ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಅಕ್ಟೋಬರ್ 22
ತಾಲೂಕಿನ ಗೊರೇಬಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆ ಅಕ್ಷರಶಃ ಪುಂಡರ ಹಾವಳಿಗೆ ನಲುಗಿ ಹೋಗಿದ್ದು, ಶಾಲಾ ಆವರಣ ಕುಡುಕರಿಗೆ, ದುಷ್ಕರ್ಮಿಗಳಿಗೆ ಖಾಸಗಿ ಡಾಭಾದಂತಾಗಿದೆ.
ಇತ್ತೀಚೆಗೆ ಯಾರೂ ಇಲ್ಲದ ಸಂದರ್ಭದಲ್ಲಿ ಶಾಲಾ ಕೊಠಡಿಗಳ ಬಾಗಿಲು ಮುರಿದು ಒಳನುಗ್ಗಿದ ಕಿಡಿಗೇಡಿಗಳು ಪುಸ್ತಕಗಳನ್ನು ಚೆಲ್ಲಾಪಿಲ್ಲಿ ಎಸೆದು, ಕೊಠಡಿಯ ವಿದ್ಯುತ್ ಸಾಮಗ್ರಿಗಳನ್ನು ಕಿತ್ತುಹಾಕಿ, ಟೇಬಲ್, ಬೆಂಚು, ಕುರ್ಚಿಗಳನ್ನು ಮುರಿದು ಹೋಗಿದ್ದಾರೆ. ಅಲ್ಲದೇ ಕುಡಿಯುವ ನೀರು ಸಂಗ್ರಹಿಸುವ ಹೌಜ್, ಪೈಪ್ಲೈನ್, ನಳಗಳನ್ನು ಮುರಿದು ಹಾಕಿದ್ದಾರೆ. ಎಲ್ಲೆಂದರಲ್ಲಿ ಮನಸೋಇಚ್ಛೆ ಗಲೀಜು ಮಾಡಿದ್ದು, ವಿದ್ಯಾರ್ಥಿಗಳು ಮುಜುಗರ ಅನುಭವಿಸುತ್ತಿದ್ದಾರೆ.
ಶಾಲಾ ಕೊಠಡಿಯಲ್ಲಿ ಮಲ, ಮೂತ್ರ ವಿಸರ್ಜನೆ
ಶಾಲೆಯ ಅವಧಿ ಮುಗಿದ ನಂತರ ಯಾರೋ ದುಷ್ಕರ್ಮಿಗಳು ದುರುದ್ದೇಶದಿಂದ ದಿನವೂ ಶಾಲಾ ಕೊಠಡಿಯ ಮುಂದೆ ಮಲ, ಮೂತ್ರ ವಿಸರ್ಜಿಸುವುದು, ಗುಟ್ಕಾ ತಿಂದು ಉಗುಳುತ್ತಿದ್ದಾರೆ. ಬೆಳಿಗ್ಗೆ ಶಾಲೆಗೆ ಬರುವ ವಿದ್ಯಾರ್ಥಿಗಳು ಮುಜುಗರ ಅನುಭವಿಸುತ್ತ ಸ್ವಚ್ಛಗೊಳಿಸುವುದೇ ಕೆಲಸವಾಗಿದೆ. ಇದರಿಂದ ಮಕ್ಕಳ ಅಭ್ಯಾಸಕ್ಕೆ ಸಮಸ್ಯೆಯಾಗುತ್ತಿದೆ ಎಂದು ಪಾಲಕರೊಬ್ಬರು ದೂರಿದ್ದಾರೆ.
ಡಾಭಾದಂತಾದ ಶಾಲಾ ಆವರಣ
ಗೊರೇಬಾಳ ಸರ್ಕಾರಿ ಮಾದರಿ ಶಾಲೆ ದುಷ್ಕರ್ಮಿಗಳಿಗೆ ಒಂದು ರೀತಿಯಲ್ಲಿ ಡಾಭಾದಂತಾಗಿದ್ದು, ಶಾಲೆಯ ಅವಧಿ ಮುಗಿಯುವುದೇ ತಡ, ಮದ್ಯದ ಬಾಟಲಿಗಳನ್ನು ತಂದು ಕುಡಿದು ಆವರದಲ್ಲಿ ಎಸೆಯುತ್ತಾರೆ. ಸಂಜೆಯಿAದ ರಾತ್ರಿ 10 ಗಂಟೆಯವರೆಗೂ ಗುಂಪು ಗುಂಪಾಗಿ ಬಂದು ಪಾರ್ಟಿ ಮಾಡಿ, ಶಾಲೆಗೆ ವಿದ್ಯಾರ್ಥಿಗಳು ಕಲಿಯಲು ಬರುತ್ತಾರೆ ಎಂಬ ಕನಿಷ್ಠ ಜ್ಞಾನವಿಲ್ಲದಂತೆ ತ್ಯಾಜ್ಯವನ್ನು ಎಸೆದು ಹೋಗುತ್ತಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ.
‘ಗ್ರಾಮೀಣ ಠಾಣೆ ಪೊಲೀಸರಿಗೆ ಹೇಳಿದ್ರೂ ಪ್ರಯೋಜನವಾಗಿಲ್ಲ’
“ನಮ್ಮ ಊರಿಗೆ ಶಾಲೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಶಾಲೆಯ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಕೊಠಡಿ ಮುರಿದು ಸಾಮಗ್ರಿಗಳಿಗೆ ಪದೇ ಪದೆ ಹಾನಿ ಮಾಡಲಾಗುತ್ತಿದೆ. ಶಾಲಾ ವಾತವರಣಕ್ಕೆ ದಿನವೂ ಧಕ್ಕೆ ತರಲಾಗುತ್ತಿದೆ. ಶಾಲೆಗೆ ಬಂದು ಪರಿಶೀಲಿಸಿ, ದುಷ್ಕರ್ಮಿಗಳನ್ನು ಪತ್ತೆಹಚ್ಚಿ ದುಷ್ಕರ್ಮಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಹಲವು ಬಾರಿ ಮೌಖಿಕವಾಗಿ ಒತ್ತಾಯಿಸಿದ್ದೇವೆ. ಮನವಿಯನ್ನೂ ಕೂಡ ಕೊಟ್ಟಿದ್ದೇವೆ. ಬರುತ್ತೇವೆ ಎಂದವರು ಇಲ್ಲಿಯವರೆಗೂ ಬಂದಿಲ್ಲ. ಹಾಗಾಗಿ ದುಷ್ಕರ್ಮಿಗಳ ಉಪಟಳ ನಿಂತಿಲ್ಲ. ಒಂದು ವೇಳೆ ಪರಿಸ್ಥಿತಿ ಹೀಗೆ ಮುಂದುವರಿದರೆ. ಠಾಣೆ ಇಲ್ಲವೇ ಬಿಇಒ ಕಾರ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಕರೆತಂದು ಹೋರಾಟ ನಡೆಸಲಾಗುವುದು” ಎಂದು ಗ್ರಾಮಸ್ಥರೊಬ್ಬರು ಹೇಳುತ್ತಾರೆ.