ವಿಶೇಷ ವರದಿ : ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 26
ನಗರದ ರಾಯಚೂರು ಮಾರ್ಗದ ಹಳ್ಳದ ರಸ್ತೆ ರಿಪೇರಿಗೆ ಪದೇ ಪದೆ ವಿಳಂಬ ಮಾಡಲಾಗುತ್ತಿದ್ದು, ರಿಪೇರಿ ಹೆಸರಿನಲ್ಲಿ ರಸ್ತೆಯನ್ನು ಕೊರೆದು ಬಿಟ್ಟಿರುವುದರಿಂದ ಅಪಘಾತ ಭೀತಿ ಕಾಡುತ್ತಿದೆ. ಯಾವುದೇ ರೀತಿಯ ಅವಘಡ ಸಂಭವಿಸಿದರೆ ಹೊಣೆ ಯಾರು ? ಎಂದು ದ್ವಿಚಕ್ರ ಸವಾರರು ಹಾಗೂ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಸಂಖ್ಯೆ ಹೆಚ್ಚುತ್ತಿದೆ. ಕಳೆದ 2021ರಿಂದ 2024ರ ಈವರೆಗೆ 1184 ಜನರು ಮೃತಪಟ್ಟು, 3365 ಜನರು ಗಾಯಗೊಂಡಿರುವ ಬಗ್ಗೆ ಇಲಾಖೆಯ ವರದಿಗಳಿದ್ದು, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆಯವರು ಚಾಲಕರು ಅತಿವೇಗ, ಅಜಾಗರೂಕತನದ ಬಗ್ಗೆ ಮಾತನಾಡುತ್ತಾರೆ. ಆದರೆ, ನಗರದಲ್ಲೇ ರಸ್ತೆ ಅಧ್ವಾನ ಸ್ಥಿತಿಗೆ ತಲುಪಿದರೂ ಈ ಬಗ್ಗೆ ಚಕಾರವೆತ್ತುತ್ತಿಲ್ಲ. ಸಂಸದರು, ಶಾಸಕರು ಇತ್ತ ಯಾಕೆ ಗಮನಹರಿಸುತ್ತಿಲ್ಲ ಎಂದು ಸವಾರರು ಎಂದು ಪ್ರಶ್ನಿಸಿದ್ದಾರೆ.
ಕೊಪ್ಪಳ ಸಂಸದರು ಬಂದೋದ್ರೂ ರಿಪೇರಿಯಾಗದ ರಸ್ತೆ
ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ 23-08-2024ರಂದು ಸಿಂಧನೂರು ಹಳ್ಳದ ಬ್ರಿಡ್ಜ್ಗೆ ಭೇಟಿ ನೀಡಿದ್ದರು. ಸಂದರ್ಭದಲ್ಲಿ ಸಾರ್ವಜನಿಕರು, ವಾಹನ ಸವಾರರು ಸೇರಿದಂತೆ ಹಲವು ಮುಖಂಡರು ಹಳ್ಳದ ರಸ್ತೆಯ ಅವ್ಯವಸ್ಥೆಯ ಬಗ್ಗೆ ಗಮನ ಸೆಳೆದಿದ್ದರು. ಈ ಸಂದರ್ಭದಲ್ಲಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಸಂಸದರು ಸೂಚಿಸಿದ್ದರು. ಸಂಸದರು ಬಂದು 2 ತಿಂಗಳು ಗತಿಸಿದರೂ ಇಲ್ಲಿಯವರೆಗೂ ರಸ್ತೆ ರಿಪೇರಿಯಾಗಿಲ್ಲ. ರಿಪೇರಿ ಹೆಸರಿಲ್ಲಿ ಇನ್ನಷ್ಟು ಕೊರಕಲು ಮಾಡಿ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಲಾಗಿದ್ದು, ದ್ವಿಚಕ್ರ ವಾಹನ ಸವಾರು ರಾತ್ರಿ ವೇಳೆ ಗೊತ್ತಾಗದೇ ಕೊರಕಲಲ್ಲಿ ಚಕ್ರ ಸಿಲುಕಿ ಬೀಳುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.