ಲೋಕಲ್ ನ್ಯೂಸ್: ಬಸವರಾಜ ಹಳ್ಳಿ
ನಮ್ಮ ಸಿಂಧನೂರು, ಜುಲೈ 8
ಕೇಂದ್ರ ಸರ್ಕಾರ ಜಾರಿಗೆ ತಂದಿರುವ 4 ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು ಸೇರಿದಂತೆ ವಿವಿಧ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಜುಲೈ 9ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಅಂಗವಾಗಿ ನಗರದಲ್ಲಿ ಕಾರ್ಮಿಕ ಸಂಘಟನೆಗಳಿಂದ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ಮಗಳವಾರ ಪ್ರಚಾರಾಂದೋಲನ ನಡೆಯಿತು.
ನವ ಗುಲಾಮಗಿರಿಗೆ ತಳ್ಳಲಿರುವ ಕೇಂದ್ರ ಸರ್ಕಾರದ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಕೂಡಲೇ ರದ್ದುಗೊಳಿಸಬೇಕು, ಕಾರ್ಮಿಕ ಕಾನೂನುಗಳಲ್ಲಿ ಕೆಲಸದ ಅವಧಿ ಹೆಚ್ಚಳ ಸೇರಿದಂತೆ ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ಮಾಡುತ್ತಿರುವುದನ್ನು ರಾಜ್ಯ ಸರ್ಕಾರ ಕೈಬಿಡಬೇಕು, ಜೀವನ ಯೋಗ್ಯ ಕನಿಷ್ಠ ವೇತನ ರೂ.36 ಸಾವಿರ ನಿಗದಿಗಾಗಿ, ಗುತ್ತಿಗೆ ಮುಂತಾದ ಖಾಯಂಯೇತರ ಕಾರ್ಮಿಕರ ಖಾಯಂಗೆ ಶಾಸನ ಶಾಸನ ರೂಪಿಸಬೇಕು, ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ, ಪಿಂಚಣಿ ಸೇರಿದಂತೆ ಕಲ್ಯಾಣ ಸೌಲಭ್ಯಗಳ ಜಾರಿಗೊಳಿಸಬೇಕು, ರೈತರ ಬೆಳೆಗೆ ಬೆಂಬಲ ಬೆಲೆ ಖಾತ್ರಿಗಾಗಿ, ಬಲವಂತದ ಭೂಸ್ವಾಧೀನ ನಿಲ್ಲಿಸುವುದು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಪ್ರಚಾರಾಂದೋಲನ ಸಂದರ್ಭದಲ್ಲಿ ಪ್ರಸ್ತಾಪಿಸಿ ಸರ್ಕಾರಗಳನ್ನು ಆಗ್ರಹಿಸಲಾಯಿತು.
ಸಿಪಿಐ, ಸಿಪಿಐ(ಎಂಎಲ್), ಸಿಪಿಐ(ಎಂಎಲ್) ಲಿಬರೇಶನ್, ಸಿಪಿಐ(ಎಂಎಲ್) ಮಾಸ್‌ಲೈನ್, ಸಿಪಿಐ(ಎಂಎಲ್) ರೆಡ್‌ಸ್ಟಾರ್, ಸಿಐಟಿಯು, ಎಐಟಿಯುಸಿ, ಎಐಸಿಸಿಟಿಯ, ಟಿಯುಸಿಐ, ಕೆಆರ್‌ಎಸ್, ಹಮಾಲರ ಸಂಘ ಸೇರಿದಂತೆ ಇನ್ನಿತರ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿ ಪ್ರಚಾರಾಂದೋಲನ ನಡೆಸಿದರು.
ಸೇವೆಗಳಲ್ಲಿ ವ್ಯತ್ಯಯ ಸಾಧ್ಯತೆ
ನಗರದಲ್ಲಿ ಮುಷ್ಕರ ಬೆಳಿಗ್ಗೆ 10 ಗಂಟೆಯಿAದ ಆರಂಭವಾಗಲಿದ್ದು, ಸಂಜೆ 4 ಗಂಟೆಯವರೆಗೂ ನಡೆಯಲಿದೆ ಎಂದು ತಿಳಿದುಬಂದಿದೆ. ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸುವುದರಿಂದ ನಾನಾ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ ಎಂದು ಅಂದಾಜಿಸಲಾಗಿದೆ. ಬ್ಯಾಂಕ್, ವಿಮಾ, ಅಂಚೆ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ಸರ್ಕಾರಿ, ಅರೆಸರ್ಕಾರಿ, ಸಂಘಟಿತ, ಅಸಂಘಟಿತ ಕಾರ್ಮಿಕ ಸಂಘಟನೆಗಳು ಜುಲೈ 9ರ ಮುಷ್ಕರಕ್ಕೆ ಬೆಂಬಲಿಸಿದ್ದು, ಹೀಗಾಗಿ ಪ್ರಮುಖ ನಗರಗಳಲ್ಲಿ ಹಲವು ಸೇವೆಗಳಲ್ಲಿ ವ್ಯತ್ಯವಾಗಲಿದೆ ಎಂದು ಹೇಳಲಾಗುತ್ತಿದೆ.