(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 2
ಹಣದಾಹ, ದಿನದ ಗಳಿಕೆ ವ್ಯಾಮೋಹಕ್ಕೆ ಬಿದ್ದ ಸರ್ಕಾರಿ ಆಸ್ಪತ್ರೆಯ ಕೆಲ ವೈದ್ಯರು ಎರಡು ದೋಣಿಯೆ ಮೇಲೆ ಕಾಲಿಡಲು ಹೋಗಿ (ಸರ್ಕಾರಿ ಆಸ್ಪತ್ರೆ-ಖಾಸಗಿ ಆಸ್ಪತ್ರೆ), ಸಕಾಲಕ್ಕೆ ಗುಣಮಟ್ಟದ ಚಿಕಿತ್ಸೆ ನೀಡಲು ವಿಫಲವಾಗಿ, ರೋಗಿಗಳು ಸಾವು-ನೋವಿಗೆ ಈಡಾದ ಘಟನೆಗಳ ಬಗ್ಗೆ ಸಾರ್ವಜನಿಕರು ಉದಾಹರಣೆ ಸಮೇತ ಬಹಿರಂಗವಾಗಿ ಮಾತನಾಡುತ್ತಿದ್ದು, ಈ ಬಗ್ಗೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆನ್ನುವ ಆಗ್ರಹ ಕೇಳಿಬರುತ್ತಿದೆ.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚಿಗೆ ಹೆರಿಗೆಗೆಂದು ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬೆನ್ನಲ್ಲೆ, ಆಕೆಯ ಕುಟುಂಬಸ್ಥರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ಸಲ್ಲಿಸಿ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿದ್ದುಕೊಂಡು ಖಾಸಗಿ ಆಸ್ಪತ್ರೆ ನಡೆಸುವ ಕೆಲ ವೈದ್ಯರ ಅವ್ಯವಹಾರದ ನಡೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಜನಸಾಮಾನ್ಯರಿಗೆ ಸೇವೆ ಒದಗಿಸಬೇಕಾದ ವೈದ್ಯರೊಬ್ಬರು ಖಾಸಗಿ ಆಸ್ಪತ್ರೆಯ ಆಸೆಗೆ ಬಿದ್ದು, ಅಲ್ಲಿ ಉಂಟಾದ ಅವಘಡಕ್ಕೆ ಉತ್ತರ ನೀಡಬೇಕಾಗಿ ಬಂದಿರುವುದು “ಹಾಗಾದರೆ ಈ ವೈದ್ಯರು ಸರ್ಕಾರಿ ವೈದ್ಯರೋ ಅಥವಾ ಖಾಸಗಿ ಆಸ್ಪತ್ರೆಯ ವೈದ್ಯರೋ” ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ.
ಮೃತ ಮಹಿಳೆ ಕುಟುಂಬಸ್ಥರ ಆರೋಪ
ನಗರದ ಖಾಸಗಿ ಆಸ್ಪತ್ರೆಯಲ್ಲಿ ತನ್ನ ಪತ್ನಿಯನ್ನು ಹೆರಿಗೆಗೆಂದು ದಾಖಲಿಸಿದಾಗ ಸಕಾಲಕ್ಕೆ ಅಲ್ಲಿನ ವೈದ್ಯರು ಬರದೇ, ನರ್ಸ್ಗಳೇ ಹೆರಿಗೆ ಮಾಡಿಸಿದ್ದಾರೆ. ಇದರಿಂದ ಪತ್ನಿ ಅಸ್ವಸ್ಥಗೊಂಡು ಅನಾರೋಗ್ಯಕ್ಕೀಡಾಗಿದ್ದಾರೆ. ವೈದ್ಯಕೀಯ ನಿರ್ಲಕ್ಷö್ಯದಿಂದ ತನ್ನ ಪತ್ನಿ ಮೃತಪಟ್ಟಿದ್ದಾಳೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಮಹಿಳೆಯ ಪತಿ ಹಾಗೂ ಕುಟುಂಬಸ್ಥರು ಘಟನೆಯ ಸಂಪೂರ್ಣ ವಿವರಣೆಯಿರುವ ದೂರನ್ನು 31-05-2024ರಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಈ ಘಟನೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ಇಲಾಖೆಯ ವೈದ್ಯರ ತಂಡ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯ ವೈದ್ಯ ಹಾಗೂ ಸಿಬ್ಬಂದಿಯ ವಿವರಣೆ ಪಡೆದಿರುವುದು ತಿಳಿದುಬಂದಿದೆ.
ವೈದ್ಯರ ಹಣದಾಹ, ಪೇಶೆಂಟ್‌ಗಳಿಗೆ ಸಂಕಷ್ಟ ?
ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಲೇ ಬೇನಾಮಿಯಾಗಿ ಖಾಸಗಿ ಆಸ್ಪತ್ರೆ ನಡೆಸುತ್ತಿರುವ ಕೆಲ ವೈದ್ಯರಿಗೆ ದಿನದ ಗಳಿಕೆ ಚಿಂತೆಯಾದರೆ, ಇತ್ತ ಪೇಶೆಂಟ್‌ಗಳ ಸಂಕಷ್ಟ.. ಪೇಚಾಟ ಅಷ್ಟಿಷ್ಟಲ್ಲ. ಇತ್ತ ಸರ್ಕಾರದ ವೇತನ, ಅತ್ತ ಖಾಸಗಿ ಆಸ್ಪತ್ರೆಯಲ್ಲಿ ಗಳಿಕೆ ಮಾಡುತ್ತಿರುವುದರಿಂದ, ಸರ್ಕಾರಿ ಆಸ್ಪತ್ರೆಯ ರೋಗಿಗಳ ಬಗ್ಗೆ ಸಂಪೂರ್ಣ ನಿರ್ಲಕ್ಷö್ಯ ತಾಳಿದ್ದಾರೆ ಎಂದು ಸಾರ್ವಜನಿಕರು ಬಹಿರಂಗವಾಗಿಯೇ ದೂರುತ್ತಾರೆ.
ಸರ್ಕಾರಿ ಆಸ್ಪತ್ರೆಯ ಕೆಲ ವೈದ್ಯರು ಖಾಸಗಿ ಆಸ್ಪತ್ರೆಯಲ್ಲಿ ಪ್ರತ್ಯಕ್ಷ !
ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಬಂದಾಗ ವೈದ್ಯರು ಇರುವುದಿಲ್ಲ, ಅಲ್ಲಿನ ಸಿಬ್ಬಂದಿಯವರನ್ನು ಕೇಳಿದರೆ ಗೊತ್ತಿಲ್ಲ ಎಂದು ಹೇಳುತ್ತಾರೆ. ಸರ್ಕಾರಿ ಆಸ್ಪತ್ರೆಯ ಕೆಲ ವೈದ್ಯರು ಬೇನಾಮಿಯಾಗಿ ನಡೆಸುವ ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಪ್ರತ್ಯಕ್ಷರಾಗುತ್ತಾರೆ. ಈ ಬಗ್ಗೆ ತಕರಾರು ತೆಗೆದರೆ ಡ್ಯೂಟಿ ಅವರ್ ಮುಗಿಸಿಕೊಂಡು ಬಂದಿರುವುದಾಗಿ ಹೇಳುತ್ತಾರೆ. ‘ಹಣದಾಹ’ ಹಾಗೂ ‘ಗಳಿಕೆ’ ವ್ಯಾಮೋಹಕ್ಕೆ ಒಳಗಾದ ಕೆಲ ವೈದ್ಯರು ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಇಂತಹ ವೈದ್ಯರಿಂದ ರೋಗಿಗಳಿಗೆ ಎಂತಹ ಗುಣಮಟ್ಟದ ಚಿಕಿತ್ಸೆ ದೊರೆಯಬಲ್ಲದು” ಎಂದು ಸಂಘಟನೆಯ ಮುಖ್ಯಸ್ಥರೊಬ್ಬರು ವಿಶ್ಲೇಷಿಸುತ್ತಾರೆ.
“ಇವ್ರಿಗೆ ಹೇಳೋರು ಕೇಳೋರು ಯಾರ್ ಇಲ್ಲನ್ರಿ”
“ ಪ್ರೈವೇಟು, ಸರ್ಕಾರಿ ಆಸ್ಪತ್ರೆ ಎರ‍್ಡು ಕಡೆ ಕೆಲ್ಸಾ ಮಾಡಾಕೋಗಿ ಜನಸಾಮಾನ್ಯರ ಜೀವಾ ತಿಂತಾರ‍್ರೀ. ಅಷ್ಟು ರೊಕ್ಕ ದುಡಿಬೇಕನಂಗಿದ್ರ ಪ್ರೈವೇಟು ದವಾಖಾನಿ ಮಾಡಿ ನಡೆಸಿಕೆಂತ ಕುಂದ್ರರ್ಲಿ. ಎರ‍್ಡು ಕಡೆ ಸೀರಿಯಸ್ ಫೇಶೆಂಟ್ ಬಂದಾಗ ಏನ್ ಮಾಡ್ತಾರ ಇವ್ರು. ಅಂಗಾದ್ರ ಸರ್ಕಾರಿ ಆಸ್ಪತ್ರೆ ಬಿಟ್ಟು, ತಮ್ಮ ಖಾಸಗಿ ದವಾಖಾನಿಗೆ ಹೋಗ್ತಾರನು. ಹೀಂಗಾಗಿ ಬಡವರು ಸರ್ಕಾರಿ ಆಸ್ಪತ್ರೆಗೆ ಹೋಗ್ಲಾರದಂಗ ಆಗೇತಿ. ಇನ್ನೂ ಖಾಸಗಿ ಆಸ್ಪತ್ರೆಗ ಹೋದವರದ್ದೂ ಇದೇ ಪರಿಸ್ಥಿತಿ ಅಂದ್ರ ಹೆಂಗ್ರಿ. ಇವ್ರಿಗೆ ಹೇಳೋರು ಕೇಳೋರು ಯಾರ್ ಇಲ್ಲನ್ರಿ” ಎಂದು ನಗರದ ಸಾರ್ವಜನಿಕರೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾರೆ.