(ಸ್ಪೆಷಲ್ ನ್ಯೂಸ್: ಬಸವರಾಜ ಹಳ್ಳಿ)
ನಮ್ಮ ಸಿಂಧನೂರು, ಜೂನ್ 20
ನಾಲ್ಕೆಜ್ಜೆಗೊಂದು ತಗ್ಗು, ದಿನ್ನೆ. ಅಲ್ಲಲ್ಲಿ ಕಂದಕ, ಮೋರಿ ನೀರು ಹರಿದು ಬಿದ್ದ ಕೊರಕಲು, ಕುಸಿದ ನೆಲದ ಮೇಲೆ ಹಚ್ಚಿದ ಬೇಲಿ ! ಇದು ವಾರ್ಡ್ ನಂ.14 ಗಂಗಾನಗರದ ಸ್ಪೆಷಲ್ ರೋಡಿನ ಕಥೆ !! ಈ ರಸ್ತೆಯಲ್ಲಿ ವಾಹನ ಚಲಾಯಿಸುವವರ ಯಾರೂ ನೃತ್ಯ ಹೇಳಿಕೊಡದಿದ್ದರೂ ತನ್ನಿಂದ ತಾನೇ ತಕದಿಮಿತಕ್ಕೆ ಒಳಗಾಗುವುದು ಗ್ಯಾರಂಟಿ ಎಂದು ಸಾರ್ವಜನಿಕರು ವ್ಯಂಗ್ಯವಾಡುತ್ತಾರೆ.
ಗಂಗಾನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಜನಸಂದಣಿ ಇದ್ದು, ಸಣ್ಣ ಕಾಲುವೆ ಪಕ್ಕದ ರಸ್ತೆಯೇ ಸಾವಿರಾರು ಜನರಿಗೆ ಸಂಪರ್ಕ ಕೊಂಡಿಯಾಗಿದೆ. ಈ ಮಾರ್ಗದಲ್ಲಿ ದಿನವೂ ಸಾವಿರಾರು ದ್ವಿಚಕ್ರ ವಾಹನಗಳು, ಶಾಲಾ ವಾಹನಗಳು, ಆಟೋಗಳು ಸಂಚರಿಸುತ್ತವೆ. ಆದರೆ ರಸ್ತೆ ಅಧ್ವಾನ ಸ್ಥಿತಿಗೆ ತಲುಪಿರುವುದರಿಂದ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯವಾಗಿದ್ದು, ವಿಪರೀತ ಧೂಳಿನಿಂದಾಗಿ ಈ ಏರಿಯಾದಲ್ಲಿ ಹಲವು ಜನರು ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
“ಈ ರೋಡಿನ್ಯಾಗ ಮಕ್ಕಳನ್ನ ಶಾಲಿಗೆ ಕಳಸ್ಬೇಕು ಅಂದ್ರ ಅಂಜಿಕ ಬರ್ತೈತಿ”
“ಎಲ್ಲಾ ಎಂಪಿ, ಎಮ್ಮೆಲ್ಲೇರು ಆದ್ರು, ಕೌನ್ಸಲರ‍್ರು ಆದ್ರು, ನಮ್ಮ ರೋಡು ಮಾತ್ರ ಹೆಂಗಿದ್ದ ರೋಡು ಅಂಗೈತ್ರಿ. ಎಲ್ರಿಗೂ ಹೇಳಿ ಹೇಳಿ ನಮ್ಮ ಸಾಕಾಗಿ ಹೋಗೈತಿ. ಮಳಿ ಬಂದ್ರ ಅದರ ಫಜೀತಿ ಬೇಡ. ಇದಾ ರೋಡಿನ್ಯಾಗ ಮಕ್ಕಳನ್ನ ಶಾಲಿಗೆ ಕಳಸ್ಬೇಕು, ವಾಪಸ್ಸು ಕರಕಂಡು ಬರ‍್ಬೇಕು. ಇನ್ನ ದವಖಾನೀಗೆ ಆಟೋದಾಗ ಹೋಗ್ಬೇಕಂದ್ರ ತ್ರಾಸ್ ಆಗೈತಿ. ಗಾಳಿ ಬುಟ್ರ ಧೂಳು ಅಂಬೋದು ಅಂಗ ಮಕಕ್ಕ ಬಡಿತೈತಿ” ಎಂದು ಗಂಗಾನಗರದ ನಿವಾಸಿಯೊಬ್ಬರು ‘ನಮ್ಮ ಸಿಂಧನೂರು ವೆಬ್ ನ್ಯೂಸ್’ನ ಪ್ರತಿನಿಧಿಯ ಮುಂದೆ ತಮ್ಮ ದೈನಂದಿನ ಗೋಳಿನ ಕಥೆಯನ್ನು ಮುಂದಿಟ್ಟರು.
”ದಾರಿ ಅಂಬೋದು ಕೆಮ್ಮಣ್ಣು ಗುಂಡಿ ಆಗೈತಿ”
“ಇವತ್ತ ಮಾಡ್ತೀವಿ, ನಾಳೆ ಮಾಡ್ತೀವಿ, ಅವ್ರು ತಡೆ ಹಾಕ್ಯಾರ, ಇವ್ರು ತಡೆ ಒಡ್ಡ್ಯಾರ , ಫಂಡ್ ಬಂದಿಲ್ಲ, ಎಲೆಕ್ಷನ್ ಬಂದಾವ, ಮಳಿ ಐತಿ, ದೊಡ್ಡ ಸಾಹೇಬರ್ನ್ ಕೇಳ್ಬಕು, ಅವ್ರು ಊರಾಗಿಲ್ಲ, ಇವ್ರು ಬೆಂಗಳೂರಿಗೆ ಹೋಗ್ಯಾರ, ಹಿಂಗ್ ನೂರೆಂಟು ಸುಳ್ಳು ಹೇಳಿಕೆಂತ ಕಾಲ ದಬ್ಬಾಕತ್ತ್ಯಾರ. ನಮ್ಮ ಮನಿಗುಳ ದಾರಿ ಅಂಬೋದು ಕೆಮ್ಮಣ್ಣು ಗುಂಡಿ ಆಗೈತಿ” ಎಂದು ಇನ್ನೊಬ್ಬ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.