ್ಣಗೊಳಿಸಿ ಕೊಡುವುದಾಗಿ ಹೇಳಿದ್ದಾರೆ. ತಾಲೂಕು ಆಸ್ಪತ್ರೆಯ ಹೆರಿಗೆ ವಿಭಾಗ ಅಲ್ಲಿಗೆ ಸ್ಥಳಾಂತರಗೊಂಡರೆ ಒತ್ತಡ ಕಡಿಮೆಯಾಗಲಿದೆ. ನಿಗದಿತ ವೇಳೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಬೇರೆಕಡೆ ಇರುತ್ತಾರೆಂಬ ದೂರು ಸಾರ್ವಜನಿಕರು, ಸಂಘಟನೆಗಳಿಂದ ಬಂದಿದ್ದು, ಈ ಕುರಿತು ಸೂಕ್ತ ನಿರ್ದೇಶನ ನೀಡಲಾಗಿದೆ. ಆರೋಗ್ಯ ರಕ್ಷಾ ಸಮಿತಿಯ ಸಭೆ ನಡೆಸಲಾಗಿದ್ದು, ಶಾಸಕರ ಅಧ್ಯಕ್ಷತೆಯಲ್ಲಿ ಅಭಿವೃದ್ಧಿ ಸಮಿತಿ ಸಭೆ ನಡೆಸಬೇಕಿದೆ” ಎಂದು ತಿಳಿಸಿದರು.
“ಶೀಘ್ರ ಸಾರ್ವಜನಿಕರ ಸಭೆ ಕರೆಯಿರಿ” : ಹೋರಾಟ ಸಮಿತಿ ಒತ್ತಾಯ
“ಅಭಿವೃದ್ಧಿ ಸಮಿತಿ ಸಭೆ ಕರೆಯುವ ಜೊತೆಗೆ ಆದಷ್ಟು ಶೀಘ್ರ ಶಾಸಕರು, ಅಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನೊಳಗೊಂಡ ಸಭೆ ಕರೆಯಬೇಕು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ, ನಗರಾಭಿವೃದ್ಧಿ ಹೋರಾಟ ಸಮಿತಿಯಿಂದ ಅನಿರ್ದಿಷ್ಟ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ” ಎಂದು ನಗರಾಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ದಿ ಹೋರಾಟ ಸಮಿತಿಯ ಸಂಚಾಲಕರಾದ ಡಿ.ಎಚ್.ಕಂಬಳಿ, ವೀರಭದ್ರಗೌಡ ಅಮರಾಪುರ, ಚಂದ್ರಶೇಖರ ಗೊರಬಾಳ, ವೆಂಕನಗೌಡ ಗದ್ರಟಗಿ, ಕರೇಗೌಡ ಕುರುಕುಂದಾ, ಟಿ.ಹುಸೇನಸಾಬ್, ಬಸವರಾಜ ಬಾದರ್ಲಿ, ಮಂಜುನಾಥ ಗಾಂಧಿನಗರ, ಬಿ.ಎನ್.ಯರದಿಹಾಳ, ನಾಗರಾಜ ಪೂಜಾರ್, ಶಂಕರ ಗುರಿಕಾರ, ಅಮೀನಸಾಬ್ ನದಾಫ್, ವೆಂಕಟೇಶ ಗಿರಿಜಾಲಿ, ಬಸವರಾಜ ಹಳ್ಳಿ, ಡಾ.ವಸೀಮ್ ಅಹ್ಮದ್, ದುರುಗೇಶ, ಕೃಷ್ಣಮೂರ್ತಿ ಇದ್ದರು.

Namma Sindhanuru Click For Breaking & Local News

ಬೇಡಿಕೆಗಳು: ಸಿಂಧನೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಸಮಗ್ರವಾಗಿ ಸುಧಾರಿಸುವ ನಿಟ್ಟಿನಲ್ಲಿ ಚುನಾಯಿತ ಜನಪ್ರತಿನಿಧಿಗಳು, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳ ಸಭೆ ಕರೆದು ಚರ್ಚಿಸಿ, ಸಮಸ್ಯೆಗಳನ್ನು ಪಟ್ಟಿಮಾಡಿ ಪರಿಹರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು, ಕೊರತೆ ಇರುವ ವೈದ್ಯರು, ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಹಾಗೂ ಕರ್ತವ್ಯದ ಅವಧಿಯಲ್ಲಿ ಖಾಸಗಿ ಕ್ಲಿನಿಕ್ ನಡೆಸುವವರ ಮೇಲೆ ಕ್ರಮ ಜರುಗಿಸಬೇಕು, 100 ಹಾಸಿಗೆ ಆಸ್ಪತ್ರೆಯ ಅಗತ್ಯಕ್ಕೆ ತಕ್ಕಂತೆ ಇರಬೇಕಾದ ಕ್ಯಾಸುವಲ್ಟಿ, ಎಮೆರ್ಜೆನ್ಸಿ, ಸಪರೇಟ್ ಜನರಲ್ ವಾರ್ಡ್, ಪೋಸ್ಟ್ ಆಪರೇಟಿವ್ ವಾರ್ಡ್ (ಶಸ್ತ್ರ ಚಿಕಿತ್ಸೆ), ಜನರಲ್ ಸರ್ಜರಿ ವಾರ್ಡ್, ಐಸಿಯು, ಮಕ್ಕಳ ವಾರ್ಡ್ (ಜನರಲ್), ಎನ್‌ಐಸಿಯು ವಾರ್ಡ್ಗಳನ್ನು ಆಯಾ ವಿಭಾಗವಾರು (ಸಪರೇಟ್) ವಿಂಗಡಿಸಿ ಸುಸ್ಥಿತಿಯಲ್ಲಿಡಬೇಕು, ಒಳರೋಗಿಗಳಾಗಿ ಇಲ್ಲಿ ದಾಖಲಾದವರಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು, ರಾತ್ರಿ ವೇಳೆಯಲ್ಲಿ ತುರ್ತು ಕೇಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಸಿಬ್ಬಂದಿ ಕಾರ್ಯತತ್ಪರರಾಗಿರಬೇಕು, ಕೊರೊನಾ ಸಂದರ್ಭದಲ್ಲಿ 2 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಿರುವ ಆಮ್ಲಜನಕ ಘಟಕ (ಆಕ್ಸಿಜನ್ ಪ್ಲಾಂಟ್) ಚಾಲನೆಗೊಳಿಸಿ, ಚಿಕಿತ್ಸೆಗೆ ಬಳಸಬೇಕು, ಕೊರತೆಯಿರುವ ಸಿಬ್ಬಂದಿಯನ್ನು ನೇಮಿಸಿ, ಮೂಲ ಕೆಲಸಕ್ಕೆ ನಿಯೋಜನೆಗೊಂಡವರಿಗೆ ಬೇರೆ ಕೆಲಸಕ್ಕೆ ನಿಯೋಜನೆ ಮಾಡುವುದನ್ನು ನಿಲ್ಲಿಸಬೇಕು ಹಾಗೂ ಅನಧಿಕೃತ ಕೆಲಸಗಾರರ ಹಾವಳಿಯನ್ನು ತಡೆಗಟ್ಟಬೇಕು, ಒಳ ರೋಗಿಗಳಿಗೆ ಮತ್ತು ಹೊರ ರೋಗಿಗಳಿಗೆ ಉಚಿತವಾಗಿ ದೊರೆಯುವ ಔಷಧಗಳನ್ನು ಕಡ್ಡಾಯವಾಗಿ ವಿತರಿಸಬೇಕು, ಆಸ್ಪತ್ರೆಯ ಒಳಗೆ ಮತ್ತು ಹೊರ ಆವರಣದಲ್ಲಿರುವ ಆರ್‌ಒ ಪ್ಲಾಂಟ್‌ನ್ನು ರಿಪೇರಿಗೊಳಿಸಿ ಶುದ್ಧ ಕುಡಿಯುವ ನೀರಿನ ಸೌಕರ್ಯ ಸೇರಿದಂತೆ ಅಗತ್ಯ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು, ಆಸ್ಪತ್ರೆಯಲ್ಲಿ ಒಳಾವರಣ, ವಾರ್ಡ್ಗಳು, ಶೌಚಾಲಯ, ಮೂತ್ರಾಲಯಗಳಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕು, ಪ್ರತಿದಿನ ನಿಗದಿಯಂತೆ ಸ್ವಚ್ಛತೆಕಾರ್ಯ ನಡೆಸಬೇಕು, ಪಿಡಬ್ಲುö್ಯಡಿ ಕ್ಯಾಂಪಿನಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಶೀಘ್ರ ಉದ್ಘಾಟಿಸಿ, ಸಾರ್ವಜನಿಕ ಸೇವೆಗೆ ಒದಗಿಸಬೇಕು, ಸರ್ಕಾರಿ ಆಸ್ಪತ್ರೆಯಲ್ಲಿ ಸಿಸಿಟಿವಿ, ಬಯೋಮೆಟ್ರಿಕ್ ವ್ಯವಸ್ಥೆ ಕಡ್ಡಾಯಗೊಳಿಸಬೇಕು ಬೇಡಿಕೆಗಳ ಈಡೇರಿಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.


Spread the love

Leave a Reply

Your email address will not be published. Required fields are marked *