(ಸ್ಪೆಷಲ್ ಸ್ಟೋರಿ: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜುಲೈ 13
ನಗರದ ಗಂಗಾವತಿ ಮಾರ್ಗದ ಹಿರೋ ಶೋ ರೂಂನಿಂದ ಎ.ಕೆ.ಗೋಪಾಲನಗರದ ಕ್ರಾಸ್ವರೆಗಿನ ರಸ್ತೆ ಆಕ್ಸಿಡೆಂಟ್ ಸ್ಪಾಟ್ ಆಗಿದ್ದು, ದಿನವೂ ಒಂದಿಲ್ಲೊಂದು ಅಪಘಾತಗಳು ಇಲ್ಲಿ ಸಾಮಾನ್ಯವಾಗಿವೆ. ಈ ಮಾರ್ಗದಲ್ಲಿ ದ್ವಿಚಕ್ರವಾಹನ ಸವಾರರು, ದೊಡ್ಡ ವಾಹನಗಳು ಹಾಗೂ ಪಾದಚಾರಿಗಳು ರಸ್ತೆ ಕ್ರಾಸ್(ದಾಟುವುದು) ಮಾಡುವುದೇ ಕಠಿಣವಾಗಿದೆ ಎಂದು ಸಾರ್ವಜನಿಕರು ಮತ್ತು ವಾಹನ ಚಾಲಕರು ಆಕ್ಷೇಪ ಎತ್ತಿದ್ದಾರೆ.
ನಗರದಲ್ಲಿ ಗಂಗಾವತಿ ಮಾರ್ಗದ ರಸ್ತೆ ಅತ್ಯಂತ ವಾಹನ ದಟ್ಟಣೆ ಹಾಗೂ ಜನದಟ್ಟಣೆಯಿಂದ ಕೂಡಿದ ಪ್ರದೇಶವಾಗಿದೆ. ಈ ಮಾರ್ಗ ಸಿಟಿಯ ಆಟೋಮೊಬೈಲ್ಸ್ ಕ್ಷೇತ್ರದ ಹಬ್ ಆಗಿದ್ದು, ಸಾಲು ಸಾಲು ಟ್ರ್ಯಾಕ್ಟರ್ ಶೋರೊಂಗಳು, ದ್ವಿಚಕ್ರ ವಾಹನಗಳ ಶೋರೂಂಗಳು ಹಾಗೂ ಆಟೋಮೊಬೈಲ್ಸ್ ಅಂಗಡಿಗಳು ಇವೆ. ಹಾಗಾಗಿ ದಿನವೂ ವಾಹನ ಸಂಚಾರ ಜಾಸ್ತಿ. ವಾಹನ ದಟ್ಟಣೆ ಇರುವ ಮಾರ್ಗದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಪ್ರಾಧಿಕಾರಗಳು ಹಾಗೂ ಇಲಾಖೆಯವರು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಅಪಘಾತಗಳು ಹೆಚ್ಚುತ್ತಿರುವುದು ಕಂಡುಬಂದಿದೆ.
ಡಿವೈಡರ್ ಇಲ್ಲದಿರುವುದೇ ಅಪಘಾತಕ್ಕೆ ಕಾರಣ ?
ಗಾಂಧಿಸರ್ಕಲ್ನಿಂದ ಆರಂಭವಾಗುವ ಡಿವೈಡರ್ (ರಸ್ತೆ ವಿಭಜಕ) ಹಿರೋ ಶೋಂ ರೂಂವರೆಗೆ ನಿರ್ಮಿಸಲಾಗಿದೆ. ಆದರೆ, ಹಿರೋ ಶೋರೂಂನಿಂದ, ರಿಲಾಯನ್ಸ್ ಪೆಟ್ರೋಲ್ಬಂಕ್, ತ್ರಿಭುವನ್ ಹೋಂಡಾ ಶೋ ರೊಂ ಹಾಗೂ ಎ.ಕೆ.ಗೋಪಾಲನಗರ ಕ್ರಾಸ್ವರೆಗೆ ರಸ್ತೆ ಇಳಿಜಾರಿನಿಂದ ಕೂಡಿದ್ದು, ಇಲ್ಲಿ ಡಿವೈಡರ್ (ರಸ್ತೆ ವಿಭಜಕ) ಇಲ್ಲದ ಕಾರಣ ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸುತ್ತವೆ. ಹೀಗಾಗಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತವೆ. ಡಿವೈಡರ್ ಇನ್ನಷ್ಟು ವಿಸ್ತರಿಸದೇ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿರುವುದೇ ಅಪಘಾತಗಳಿಗೆ ಕಾರಣವಾಗಿದೆ. ವಾಹನ ಚಾಲನೆಗೆ ಮತ್ತು ಸುಗಮ ಸಂಚಾರಕ್ಕೆ ಅಡೆಯಾಗಿದೆ ಎಂಬುದು ಸಾರ್ವಜನಿಕರು ಹಾಗೂ ವಾಹನ ಚಾಲಕರ ಅಭಿಪ್ರಾಯವಾಗಿದೆ. ಇನ್ನೂ ಪಾದಚಾರಿಗಳು ದಿನವೂ ಈ ಮಾರ್ಗದಲ್ಲಿ ಜೀವ ಅಂಗೈಯಲ್ಲಿಡಿದು ರಸ್ತೆ ಕ್ರಾಸ್ ಮಾಡುತ್ತಾರೆ.
