ನಮ್ಮ ಸಿಂಧನೂರು, ಜುಲೈ 6
ತಾಲೂಕಿನ ಹಾರಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ನೂತನ ಕಟ್ಟಡ ನಿರ್ಮಾಣಗೊಂಡು ಹಲವು ತಿಂಗಳುಗಳು ಕಳೆದರೂ ಇನ್ನೂ ಉದ್ಘಾಟನೆಗೆ ಮುಂದಾಗದೇ ನಿರ್ಲಕ್ಷಿಸಲಾಗಿದೆ. ಹೀಗಾಗಿ ಹಳೆಯ ಕಟ್ಟಡದಲ್ಲಿ ರೋಗಿಗಳಿಗೆ ಚಿಕಿತ್ಸೆ ಒದಗಿಸಲು ಆರೋಗ್ಯ ಸಿಬ್ಬಂದಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕೇಂದ್ರ ವ್ಯಾಪ್ತಿಯ ಗ್ರಾಮಸ್ಥರು ದೂರಿದ್ದಾರೆ.
ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಳೆಯ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಮೊದಲಿಗಿಂತಲೂ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ಇಕ್ಕಟ್ಟಾದ ಜಾಗದಲ್ಲಿ ಚಿಕಿತ್ಸೆ ನೀಡಲು ಆರೋಗ್ಯ ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಹೊಸ ಉಪಕರಣ ಹಾಗೂ ವೈದ್ಯಕೀಯ ಸಾಮಗ್ರಿ, ಔಷಧಿ ಸೇರಿದಂತೆ ಇನ್ನಿತರೆ ಉಪಕರಣಗಳನ್ನು ಸುಸಜ್ಜಿತವಾಗಿ ಮತ್ತು ಸುರಕ್ಷಿತವಾಗಿ ಇಡಲು ಜಾಗದ ಕೊರತೆ ಉಂಟಾಗಿದ್ದು, ನೂತನ ಕಟ್ಟಡ ಸಾರ್ವಜನಿಕರ ಉಪಯೋಗಕ್ಕೆ ಬೇಗ ದೊರೆಯಬೇಕಿದೆ ಎಂದು ಜನರು ಮನವಿ ಮಾಡಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ, ಹಾಸ್ಪಿಟಲ್ ಅಟೆಂಡರ್ ಗ್ರೇಡ್-2 (ಗ್ರೂಪ್ ಡಿ) ವಸತಿ ಗೃಹ, ಶೂಶ್ರೂಷಕರ ವಸತಿ ಗೃಹ ಹಾಗೂ ವೈದ್ಯಾಧಿಕಾರಿಗಳ ವಸತಿ ಗೃಹಗಳನ್ನು ನಿರ್ಮಿಸಲಾಗಿದ್ದು, ಆ ಕಟ್ಟಡಗಳು ಸಹ ಉದ್ಘಾಟನೆಗೆ ಕಾಯುತ್ತಿವೆ. ಹಾರಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ರಾಷ್ಟ್ರೀಯ ಹೆದ್ದಾರಿ 150 (ಎ) ಮಾರ್ಗದಲ್ಲಿದ್ದು, ಚಿಕಿತ್ಸೆ ಬರುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಯಾವುದೇ ರೀತಿಯ ವಿಳಂಬ ಮಾಡದೇ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.