ನಮ್ಮ ಸಿಂಧನೂರು, ಮಾರ್ಚ್ 3
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ನಗರಸಭೆಯ ಕುಡಿವ ನೀರಿನ ಘಟಕ ಕಳೆದ ಹಲವು ದಿನಗಳಿಂದ ಬಂದ್ ಆಗಿದ್ದು, ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ರೋಗಿಗಳ ಕಡೆಯವರು ನೀರಿನ ಅಭಾವ ಎದುರಿಸುತ್ತಿದ್ದಾರೆ. ಬೇಸಿಗೆ ಕಾರಣ ನೀರಿನ ದಾಹ ತಣಿಸಲು ರೋಗಿಗಳ ಕಡೆಯವರು ದಿನವೂ 100 ರೂಪಾಯಿಗೂ ಹೆಚ್ಚು ಹಣವನ್ನು ಕುಡಿವ ನೀರಿನ ಬಾಟಲ್‌ಗಾಗಿಯೇ ವ್ಯಯಿಸುತ್ತಾರೆ. ಆಸ್ಪತ್ರೆಯ ಆವರಣದಲ್ಲಿ ಕುಡಿವ ನೀರಿನ ಘಟಕ ಇದ್ದರೂ ಸ್ಮಾರಕದಂತಾಗಿದೆಯೇ ಹೊರತು ಹನಿ ನೀರು ತೊಟ್ಟಿಕ್ಕುತ್ತಿಲ್ಲ. ಇದು ಸ್ಥಗಿತಗೊಂಡು ಬಹಳಷ್ಟು ದಿನ ಕಳೆದರೂ ಇದನ್ನು ಗಮನಿಸುವವರೇ ಇಲ್ಲ ಎಂದು ಸಾರ್ವಜನಿಕರ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳ ಕಡೆಯವರು ಆರೋಪಿಸುತ್ತಾರೆ. ಹೊಸದಾಗಿ ಬಂದವರು ನೀರಿನ ಘಟಕದ ಮೇಲೆ ಅಂಟಿಸಲಾದ ಫಲಕಗಳನ್ನು ನೋಡಿ ನೀರು ತುಂಬಿಕೊಳ್ಳಲು ಹೋದರೆ ನಲ್ಲಿಯಲ್ಲಿ ಹನಿ ನೀರು ಬರದೇ ಪೆಚ್ಚು ಮೋರೆ ಹಾಕಿಕೊಂಡು ವಾಪಸ್ ಆಗುತ್ತಾರೆ. ದಿನವೂ ಬಹಳಷ್ಟು ಜನರು ಬಂದೋಗುವ ಹಾಗೂ ರೋಗಿಗಳು, ರೋಗಿಗಳ ಕಡೆಯವರಿಂದ ತುಂಬಿ ತುಳುಕುವ ಸಾರ್ವಜನಿಕ ಆಸ್ಪತ್ರೆಗೆ ಕನಿಷ್ಠ ಕುಡಿವ ನೀರಿನ ಸೌಕರ್ಯ ಕಲ್ಪಿಸುವಲ್ಲಿ ನಗರಸಭೆ ಆಡಳಿತ ಬೇಜವಾಬ್ದಾರಿ ವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.