ಶೋರೂಂಗಳ ಬಳಿ ಗಿಜಗುಡುವ ಗಾಡಿಗಳು
ಗಂಗಾವತಿ ಮಾರ್ಗದ ರಸ್ತೆಯಲ್ಲಿ ವಾಹನ ಶೋರೊಂಗಳೇ ಜಾಸ್ತಿ ಇರುವುದರಿಂದ ಇಲ್ಲಿ ಪ್ರತಿದಿನವೂ ವಾಹನ ಸಂಚಾರ ದಟ್ಟಣೆ ಇರುತ್ತದೆ. ಆಯಾ ಶೋ ರೂಂಗಳಿಗೆ ಸವಾರರು ಸರ್ವಿಸ್, ರಿಪೇರಿ, ಹೊಸ ವಾಹನ ಖರೀದಿಗಾಗಿ ಗಾಡಿಗಳೊಂದಿಗೆ ಹೆಚ್ಚೆಚ್ಚು ಓಡಾಡುತ್ತಾರೆ. ಈ ನಡುವೆ ಮುಖ್ಯ ರಸ್ತೆಯಲ್ಲಿ ಡಿವೈಡರ್ ಇಲ್ಲದಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಇಳಿಜಾರು ರಸ್ತೆಯೂ ಅಪಘಾತಕ್ಕೆ ಇನ್ನಷ್ಟು ಇಂಬು ಕೊಟ್ಟಂತಾಗಿದೆ ಎಂಬುದು ಚಾಲಕರ ಅನಿಸಿಕೆಯಾಗಿದೆ.
ಸಾರಿಗೆ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿ, ಸಾವು
ಹಿರೋ ಶೋ ರೂಮ್ ಎದುರು ಡಿವೈಡರ್ಗೆ ರಾಯಚೂರು ಡಿಪೋದ ಕಲ್ಯಾಣ ಕರ್ನಾಟಕ ಸಾರಿಗೆ ಸ್ಲೀಪರ್ ಕೋಚ್ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ/ನಿರ್ವಾಹಕ ರಾಚಪ್ಪ (41) ಸ್ಥಳದಲ್ಲೇ ಮೃತಪಟ್ಟು ಪ್ರಯಾಣಿಕರು ಗಾಯಗೊಂಡ ಘಟನೆ ದಿನಾಂಕ: 12-07-2024ರಂದು ಬೆಳಿಗಿನ ಜಾವ 3 ಗಂಟೆ ಸುಮಾರು ನಡೆದಿರುವುದನ್ನು ಸ್ಮರಿಸಬಹುದಾಗಿದೆ.
ಅವೈಜ್ಞಾನಿಕ ರಸ್ತೆಯಿಂದ ಕಿರಿಕಿರಿ
ಅವೈಜ್ಞಾನಿಕ ರಸ್ತೆಯಿಂದಾಗಿ ಸಾರ್ವಜನಿಕರು, ವಾಹನ ಚಾಲಕರಿಗೆ ಒಂದೆಡೆ ಕಿರಿಕಿರಿಯಾದರೆ, ಅಪಘಾತಗಳು ಹಾಗೂ ವಾಹನ ದಟ್ಟಣೆ ನಿಯಂತ್ರಿಸಲು ಟ್ರಾಫಿಕ್ ಠಾಣೆ ಸಿಬ್ಬಂದಿ ಹೆಣಗಾಡುವಂತಾಗಿದೆ. ಯಾವುದೇ ಅಪಘಾತಗಳು ಸಂಭವಿಸಿದಾಗ ವಾಹನಗಳನ್ನು ಬೇರೆಡೆ ಸಾಗಿಸುವುದು, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಸವಾಲು ಸಿಬ್ಬಂದಿಗೆ ಎದುರಾಗುತ್ತಿದೆ. ಡಿವೈಡರ್ ವಿಸ್ತರಣೆಯಾಗದ ಹೊರತು ಈ ಮಾರ್ಗದಲ್ಲಿ ಅಪಘಾತ ಕಡಿವಾಣ ಹಾಕಲು ಸಾಧ್ಯವಿಲ್ಲ ಎನ್ನುವುದು ಸವಾರರ ಮಾತಾಗಿದೆ.